ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ | ಸುಗಮ ಸಂಗೀತ ಪರಿಷತ್ ಪುನರುಜ್ಜೀವನಕ್ಕೆ ನಿರ್ಧಾರ

Published 8 ಜನವರಿ 2024, 16:50 IST
Last Updated 8 ಜನವರಿ 2024, 16:50 IST
ಅಕ್ಷರ ಗಾತ್ರ

ಚಾಮರಾಜನಗರ: ಕರ್ನಾಟಕ ಸುಗಮ ಪರಿಷತ್ ಜಿಲ್ಲಾ ಘಟಕವನ್ನು ಇನ್ನಷ್ಟು ಬಲಪಡಿಸುವುದು ಮತ್ತು ಸದಸ್ಯರನ್ನು ಸೇರ್ಪಡೆಗೊಳಿಸಲು ಅಭಿಯಾನ ನಡೆಸಲು ಪರಿಷತ್‌ನ ಪದಾಧಿಕಾರಿಗಳು ತೀರ್ಮಾನಿಸಿದ್ದಾರೆ. 

ಇತ್ತೀಚೆಗೆ ನಗರದ ರೋಟರಿ ಭವನದಲ್ಲಿ ಸಭೆ ಸೇರಿದ್ದ ಪದಾಧಿಕಾರಿಗಳು ಹಾಗೂ ಸದಸ್ಯರು ಪರಿಷತ್ತಿನ ಪುನರುಜ್ಜೀವನಗೊಳಿಸುವ ಸಂಬಂಧ ಚರ್ಚಿಸಿದ್ದಾರೆ. ಜಿಲ್ಲೆಯಲ್ಲಿ ಪರಿಷತ್ತನ್ನು ಸಕ್ರಿಯ ಗೊಳಿಸುವ ನಿಟ್ಟಿನಲ್ಲಿ ಹಲವರು ಸಲಹೆಗಳನ್ನು ನೀಡಿದ್ದಾರೆ. 

ಪರಿಷತ್ತಿನ ಮಾಜಿ ಅಧ್ಯಕ್ಷ ಅರುಣ್‌ಕುಮಾರ್ ಮಾತನಾಡಿ, ‘ಕೋವಿಡ್‌ಗೂ ಮುನ್ನ ಪರಿಷತ್ತಿನ ಅಡಿಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸಾಂಕ್ರಾಮಿಕ ರೋಗದಿಂದಾಗಿ ಎರಡು ವರ್ಷ ಕಾರ್ಯಕ್ರಮ ನಡೆಸಲು ಸಾಧ್ಯವಾಗಲಿಲ್ಲ. ಹಣಕಾಸಿನ ಕೊರತೆ, ಸಂಘಟನೆ ವೈಫಲ್ಯದಿಂದಾಗಿಯೂ ಚಟುವಟಿಕೆಗಳು ನಿಂತಿವೆ’ ಎಂದರು. 

ಸಾಹಿತಿ ಸೋಮಶೇಖರ ಬಿಸಲವಾಡಿ ಮಾತನಾಡಿ, ‘ಪರಿಷತ್ ಅನ್ನು ಸಂಘಟನಾತ್ಮಕವಾಗಿ ಬೆಳೆಸಬೇಕಾಗಿದೆ. ಇದಕ್ಕಾಗಿ ಕಾರ್ಯಕಾರಿ ಸಮಿತಿ ರಚನೆಯಾಗಬೇಕು, ನಾಯಕತ್ವ ಬೆಳೆಸುವ ಮನಃಸ್ಥಿತಿಯುಳ್ಳವರು ಪರಿಷತ್‌ಗೆ ಅಗತ್ಯವಿದೆ’ ಎಂದು ಸಲಹೆ ನೀಡಿದರು. 

ಜಿಲ್ಲಾ ಗೌರವಾಧ್ಯಕ್ಷ ಗಣೇಶ್ ದೀಕ್ಷಿತ್ ಮಾತನಾಡಿ, ‘ಚಾಮರಾಜನಗರದಲ್ಲಿ ಎಲ್ಲ ಬಗೆಯ ಕಲೆಗಳನ್ನು ಅಭಿನಯಿಸುವ ಕಲಾವಿದರಿದ್ದಾರೆ. ಅವರ ಕಲೆಗಳ ಪ್ರದರ್ಶನಕ್ಕೆ ಜಿಲ್ಲೆಯಲ್ಲಿ ಸುಗಮ ಪರಿಷತ್ ಪುನಶ್ಚೇತನಗೊಳಿಸಬೇಕಿದೆ. ಅದನ್ನು ಮುನ್ನಡೆಸಲು ಹೆಚ್ಚಿನ ಸದಸ್ಯರ ನೋಂದಾಯಿಸಬೇಕಿದೆ’ ಎಂದರು. 

ಪರಿಷತ್ ಜಿಲ್ಲಾಧ್ಯಕ್ಷ ಬಸವರಾಜು ಮಾತನಾಡಿ, ‘ಪರಿಷತ್ ಪುನಶ್ಚೇತನಕ್ಕೆ ಅಧಿಕೃತವಾಗಿ ಸದಸ್ಯತ್ವ ನೋಂದಣಿ ಕಾರ್ಯ ನಡೆಯಬೇಕು. ಇದಕ್ಕೆ ಎಲ್ಲರೂ ಸಹಕರಿಸಬೇಕು’ ಎಂದು ಮನವಿ ಮಾಡಿದರು. 

ಕಾರ್ಯದರ್ಶಿ ಎನ್.ನಟರಾಜು, ಖಜಾಂಚಿ ಎಸ್.ಪಿ.ಮನೋಜ್, ಜಾನಪದ ಕಲಾವಿದ ಸಿ.ಎಂ.ನರಸಿಂಹಮೂರ್ತಿ, ಮಾದಾಪುರ ರವಿಕುಮಾರ್, ಚೇತನಕಲಾವಾಹಿನಿ ಅಧ್ಯಕ್ಷ ರಾಜಪ್ಪ, ಕೆಂಪರಾಜು, ವೆಂಕಟೇಶ್, ದೊರೆಸ್ವಾಮಿ, ನಂಜರಾಜು ಇತರರು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT