ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ: ಯಮರೂಪಿ ಸ್ವಿಚ್‌ ಬೋರ್ಡ್‌, ವೈರ್‌ಗಳು

ಕೊಳ್ಳೇಗಾಲ; ನಿರ್ಹಹಣೆ ಕೊರತೆಯಿಂದ ಬಳಲಿದ ವಿದ್ಯುತ್‌ ಕಂಬಗಳು ಗಮನ ಹರಿಸದ ನಗರಸಭೆ
Last Updated 23 ಅಕ್ಟೋಬರ್ 2020, 20:30 IST
ಅಕ್ಷರ ಗಾತ್ರ

ಕೊಳ್ಳೇಗಾಲ: ನಗರದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಹಾಕಿರುವ ವಿದ್ಯುತ್ ಕಂಬಗಳು ಅವರಿಗೆಯಮರೂಪಿಯಾಗಿವೆ.

ಕೆಲವು ವಿದ್ಯುತ್‌ ಕಂಬಗಳಲ್ಲಿ ಅಳವಡಿಸಿರುವ ಬೀದಿ ದೀಪಗಳ ಸ್ವಿಚ್‌ ಬೋರ್ಡ್‌ಗಳು ಹಾಗೂ ವೈರ್‌ಗಳು ಹಾಳಾಗಿ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದರೂ, ಅಧಿಕಾರಿಗಳು ಗಮನ ಹರಿಸಿಲ್ಲ.

ನಗರದ ‌ಪ್ರಮುಖ ರಸ್ತೆ ಹಾಗೂ ಬಡಾವಣೆಗಳಲ್ಲಿ ಪಾದಚಾರಿ ಮಾರ್ಗಗಳ ಬಳಿಯಲ್ಲಿ‌ರುವ ವಿದ್ಯುತ್‌ ಕಂಬಗಳಲ್ಲಿ ಬೀದಿ ದೀಪಗಳ ಸ್ವಿಚ್‌ಗಳನ್ನು ಅಳವಡಿಸಲಾಗಿದೆ. ಬಹುತೇಕ ಕಡೆಗಳಲ್ಲಿ ನಿರ್ವಹಣೆ ಕೊರತೆಯಿಂದಾಗಿ ಸ್ವಿಚ್‌ಗಳು, ಬೋರ್ಡ್‌ಗಳು ಹಾಳಾಗಿದ್ದು, ವೈರ್‌ಗಳು ಹೊರಕ್ಕೆ ಬಂದಿವೆ. ಇವುಗಳು ಕೈಗೆಟುವಷ್ಟು ಎತ್ತರದಲ್ಲಿರುವುದರಿಂದ ಸದಾ ಅಪಾಯವನ್ನು ಆಹ್ವಾನಿಸುತ್ತಿವೆ.

ಕಂಬಗಳ ಬಳಿಯಲ್ಲಿ ನಡೆದುಕೊಂಡು ಹೋಗುವವರು ಅಕಸ್ಮಾತ್‌ ಆಗಿ ವೈರ್‌ಗಳನ್ನು ಮುಟ್ಟಿದರೆ ಜೀವಕ್ಕೆ ಕುತ್ತು ಬರುವುದು ಖಂಡಿತ. ಮಳೆ ಬರುತ್ತಿರುವ ಸಂದರ್ಭದಲ್ಲೂ ಅಪಾಯ ಕಟ್ಟಿಟ್ಟ ಬುತ್ತಿ.ಬೀದಿ ದೀಪಗಳ ಸ್ವಿಚ್‌ ಹಾಕುವವರು ಕೂಡ ಜೀವ ಭಯದಲ್ಲೇ ತಮ್ಮ ಕೆಲಸವನ್ನು ಮಾಡಬೇಕಾಗಿದೆ.

ವಿದ್ಯುತ್ ಬಿಲ್ ಪಾವತಿಸಲು ಎರಡು ದಿನ ತಡವಾದರೆ ಸಾಕು ವಿದ್ಯುತ್‍ನನ್ನು ಕಡಿತಗೊಳಿಸಿ ದಂಡ ಹಾಕುವ ಸೆಸ್ಕ್ ಹಾಗೂ ನಗರಸಭೆ ಅಧಿಕಾರಿಗಳು ನಾಗರಿಕರಿಗೆ ಅಪಾಯ ತರುವ ಈ ಸಮಸ್ಯೆ ಬಗೆಹರಿಸಲು ನಿರ್ಲಕ್ಷ್ಯವಹಿಸುತ್ತಾರೆ ಎಂದು ಸಾರ್ವಜನಿಕರ ಆರೋಪ.

‘ತೆರಿಗೆ ಸಂಗ್ರಹಿಸುವ ನಗರಸಭೆ ನಾಗರಿಕರ ಸುರಕ್ಷತೆಗೆ ಏಕೆ ಮಹತ್ವ ನೀಡುತ್ತಿಲ್ಲ? ಬೀದಿ ದೀಪ ಹಾಕಲು ವಿದ್ಯುತ್‌ ಕಂಬಗಳಲ್ಲಿ ಸ್ವಿಚ್ ಬೋರ್ಡ್ ಅಳವಡಿಸಲಾಗಿದೆ. ಪ್ರತಿನಿತ್ಯ ಸಂಜೆ ಸಿಬ್ಬಂದಿ ಸ್ವಿಚ್ ಹಾಕಿದರೆ ಮಾಡಿದರೆ ಮಾತ್ರ ದೀಪ ಉರಿಯುತ್ತದೆ. ಆದರೆ ಕೆಲವು ಬಡಾವಣೆಗಳಲ್ಲಿ ಸಿಬ್ಬಂದಿ ಬರುವುದಿಲ್ಲ. ಸ್ಥಳೀಯ ನಿವಾಸಿಗಳೇ ಸಂಜೆ ಮತ್ತು ಬೆಳಗ್ಗೆ ಸ್ವಿಚ್ ಹಾಕಬೇಕು, ತೆಗೆಯಬೇಕು. ಬೋರ್ಡ್‍ಗಳು ಹಾಳಾಗಿವೆ. ಕಂಬದ ಹೊರ ಭಾಗದಲ್ಲೇ ತಂತಿಗಳು ನೇತಾಡುತ್ತವೆ. ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶವಾದರೆ ಅಪಾಯ ಖಚಿತ’ ಎಂದು ಎಂದು ಆಗಸ್ಟಿನ್ ಕಾಲೋನಿಯ ನಿವಾಸಿ ಶರತ್‍ಜೇಂಡೆ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಎಲ್ಲೆಲ್ಲಿ ಸಮಸ್ಯೆ?:ಭೀಮನಗರ, ಶಿವಕುಮಾರ ಸ್ವಾಮಿ ಬಡಾವಣೆ, ವಾಸವಿ ಬಡಾವಣೆ, ದೇವಾಂಗ ಪೇಟೆ, ಡಾ.ರಾಜ್ ಕುಮಾರ್ ರಸ್ತೆ, ಜಿ.ಪಿಮಲ್ಲಪ್ಪಪುರಂ, ಆನಂದಜ್ಯೋತಿ ಕಾಲೋನಿ, ನಾಯಕರ ಬಡಾವಣೆ, ನೂರ್ ಮೊಹಲ್ಲಾ, ಆದರ್ಶ ನಗರ, ಆಗಸ್ವೀನ್ ಕಾಲೋನಿ, ಮಂಜುನಾಥ್ ನಗರ, ವಿದ್ಯಾನಗರ, ಹಳೆ ಕುರುಬರ ಬೀದಿ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಈ ಸಮಸ್ಯೆ ಇದೆ. ಅಸುರಕ್ಷಿತವಾಗಿರುವ ವಿದ್ಯುತ್ ಕಂಬದ ಬಳಿ ಎಚ್ಚರಿಕೆ ನಾಮಫಲಕ ಹಾಕಿಲ್ಲ.

‘ನಮ್ಮ ಬಡಾವಣೆಗೆ ಯಾವ ಸಿಬ್ಬಂದಿಯೂ ಬರುವುದಿಲ್ಲ. ನಾವೇ ಬೀದಿ ದೀಪದ ಸ್ವಿಚ್‍ ಹಾಕುತ್ತೇವೆ. ಸ್ವಿಚ್ ಬೋರ್ಡ್‌ ಹಾಳಾಗಿರುವುದರಿಂದ ಭಯವಾಗುತ್ತದೆ. ನಗರಸಭೆ ಅಧಿಕಾರಿಗಳು ತಕ್ಷಣ ಈ ಬಗ್ಗೆ ಗಮನ ಹರಿಸಬೇಕು’ ಎಂದುಶಿವಕುಮಾರ ಸ್ವಾಮಿ ಬಡಾವಣೆಯ ನಿವಾಸಿ ಮಹೇಶ್ವರಿ ಅವರು ಒತ್ತಾಯಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಗರಸಭೆ ಆಯುಕ್ತ ನಾಗಶೆಟ್ಟಿ ಅವರು, ‘ಬೀದಿ ದೀಪಗಳನ್ನು ಹಾಕುವುದಕ್ಕೆ ಸಿಬ್ಬಂದಿ ಇದ್ದಾರೆ. ಕೆಲವು ಕಡೆ ಕಂಬಗಳಿಗೆ ಒಂದು ಸ್ವಿಚ್ ಮಾತ್ರ ಹಾಕಲಾಗಿದೆ. ಆ ಕಾರಣ ಬಡಾವಣೆಯವರೇ ಹಾಕುತ್ತಾರೆ. ಸ್ವಿಚ್, ಬೋರ್ಡ್‌ಗಳು ಹಾಳಾಗಿರುವ ಕಡೆ ಹೊಸ ಸ್ವಿಚ್‌ ಹಾಕಲಾಗುವುದು. ಅಸುರಕ್ಷಿತವಾಗಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT