ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಸಿದ ಬೆಲ್ಲದ ಧಾರಣಿ: ಕಬ್ಬು ಬೆಳೆಗಾರರಿಗೆ ಸಂಕಷ್ಟ

ಕ್ವಿಂಟಲ್‌ ಅಚ್ಚು ಬೆಲ್ಲಕ್ಕೆ ₹ 1500 ಲುಕ್ಸಾನು: ರೈತರ ಗೋಳು
Last Updated 6 ಮೇ 2021, 4:58 IST
ಅಕ್ಷರ ಗಾತ್ರ

ಯಳಂದೂರು: ಮಾರುಕಟ್ಟೆಯಲ್ಲಿ ಬುಧವಾರ ಬಿಳಿ ಬೆಲ್ಲದ ಧಾರಣೆ ಕುಸಿತಗೊಂಡ ಕಾರಣ, ಕೃಷಿಕರು ಸಾವಿರಾರು ರೂಪಾಯಿ ನಷ್ಟ ಅನುಭವಿಸಿದರು. ಬೆಳೆಗೆ ಖರ್ಚು ಮಾಡಿದ ಹಣಕ್ಕಿಂತಲೂ ಬೆಲ್ಲದ ಬೆಲೆ ತಗ್ಗಿರುವುದರಿಂದ ಕಬ್ಬು ನುರಿಸುವುದನ್ನು ಕೃಷಿಕರು ಮುಂದೂಡಿದರು.

ಪ್ರತಿವಾರ ಜಿಲ್ಲಾ ಕೇಂದ್ರದ ಎಪಿಎಂಸಿ ಮಾರುಕಟ್ಟೆಯಲ್ಲಿ ಬೆಲ್ಲ ಹರಾಜು ನಡೆಯುತ್ತದೆ. ಕೆಲ ವಾರಗಳಿಂದ 1 ಕ್ವಿಂಟಲ್ ಬೆಲ್ಲಕ್ಕೆ ₹ 5 ಸಾವಿರಕ್ಕೂ ಹೆಚ್ಚಿನ ದರದಲ್ಲಿ ಬೆಲ್ಲ ಮಾರಾಟವಾಗಿದೆ. ಬೆಲೆ ಏರಿಕೆ ಆಗುವುದನ್ನು ಮನಗಂಡ ಬೆಳೆಗಾರರು 9 ತಿಂಗಳ ಕಬ್ಬನ್ನು ಕಡಿದು, ಬೆಲ್ಲ ಉತ್ಪಾದನೆಗೆ ಮುಂದಾಗಿದ್ದರು. ಆದರೆ, ಕೋವಿಡ್-19 ಸೋಂಕಿನ ಹೆಚ್ಚಳದಿಂದ ಕೊಳ್ಳುವವರು ಹೆಚ್ಚಿನ ಸಂಖ್ಯೆಯಲ್ಲಿ ಬಾರದ್ದರಿಂದ ಬೆಲೆ ಕುಸಿಯಿತು. ಸ್ಥಳೀಯ ವ್ಯಾಪಾರಿಗಳಷ್ಟೇ ಬೆಲ್ಲಕ್ಕೆ ಬೇಡಿಕೆ ಸಲ್ಲಿಸಬೇಕಾಯಿತು. ಹೀಗಾಗಿ ಬೆಲ್ಲಕ್ಕೆ ಬೆಲೆ ಮತ್ತು ಬೇಡಿಕೆ ದಿಢೀರ್ ಕುಸಿಯಿತು ಎನ್ನುತ್ತಾರೆ ರೈತರು.

‘ಬೇಸಿಗೆಯಲ್ಲಿ ಆಲೆಮನೆಗೆ ಬೇಡಿಕೆ ಹೆಚ್ಚು. ಬಿಸಿಲು ಹೆಚ್ಚಾಗಿ ಇರುವುದರಿಂದ ಕಬ್ಬಿನ ಸಿಪ್ಪೆ (ಇಂಧನ) ಬೇಗ ಒಣಗಿ, ಉತ್ಪಾದನೆಗೆ ನೆರವಾಗುತ್ತದೆ. ಮುಂಗಾರಿಗೂ ಮೊದಲು ಕಬ್ಬು ಕಟಾವು ಮಾಡಿ, ಹೊಲದ ನಿರ್ವಹಣೆಗೆ ಹೆಚ್ಚು ಸಮಯ ದೊರೆಯುತ್ತದೆ. ಹೀಗಾಗಿ, ಕಡಿಮೆ ಬೆಳವಣಿಗೆ ಹೊಂದಿದ ಕಬ್ಬನ್ನು ಕಡಿದು, ಬೆಲೆ ಏರಿದಾಗ ಮಾರಾಟ ಮಾಡಲಾಗುತ್ತದೆ. ಆದರೆ, ಈ ವಾರ ನಿರೀಕ್ಷಿಸಿದಷ್ಟು ಬೆಲೆ ಹೆಚ್ಚಾಗದ ಕಾರಣ ಕಬ್ಬು ಬೆಳೆಗಾರರು ನಷ್ಟ ಅನುಭವಿಸುವಂತೆ ಆಗಿದೆ’ ಎಂದು ರೈತ ಗೂಳಿಪುರ ಗ್ರಾಮದ ಅಂಗಡಿ ಮಹದೇವ ನಾಯಕ ಹೇಳಿದರು.

‘ಉತ್ತಮ ದರ್ಜೆಯ ಬೆಲ್ಲವನ್ನು ಚಾಮರಾಜನಗರ ಮಾರುಕಟ್ಟೆಗೆ ಸಾಗಣೆ ಮಾಡಿದ್ದೆ. ಕ್ವಿಂಟಲ್‌ಗೆ ₹ 3,300ಕ್ಕೆ (ಅಂದಾಜು ಪ್ರತಿ ಸಾವಿರ ಅಚ್ಚ ಬೆಲ್ಲಕ್ಕೆ ) ಬೆಲೆ ನಿಗದಿಯಾಯಿತು. ಇದರಿಂದ ಆಲೆಮನೆ ಖರ್ಚು, ಉತ್ಪಾದಕತೆಯ ವೆಚ್ಚ ಒಟ್ಟಾಗಿ ಸೇರಿಸಿದರೆ, ಸಾವಿರಾರು ರೂಪಾಯಿ ವರಮಾನ ಕೈಬಿಟ್ಟು ಹೋಗಿದೆ’ ಎಂದು ರೈತರು ಅಲವತ್ತುಕೊಂಡರು.

‘ಹಿಡುವಳಿದಾರರಿಗೆ ಬೆಲ್ಲದಿಂದ ತುಸು ಆದಾಯ ತಂದುಕೊಟ್ಟರೆ, ಶ್ರಮಿಕರಿಗೂ ಕೂಲಿ ಲಭಿಸುತ್ತದೆ. ಧಾರಣೆ ಕುಸಿದರೆ ದೈನಂದಿನ ಕೆಲಸವೂ ಕೈತಪ್ಪುತ್ತದೆ. ಹಾಗಾಗಿ, ಬೆಳೆಗಾರರಿಗೆ ಸರ್ಕಾರ ನೆರವು ಒದಗಿಸಬೇಕು’ ಎಂದು ಶ್ರಮಿಕ ನಂಜಯ್ಯ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT