ಗುರುವಾರ , ಜೂನ್ 24, 2021
29 °C

ದಬ್ಬಾಳಿಕೆ ಮನಸ್ಥಿತಿ ನನ್ನದ್ದಲ್ಲ: ಪ್ರತಾಪ ಸಿಂಹಗೆ ಸುರೇಶ್‌ಕುಮಾರ್ ತಿರುಗೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ‘ದಬ್ಬಾಳಿಕೆಯ ಮನಸ್ಥಿತಿ ನನ್ನದ್ದಲ್ಲ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವರಿ ಸಚಿವ ಎಸ್.ಸುರೇಶ್‌ಕುಮಾರ್ ಸಂಸದ ಪ್ರತಾಪಸಿಂಹ ಅವರ ಟೀಕೆಗೆ ತಿರುಗೇಟು ನೀಡಿದ್ದಾರೆ.

‘ಮೈಸೂರು ಜಿಲ್ಲೆಗೆ ಅವಶ್ಯವಿರುವ ಆಮ್ಲಜನಕದ ಪ್ರಮಾಣವನ್ನು ಚಾಮರಾಜನಗರಕ್ಕೆ ಸಾಗಿಸುವ ಅವಶ್ಯಕತೆ ನನಗಿಲ್ಲ ಮತ್ತು ಆ ರೀತಿಯಲ್ಲಿ ಆಲೋಚಿಸುವ ಮನಸ್ಥಿತಿಯೂ ನನ್ನದಲ್ಲ’ ಎಂದಿದ್ದಾರೆ.

ಚಾಮರಾಜನಗರದಿಂದ ಬಂದಿದ್ದ ಖಾಲಿ ಟ್ಯಾಂಕರ್‌ಗಳಿಗೆ ಆಮ್ಲಜನಕ ತುಂಬಲು ಅವಶ್ಯವಿರುವ ಸಮಯಾವಕಾಶ, ಪ್ರಕ್ರಿಯೆಯ ಸ್ಥಿತಿಗತಿ, ಮುಂದಿನ ದಿನಗಳಲ್ಲಿ ಪರಿಪಾಲಿಸಬೇಕಾದ ಸಮಯಪಾಲನೆಯ ಕುರಿತಂತೆ ಸಂಬಂಧಿತರಿಗೆ ಮನವರಿಕೆ‌ ಮಾಡಿಕೊಡುವುದು ನನ್ನ ಉದ್ದೇಶವಾಗಿತ್ತು. ರಾಜ್ಯ ಸರ್ಕಾರದ ಸಚಿವನಾಗಿ ನನ್ನ ಜವಾಬ್ದಾರಿಯ ಅರಿವು ನನಗಿದೆ. ಅವೈಜ್ಞಾನಿಕವಾಗಿ ಆಲೋಚಿಸುವ‌, ಆವೇಶದಿಂದ ಪ್ರತಿಕ್ರಿಯಿಸುವ ರಾಜಕಾರಣ ನನ್ನದಲ್ಲ ಎಂದು ಹೇಳಿದ್ದಾರೆ. ವಸ್ತುಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡೇ ಸರ್ಕಾರವು ಕೆಲಸ ಮಾಡುತ್ತಿದ್ದು ಬಹುಜನರ ಹಿತದ ಆಶಯವೇ ಸರ್ಕಾರದ‌ ಮೊದಲ ಆದ್ಯತೆ ಆಗಿದೆ ಎಂದೂ ಸುರೇಶ್ ಕುಮಾರ್  ಹೇಳಿದ್ದಾರೆ.

ಮೈಸೂರಿನಲ್ಲಿರುವ ಪದಕಿ ಏರ್‌ ಪ್ರಾಡಕ್ಸ್ಟ್, ಸದರನ್‌ಗ್ಯಾಸ್, ಪೀಣ್ಯ ಏಜೆನ್ಸಿಗಳಿಗೆ ಈಚೆಗೆ ಖುದ್ದಾಗಿ ಭೇಟಿ ನೀಡಿದ್ದ ಸುರೇಶ್‌ಕುಮಾರ್ ಚಾಮರಾಜನಗರದಿಂದ ಬಂದಿದ್ದ ಖಾಲಿ ಆಮ್ಲಜನಕ ಸಿಲಿಂಡರ್‌ಗಳನ್ನು ತುಂಬುವ ಪ್ರಕ್ರಿಯೆಯನ್ನು ತಾವೇ ಸ್ವತಃ ನಿಂತು ಪರಿಶೀಲಿಸಿದರು. ಜತೆಗೆ, ಆಮ್ಲಜನಕದ ಸಿಲಿಂಡರ್‌ಗಳನ್ನು ವಾಹನಗಳಿಗೆ ತುಂಬಿಸಿ ಜಿಲ್ಲೆಗೆ ತೆರಳುವ ವ್ಯವಸ್ಥೆ ಮಾಡಿದ್ದರು. ಪ್ರತಿಬಾರಿಯೂ ಜಿಲ್ಲೆಯ ಕೋಟಾ ಸಮರ್ಪಕವಾಗಿ ಪೂರೈಕೆಯಾಗುತ್ತಿದೆಯೇ ಇಲ್ಲವೇ ಎಂಬ ಬಗ್ಗೆ ಮೂರೂ ಸಂಸ್ಥೆಗಳ ಪ್ರತಿನಿಧಿಗಳಿಂದ ಅದೇ ರಾತ್ರಿ ಸಭೆ‌ ನಡೆಸಿ ಖಚಿತಪಡಿಸಿಕೊಂಡಿದ್ದರು. ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ವಿಳಂಬಕ್ಕೆ ಅವಕಾಶ ನೀಡಬಾರದೆಂದು ತಾಕೀತು‌ ಮಾಡಿದ್ದರು. ಇವರ ಈ ಕಾರ್ಯಕ್ಕೆ ಜಿಲ್ಲೆಯಲ್ಲಿ ಭರಪೂರ ಮೆಚ್ಚುಗೆ ವ್ಯಕ್ತವಾಗಿತ್ತು.

ಇವರ ಈ ಕ್ರಮವನ್ನು ಮೈಸೂರು ಕೊಡಗು ಕ್ಷೇತ್ರದ ಸಂಸದ ಪ್ರತಾಪಸಿಂಹ ಅವರು ಜಿಲ್ಲೆಯ ಆಮ್ಲಜನಕದ ಕೋಟಾ ಪಡೆಯಲು ಸುರೇಶ್ ಕುಮಾರ್ ದಬ್ಬಾಳಿಕೆ ಮಾಡುತ್ತಿದ್ದಾರೆ ಆರೋಪಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು