ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಕಾರ್ಯ ಮುಂದುವರಿಸಲು ಗೆಲ್ಲಿಸಿ: ಬೋಸ್‌

ಹರವೆಯಲ್ಲಿ ಪ್ರಚಾರ: ಬಹುಮತದಿಂದ ಗೆಲ್ಲಿಸಲು ಗಣೇಶ್ ಪ್ರಸಾದ್ ಮನವಿ
Published 19 ಏಪ್ರಿಲ್ 2024, 7:18 IST
Last Updated 19 ಏಪ್ರಿಲ್ 2024, 7:18 IST
ಅಕ್ಷರ ಗಾತ್ರ

ಚಾಮರಾಜನಗರ: ಕ್ಷೇತ್ರದ ಅಭಿವೃದ್ದಿ ಹಾಗೂ ಕಾಂಗ್ರೆಸ್‌ನ ಜನಪರ ಗ್ಯಾರಂಟಿ ಯೋಜನೆಗಳು ಕೇಂದ್ರದಲ್ಲಿಯೂ ಅನುಷ್ಠಾನಗೊಳ್ಳಲು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಗುಂಡ್ಲುಪೇಟೆ ಕ್ಷೇತ್ರದ ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಗುರುವಾರ ಕರೆ ನೀಡಿದರು. 

ತಾಲ್ಲೂಕಿನ ಹರವೆಯಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಹತ್ತು ವರ್ಷಗಳಲ್ಲಿ ಬಿಜೆಪಿ ಸರ್ಕಾರ ಯಾವುದೇ ಅಭಿವೃದ್ದಿ ಕೆಲಸಗಳನ್ನು ಮಾಡಿಲ್ಲ. ಹೀಗಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮತದಾರರು ಸೋಲಿಸಿದರು. ಹರವೆ ಭಾಗದಲ್ಲಿ ಅಭೂತಪೂರ್ವ ಬೆಂಬಲ ನೀಡಿದ್ದೀರಿ. ನನಗೆ ನೀಡಿದಂತೆ ಈ ಬಾರಿಯೂ ನಮ್ಮ ಪಕ್ಷದ ಅಭ್ಯರ್ಥಿಯಾಗಿರುವ ಸುನಿಲ್ ಬೋಸ್ ಅವರನ್ನು ಗೆಲ್ಲಿಸಬೇಕು’ ಎಂದು ತಿಳಿಸಿದರು.

‘ಸುನಿಲ್ ಬೋಸ್ ಅವರನ್ನು ಗೆಲ್ಲಿಸಿದರೆ ನನಗೂ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಶಕ್ತಿ ಬರುತ್ತದೆ. ತಂದೆ  ಎಚ್.ಎಸ್.ಮಹದೇವಪ್ರಸಾದ್ ಅವರು ಕ್ಷೇತ್ರದ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿದ್ದರು. ಹರವೆ ಭಾಗದ 20 ಕೆರೆಗಳಿಗೆ ನೀರು ತುಂಬಿಸಲು ಅವರು ಶ್ರಮ ಒಟ್ಟಿದ್ದರು. ಯಡಿಯೂರಪ್ಪ ಕಾಲದಲ್ಲಿ ಮಂಜೂರು ಆಗಿದ್ದು ಬಿಟ್ಟರೆ, ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಕೆರೆಗಳಿಗೆ ನೀರು ತುಂಬಿಸಿದ್ದು ಕಾಂಗ್ರೆಸ್‌ ಸರ್ಕಾರ’ ಎಂದರು. 

ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕೈ ಬಲಪಡಿಸಲು ಕಾಂಗ್ರೆಸ್‌ಗೆ ಮತ ನೀಡಬೇಕು. ನಾನು 2008ರಿಂದಲೂ ರಾಜಕೀಯದಲ್ಲಿದ್ದು ಅವಕಾಶಕ್ಕಾಗಿ ಕಾಯುತ್ತಿದ್ದಂತೆ ಪಕ್ಷ ಈ ಬಾರಿ ಲೋಕಸಭೆಗೆ ಸ್ಪರ್ಧೆ ಮಾಡುವಂತೆ ಸೂಚನೆ ಕೊಟ್ಟಿದೆ. ದಿ. ಆರ್. ಧ್ರುವನಾರಾಯಣ ಅವರು ಈ ಭಾಗದವರಾಗಿದ್ದು, ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಎಚ್.ಎಸ್. ಮಹದೇವಪ್ರಸಾದ್, ಆರ್. ಧ್ರುವನಾರಯಣ್ ನಮಗೆ ಸ್ಪೂರ್ತಿಯಾಗಿದ್ದಾರೆ. ಅವರ ಅಭಿವೃದ್ದಿ ಕಾರ್ಯಗಳನ್ನು ಮುಂದುವರಿಸಲು ನನಗೊಂದು ಅವಕಾಶ ಕೊಡಿ’ ಎಂದು ಮನವಿ ಮಾಡಿದರು.

ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮಾಧ್ಯಮ ಸಂಯೋಜಕ ಕೆರೆಹಳ್ಳಿ ನವೀನ್ ಮಾತನಾಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ, ಚಾಮುಲ್ ನಿರ್ದೇಶಕ ಎಚ್.ಎಸ್. ನಂಜುಂಡಪ್ರಸಾದ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾಜತ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಬೊಮ್ಮಯ್ಯ, ಚನ್ನಪ್ಪ, ಮುಖಂಡರಾದ ಶಿವನಾಗಪ್ಪ, ಎಚ್.ಎಸ್.ನಂಜಪ್ಪ, ಮುಕ್ಕಡಹಳ್ಳಿ ರವಿಕುಮಾರ್, ಬೆಳ್ಳೇಗೌಡ, ರಾಜಶೇಖರ್, ನಾಗರತ್ನ, ರೇವಣ್ಣ, ನಟರಾಜು, ಕೆಂಪರಾಜು, ಮಧೂಸೂಧನ್, ಹಿರೇಬೇಗೂರು ಗುರುಸ್ವಾಮಿ ಇತರರು ಇದ್ದರು. 

ಮಗನ ಪರ ಮಹದೇವಪ್ಪ ಮತಯಾಚನೆ

ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರು ಗುರುವಾರ ಶಾಸಕ ಸಿ.ಪುಟ್ಟರಂಗಶೆಟ್ಟಿ ಹಾಗೂ ಮುಖಂಡರೊಂದಿಗೆ ಚಾಮರಾಜನಗರ ಸೇರಿದಂತೆ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ‌ತಮ್ಮ ಮಗ ಸುನಿಲ್‌ ಬೋಸ್‌ ಪರವಾಗಿ ಮತಯಾಚನೆ ಮಾಡಿದರು. ಬೆಳಿಗ್ಗೆ 9 ಗಂಟೆಗೆ ನಗರದ ರಾಮಸಮುದ್ರದಿಂದ ಆರಂಭಿಸಿದ ಪ್ರಚಾರ ರಾತ್ರಿ 9 ಗಂಟೆಗೆ ಹೆಗ್ಗೋಠಾರದಲ್ಲಿ ಮುಕ್ತಾಯಕಂಡಿತು.  ನಗರದ ರಾಮಸಮುದ್ರ ಅಂಬೇಡ್ಕರ್‌ ಬೀದಿಗಳಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ ಮಹದೇವಪ್ಪ ಕ್ಷೇತ್ರದ ಅಭಿವೃದ್ಧಿಗೆ ಸಂವಿಧಾನ ಉಳಿಗೆ ಕಾಂಗ್ರೆಸ್‌ ಬೆಂಬಲಿಸಬೇಕು ಎಂದು ಮನವಿ ಮಾಡಿದರು.  ಬಳಿಕ ದೊಡ್ಡರಾಯಪೇಟೆ ಆಲೂರು ಕಾಗಲವಾಡಿ ಜ್ಯೋತಿಗೌಡನಪುರ ನಲ್ಲೂರು ನಾಗವಳ್ಳಿ ಚಂದಕವಾಡಿ ದಡದಹಳ್ಳಿ ಸಿದ್ದಯ್ಯನಪುರ ಕೋಡಿಉಗನೆ ಅಮಚವಾಡಿಗಳಲ್ಲಿ ಪ್ರಚಾರ ನಡೆಸಿದರು.  ಕಾಂಗ್ರೆಸ್‌ ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್‌ ಮಾಜಿ ಸಂಸದ ಕಾಗಲವಾಡಿ ಶಿವಣ್ಣ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT