ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡತನದ ಕಾರಣಕ್ಕೆ ಕನ್ನಡ ಉಳಿದಿದೆ: ಓಎಲ್‌ಎನ್‌

ಸ್ವಾಮಿ ಪೊನ್ನಾಚಿಯವರ ‘ದಾರಿ ತಪ್ಪಿಸುವ ಗಿಡ’ ‘ಕಾಡು ಹುಡುಗನ ಹಾಡುಪಾಡು’ ಪುಸ್ತಕ ಬಿಡುಗಡೆ
Published 3 ಮಾರ್ಚ್ 2024, 15:33 IST
Last Updated 3 ಮಾರ್ಚ್ 2024, 15:33 IST
ಅಕ್ಷರ ಗಾತ್ರ

ಚಾಮರಾಜನಗರ: ‘ಶಿಕ್ಷಣ ಪಡೆದವರು ಕನ್ನಡವನ್ನು ಬಿಟ್ಟೇ ಬಿಡಬೇಕು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಬಡತನ ಇರುವುದರಿಂದ ಕನ್ನಡ ಭಾಷೆ ಉಳಿದಿದೆ’ ಎಂದು ವಿಮರ್ಶಕ  ಓ.ಎಲ್‌.ನಾಗಭೂಣಸ್ವಾಮಿ ಭಾನುವಾರ ಮಾರ್ಮಿಕವಾಗಿ ಹೇಳಿದರು.  

ನಗರದ ವರನಟ ಡಾ.ರಾಜ್‌ಕುಮಾರ್‌ ರಂಗಮಂದಿರದಲ್ಲಿ ಸಾಹಿತಿ ಸ್ವಾಮಿ ಪೊನ್ನಾಚಿ ಅವರ ‘ದಾರಿ ತಪ್ಪಿಸುವ ಗಿಡ’ ಮತ್ತು ‘ಕಾಡು ಹುಡುಗನ ಹಾಡುಪಾಡು’ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. 

‘ಶಿಕ್ಷಣವು ಜನರನ್ನು ಕನ್ನಡದಿಂದ ದೂರ ಮಾಡುತ್ತಿದೆ. ತುಂಗಭದ್ರಾ ನದಿಯ ಮೇಲೆ ಮತ್ತು ಚಾಮರಾಜನಗರದಂತಹ ಗಡಿ ಭಾಗದಲ್ಲಿ ಕನ್ನಡ ಇನ್ನೂ ಇದೆ. ಇಲ್ಲೆಲ್ಲ ಓದಿದವರು ಕಡಿಮೆ ಇದ್ದಾರೆ. ಬಡತನ ಇದೆ. ಇಂಗ್ಲಿಷ್‌ ಶಿಕ್ಷಣ ಇನ್ನೂ ಕಾಲಿಟ್ಟಿಲ್ಲ. ಇಂಗ್ಲಿಷ್‌ ಮಾಧ್ಯಮದಲ್ಲಿ ಓದದಿದ್ದರೆ ಬದುಕಲು ಸಾಧ್ಯವೇ ಇಲ್ಲ ಎಂಬ ಭ್ರಮೆಯಲ್ಲಿ ಶಿಕ್ಷಣ ಪಡೆದವರಿದ್ದಾರೆ. ಜಗತ್ತಿನಲ್ಲಿ ಎಲ್ಲ ಕಡೆ ಇಂಗ್ಲಿಷ್‌ ಇಲ್ಲ. ಇಂಗ್ಲಿಷ್‌ ಅನ್ನ ಕೊಡುವುದಿಲ್ಲ. ಕೊಡುತ್ತದೆ ಎನ್ನುವುದು ಸುಳ್ಳು’ ಎಂದರು.

‘ಕನ್ನಡ ಉಳಿಯಬೇಕು ಎಂದರೆ ಕನ್ನಡ ಮೇಷ್ಟ್ರುಗಳು ಮನಸ್ಸು ಮಾಡಬೇಕು. ಈಗ ಕನ್ನಡ ಮೇಷ್ಟ್ರುಗಳೇ ಕನ್ನಡಕ್ಕೆ ಅಡ್ಡಗೋಡೆಯಾಗಿದ್ದಾರೆ. ಕನ್ನಡ ಪಾಠ ಮಾಡುವ ಮೇಷ್ಟ್ರುಗಳು ಮಕ್ಕಳಲ್ಲಿ ಓದುವ ಪ್ರೀತಿ ಬೆಳೆಸಿದರೆ ಸಾಕು, ಕನ್ನಡ ಅದ್ಭುತವಾಗಿ ಬೆಳೆಯುತ್ತದೆ’ ಎಂದು ನಾಗಭೂಷಣಸ್ವಾಮಿ ಪ್ರತಿಪಾದಿಸಿದರು. 

ಸಾಹಿತಿ, ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಮಾತನಾಡಿ, ‘ಅನುಭವವೇ ಕಥೆಗಳ ಮೂಲದ್ರವ್ಯ. ಹಾಗಾಗಿ, ಕಥೆಗಳಿಗೆ ಎಂದೂ ಸೋಲಿಲ್ಲ. ಸ್ವಾಮಿ ಪೊನ್ನಾಚಿಯವರ ಬರವಣಿಗೆಗಳಲ್ಲಿ ಅನುಭವಗಳೇ ತುಂಬಿವೆ. ಅವರು ಚೆನ್ನಾಗಿ ಅಭ್ಯಾಸ ಮಾಡುತ್ತಾರೆ. ತಣ್ಣಗೆ, ಆಕರ್ಷಣೀಯವಾಗಿ, ಸರಾಗವಾಗಿ ಬರೆಯುತ್ತಾರೆ’ ಎಂದು ಮೆಚ್ಚುಗೆ ಸೂಚಿಸಿದರು. 

‘ಈಗ ಕಥೆಗಳ ಕಾಲ. ಎಲ್ಲಿ ನೋಡಿದರೂ ಕಥೆಗಳೇ ಕಾಣುತ್ತಿವೆ. ಕಥಾ ಸ್ಪರ್ಧೆಗಳನ್ನು ನಡೆಸಲು ಪೈಪೋಟಿಯೇ ನಡೆಯುತ್ತಿವೆ. ಚಾಮರಾಜನಗರ ಜಿಲ್ಲೆ ಕಥೆಗಳ ಕಣಜ. ಮಂಟೇಸ್ವಾಮಿ, ಮಹದೇಶ್ವರರ ಮಹಾ ಕಾವ್ಯಗಳು ಇಲ್ಲಿನ ಕಥಾ ಚರಿತ್ರೆಯನ್ನು ಸಾರುತ್ತವೆ. ಹಾಗಾಗಿ, ಇಲ್ಲಿನ ಕಥೆಗಾರರಿಗೆ ಒಳ್ಳೆಯ ಭವಿಷ್ಯಗಳಿವೆ’ ಎಂದರು.

ಲೇಖಕ ಅಬ್ದುಲ್‌ ರಶೀದ್‌ ಮಾತನಾಡಿ, ‘ಕಥೆಗಾರರಿಗೆ ಜನಪ್ರಿಯತೆ, ಖ್ಯಾತ, ವಿಖ್ಯಾತ ಎಂಬ ವಿಶೇಷಣಗಳು ಅಪಾಯಕಾರಿ. ಇವು ಕಥೆಗಾರರನ್ನು ರಾಜಕಾರಣಿಯನ್ನಾಗಿ ಮಾಡುತ್ತವೆ. ಇವುಗಳಿಂದ ದೂರ ಇದ್ದಷ್ಟೂ ಉತ್ತಮ ಕಥೆಗಳ ರಚನೆ ಸಾಧ್ಯ’ ಎಂದರು. 

ಕವಿ ಆರೀಫ್‌ ರಾಜಾ ಮಾತನಾಡಿ, ‘ಕಥೆಗಳಿಗೆ ಚಲನಶೀಲತೆ ಸಿಕ್ಕರೆ ಜೀವಂತಿಕೆ ಸೃಷ್ಟಿಯಾಗುತ್ತದೆ. ಇಲ್ಲದಿದ್ದರೇ ಜನರ ಮನಸ್ಸಿಗೆ ತಾಕುವುದಿಲ್ಲ. ಕಥೆಯು ಮೂಲಭೂತವಾಗಿ ಚಲನೆಯಾಗಿರಬೇಕು. ಪುಸ್ತಕ ಲೋಕಾರ್ಪಣೆ ಎಂಬುದು ತಾಂತ್ರಿಕ ಕೆಲಸವಾಗುತ್ತದೆ. ವ್ಯವಹಾರದಲ್ಲಿ ಸೋಲುವ ವ್ಯಕ್ತಿಗೆ ಸೃಜನಶೀಲತೆ ಹೆಚ್ಚಿರುತ್ತದೆ’ ಎಂದರು. 

ರಂಗಕರ್ಮಿ ಕೆ.ವೆಂಕಟರಾಜು ಮಾತನಾಡಿ, ‘ಒಳ್ಳೆಯ ಲೇಖಕರಿಗೆ ಒಳ್ಳೆಯ ಪ್ರಕಾಶಕರು ಸಿಗುವುದು ಅಪರೂಪ. ಇವರ ಉದ್ದೇಶ ಪುಸ್ತಕಗಳನ್ನು ಗ್ರಂಥಾಲಯಗಳಿಗೆ ತಲುಪಿಸುವುದಾಗಿರುತ್ತದೆ. ಆದರೆ ಇಲ್ಲಿ ಓದುಗರಿಗೆ ಸಿಗುವ ಕೆಲಸ ಮಾಡುತ್ತಿದ್ದಾರೆ. ಇನ್ನು ಮಹತ್ತರವಾದ ಕೃತಿಗಳು ಸ್ವಾಮಿ ಪೊನ್ನಾಚಿಯವರಿಂದ ಬರಬೇಕು’ ಎಂದು ಆಶಿಸಿದರು. 

ಸಾಹಿತಿ ಹನೂರು ಚನ್ನಪ್ಪ ಅವರು ಎರಡೂ ಕೃತಿಗಳ ಬಗ್ಗೆ ಮಾತನಾಡಿದರು. ಪ್ರಕಾಶಕರಾದ ಮುದಿರಾಜ್‌, ಕೃಷ್ಣಚಂಗಡಿ ‍‍ಪಾಲ್ಗೊಂಡಿದ್ದರು. 

‘ಲೋಕ ಅರ್ಥವಾಗಲು ಕಥೆ ಬೇಕು’

‘ಪೊನ್ನಾಚಿ ಎಂಬ ಊರು ಇದೆ ಎಂದು ನನಗೆ ಗೊತ್ತಾಗಿದ್ದೇ ಸ್ವಾಮಿ ಪೊನ್ನಾಚಿಯವರ ಧೂಪದ ಕಥೆಗಳು ಕೃತಿಯಿಂದ. ಯಾರಿಗೆ ಊರು ಇದೆಯೋ ಅಂದರೆ ಹುಟ್ಟೂರಿನೊಂದಿಗೆ ಬೇರೂರಿದ ಸಂಬಂಧ ಹೊಂದಿದ್ದಾರೆಯೋ ಅವರು ಕಥೆಗಾರರಾಗುತ್ತಾರೆ. ಊರಿನ ಸಂಪರ್ಕ ಇಲ್ಲದ ನನ್ನಂತಹವರು ವಿಮರ್ಶಕರಾಗುತ್ತಾರೆ’ ಎಂದು ನಾಗಭೂಷಣಸ್ವಾಮಿ ಹಾಸ್ಯ ಚಟಾಕಿ ಹಾರಿಸಿದರು.  ‘ಕಥೆ ಎನ್ನುವುದು ಲೋಕವನ್ನು ಅರ್ಥಮಾಡಿಕೊಳ್ಳಲು ಇರುವ ವಿಧಾನ. ಚರಿತ್ರೆ ಎಂದರೆ ಕಥೆ. ಕಥೆ ಹೆಣೆಯದೇ ಬದುಕನ್ನು ಅರ್ಥಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ. ಕಥೆಗಾರ ತಾನು ನೋಡಿದ್ದನ್ನು ಮಾತ್ರ ಬರೆಯುವುದಿಲ್ಲ; ಅದರೊಳಗೆ ತಾನೂ ಪಾತ್ರವಾಗಿ ಲೋಕವನ್ನು ನೋಡುತ್ತಾನೆ. ಸ್ವಾಮಿ ಪೊನ್ನಾಚಿಯವರ ಬರವಣಿಗೆಯಲ್ಲಿ ಆ ಗುಣವಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT