ಮಂಗಳವಾರ, ಅಕ್ಟೋಬರ್ 27, 2020
28 °C
ಗಾಂಧೀಜಿ 150ನೇ ವರ್ಷದ ಜನ್ಮದಿನಾಚರಣೆ ಸಮಾರೋಪ

ಸ್ವಚ್ಛೋತ್ಸವ, ನಿತ್ಯೋತ್ಸವ ಮಾಸಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ರಾಷ್ಟ್ರಪಿತ ಮಹಾತ್ಮ ಗಾಂಧಿಜಿಯವರ 150ನೇ ಜನ್ಮ ದಿನಾಚರಣೆ ಸಮಾರೋಪದ ಗೌರವ ಸೂಚಕವಾಗಿ ಜಿಲ್ಲಾ ಪಂಚಾಯಿತಿಯು ಅಕ್ಟೋಬರ್‌ ತಿಂಗಳಲ್ಲಿ ಸ್ವಚ್ಛೋತ್ಸವ–ನಿತ್ಯೋತ್ಸವ ಮಾಸಾಚರಣೆಯನ್ನು ಹಮ್ಮಿಕೊಂಡಿದೆ.

ಜಿಲ್ಲಾ ಪಂಚಾಯಿತಿಯ ಸ್ವಚ್ಛ ಭಾರತ್ ಮಿಷನ್ (ಗ್ರಾ) ವತಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು,   ಜಿಲ್ಲೆಯ ಪ್ರತಿಯೊಂದು ಗ್ರಾಮವನ್ನು ಸ್ವಚ್ಛ, ಸುಂದರ, ಆರೋಗ್ಯಯುತ ಹಾಗೂ ತ್ಯಾಜ್ಯಮುಕ್ತವಾಗಿಸುವ ಉದ್ದೇಶ ಇದರ ಹಿಂದಿದೆ. 

ಅಕ್ಟೋಬರ್ 2ರಿಂದ 31ರವರೆಗೆ ಈ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಇದರ ಪ್ರಯುಕ್ತ ವಿಶೇಷವಾಗಿ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛ ಸಂಕೀರ್ಣವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.

‘ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ತ್ಯಾಜ್ಯ ನಿರ್ವಹಣೆಗಾಗಿ ನಿರ್ಮಿಸಲಾಗುವ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಸ್ವಚ್ಛ ಸಂಕೀರ್ಣವನ್ನು ವಿನ್ಯಾಸಗೊಳಿಸಲಾಗುವುದು. ಸ್ವಚ್ಛ ಸಂಕೀರ್ಣವು ಏಕರೂಪದ ಬಣ್ಣ, ಚಿಹ್ನೆ, ಸಂದೇಶ ಮತ್ತು ವಿನ್ಯಾಸವನ್ನೊಳಗೊಂಡಿರುತ್ತದೆ. ಸ್ವಚ್ಛ ಸಂಕೀರ್ಣವನ್ನು ಘನ ತ್ಯಾಜ್ಯ, ಇ-ತ್ಯಾಜ್ಯ, ಜೈವಿಕ ತ್ಯಾಜ್ಯ, ವೈದ್ಯಕೀಯ ತ್ಯಾಜ್ಯಗಳನ್ನು ಸಂಗ್ರಹಿಸಲು ಮತ್ತು ಸಂಸ್ಕರಿಸಲು ಮೀಸಲಾದ ಪ್ರದೇಶಗಳೊಂದಿಗೆ ಸ್ವಯಂ ಸುಸ್ಥಿರ ವ್ಯವಸ್ಥೆಯನ್ನೊಳಗೊಂಡ ಪರಿಸರ-ಉದ್ಯಾನದ ಅನುಭವ ನೀಡುವಂತೆ ವಿನ್ಯಾಸಗೊಳಿಸಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್‌ ಭೋಯರ್‌ ನಾರಾಯಣರಾವ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

45 ಘಟಕಗಳಿಗೆ ಒಪ್ಪಿಗೆ: ಜಿಲ್ಲೆಯಲ್ಲಿರುವ 130 ಗ್ರಾಮ ಪಂಚಾಯಿತಿಗಳ ಪೈಕಿ 45 ಗ್ರಾಮ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. ಚಾಮರಾಜನಗರ ತಾಲ್ಲೂಕಿನ ಪುಣಜನೂರು ಗ್ರಾಮ ಪಂಚಾಯಿತಿಯಲ್ಲಿ ಈಗಾಗಲೇ ತ್ಯಾಜ್ಯ ನಿರ್ವಹಣಾ ಘಟಕವನ್ನು ನಿರ್ಮಿಸಲಾಗಿದ್ದು, ಅಕ್ಟೋಬರ್ 3ರಂದು ತ್ಯಾಜ್ಯ ಘಟಕಕ್ಕೆ ಚಾಲನೆ ನೀಡಲಾಗುತ್ತದೆ.

ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯಿತಿಗಳ ಸಹಯೋಗದೊಂದಿಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಈ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಸ್ಥಾಪಿಸಲು ಕ್ರಮ ಕೈಗೊಂಡಿದ್ದು, ಜಿಲ್ಲೆಯಾದ್ಯಂತ ಏಕರೂಪದಲ್ಲಿ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ನಿರ್ಮಿಸುವ ಉದ್ದೇಶದಿಂದ ಅಕ್ಟೋಬರ್ 3ರಂದು ಘನತ್ಯಾಜ್ಯ ನಿರ್ವಹಣಾ ಘಟಕಗಳ ಏಕರೂಪದ ಬ್ರ್ಯಾಂಡಿಂಗ್ ಅನ್ನು ಲೋಕಾರ್ಪಣೆ ಮಾಡಲಾಗುತ್ತದೆ.

ತಿಂಗಳಪೂರ್ತಿ ಜಾಗೃತಿ ಕಾರ್ಯ‌ಕ್ರಮ

ಮಾಸಾಚರಣೆಯಲ್ಲಿ ಹಸಿ ಮತ್ತು ಒಣ ತ್ಯಾಜ್ಯ ವಿಂಗಡಣೆ, ತ್ಯಾಜ್ಯ ಸಂಗ್ರಹಣೆ ಪ್ರಕ್ರಿಯೆ ಕುರಿತು ಅರಿವು ಮೂಡಿಸುವ ಸಲುವಾಗಿ ಚರಂಡಿ, ಬೀದಿ, ಶಾಲೆ, ಅಂಗನವಾಡಿ ಶುಚಿಗೊಳಿಸುವ, ಪ್ರೌಢಶಾಲಾ ಮಕ್ಕಳಿಗೆ ಆನ್‌ಲೈನ್ ಮೂಲಕ ಪ್ರಬಂಧ ಸ್ಪರ್ಧೆ, ಕಿರುಚಿತ್ರಗಳ ಪ್ರದರ್ಶನ, ತ್ಯಾಜ್ಯ ಮತ್ತು ಶೌಚಾಲಯಗಳ ಬಳಕೆ ಕುರಿತು ಮನೆ ಮನೆ ಭೇಟಿ, ತಿಪ್ಪೆಗುಂಡಿ ನಿರ್ವಹಣೆ, ಹೊಲದಲ್ಲಿನ ಹಸಿಕಸವನ್ನು ಗೊಬ್ಬರವನ್ನಾಗಿಸುವ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಸಹಭಾಗಿತ್ವ ಅಗತ್ಯ: ಈ ಸ್ವಚ್ಛೋತ್ಸವ-ನಿತ್ಯೋತ್ಸವ ಮಾಸಾಚರಣೆಯ ಎಲ್ಲ ಚಟುವಟಿಕೆಗಳಲ್ಲಿ ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯವಿದ್ದು, ಆಯಾ ಗ್ರಾಮ ಪಂಚಾಯಿತಿಯೊಂದಿಗೆ ಸಹಕಾರ ನೀಡಿ ಮಾಸಾಚರಣೆಯನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು