ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಇಂದಿರಾ ಕ್ಯಾಂಟೀನ್‌ ದಿಢೀರ್‌ ಬಂದ್‌

ವೇತನ ಪಾವತಿ ಮಾಡದಿದ್ದುದರಿಂದ ಸಿಬ್ಬಂದಿ ಗೈರು, ಜನ ಸಾಮಾನ್ಯರಿಗೆ ತೊಂದರೆ
Last Updated 23 ನವೆಂಬರ್ 2022, 4:18 IST
ಅಕ್ಷರ ಗಾತ್ರ

ಚಾಮರಾಜನಗರ/ಕೊಳ್ಳೇಗಾಲ/ಯಳಂದೂರು: ಜಿಲ್ಲಾ ಕೇಂದ್ರ ಬಿಟ್ಟು, ಉಳಿದ ಮೂರು ತಾಲ್ಲೂಕು ಕೇಂದ್ರಗಳಲ್ಲಿನ ಇಂದಿರಾ ಕ್ಯಾಂಟೀನ್‌ ಎರಡು ದಿನಗಳಿಂದ ದಿಢೀರ್‌ ಆಗಿ ಮುಚ್ಚಿದ್ದು, ಕ್ಯಾಂಟೀನ್‌ ಬಳಸುತ್ತಿದ್ದ ಜನರು ತೊಂದರೆ ಅನುಭವಿಸಿದರು.

ಕೊಳ್ಳೇಗಾಲ, ಗುಂಡ್ಲುಪೇಟೆ ಹಾಗೂ ಯಳಂದೂರುಗಳಲ್ಲಿರುವ ಇಂದಿರಾ ಕ್ಯಾಂಟೀನ್‌ ಭಾನುವಾರದವರೆಗೂ ಕಾರ್ಯನಿರ್ವಹಿಸಿದ್ದವು. ಸೋಮವಾರ‌ದಿಂದ ಬಂದ್‌ ಆಗಿವೆ. ಚಾಮರಾಜನರದಲ್ಲಿರುವ ಕ್ಯಾಂಟೀನ್‌ ಕಾರ್ಯನಿರ್ವಹಿಸುತ್ತಿದೆ. ಅದೂ ಬಂದ್‌ ಆಗಲಿದೆ ಎಂದು ಅಲ್ಲಿನ ಸಿಬ್ಬಂದಿ ಹೇಳುತ್ತಿದ್ದಾರೆ.

ಸಿಬ್ಬಂದಿ ಗೈರು: 'ಟೆಂಡರ್‌ ಪಡೆದ ಚೆಫ್‌ಟಾಕ್‌ ಸಂಸ್ಥೆಯುಸಿಬ್ಬಂದಿಗೆ ವೇತನ ನೀಡದಿರುವುದರಿಂದ ಅವರು ಕರ್ತವ್ಯಕ್ಕೆ ಗೈರಾಗಿದ್ದಾರೆ. ಹಾಗಾಗಿ ಕ್ಯಾಂಟೀನ್‌ ಕಾರ್ಯನಿರ್ವಹಿಸಿಲ್ಲ’ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಹೇಳಿದ್ದಾರೆ.

ಸರ್ಕಾರ ಬಿಲ್‌ ಪಾವತಿ ಮಾಡದೇ ಇರುವುದರಿಂದ ಕ್ಯಾಂಟೀನ್‌ ಬಂದ್‌ ಮಾಡಲಾಗಿದೆ ಎಂದು ಟೆಂಡರ್‌ದಾರರು ಹೇಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಜಿಲ್ಲೆಯ ಅಧಿಕಾರಿಗಳು ಇದನ್ನು ನಿರಾಕರಿಸಿದ್ದಾರೆ.

ಮೂರೂ ಕ್ಯಾಂಟೀನ್‌ನ ಗೇಟುಗಳಿಗೆ ಬೀಗ ಹಾಕಲಾಗಿದ್ದು, ಬೆಳ‌ಗಿನ ತಿಂಡಿ ಮತ್ತು ಮಧ್ಯಾಹ್ನದ ಊಟಕ್ಕೆ ಕ್ಯಾಂಟೀನ್‌ ಅವಲಂಬಿಸಿದ್ದ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ನೌಕರರು, ಜನ ಸಾಮಾನ್ಯರು ಇತರ ಹೋಟೆಲ್‌ಗಳ ಮೊರೆ ಹೋಗಬೇಕಾಯಿತು.

ಕೊಳ್ಳೇಗಾಲದಲ್ಲಿ ದಿನಂಪ್ರತಿ 1,500 ಮಂದಿ, ಗುಂಡ್ಲುಪೇಟೆಯಲ್ಲಿ 900 ಹಾಗೂ ಯಳಂದೂರಿನಲ್ಲಿ 400 ಮಂದಿ ಇದರ ಪ್ರಯೋಜನ ಪಡೆಯುತ್ತಿದ್ದರು.

‘ಎರಡು ದಿನಗಳಿಂದ ಕ್ಯಾಂಟೀನ್ ಬಾಗಿಲು ತೆಗೆದಿಲ್ಲ. ಸಿಬ್ಬಂದಿ ಹಾಜರಾಗಿಲ್ಲ. ಕಡಿಮೆ ದರದಲ್ಲಿ ಉಪಾಹಾರ ಮತ್ತು ಊಟ ಪಡೆಯುತ್ತಿದ್ದ ಗ್ರಾಹಕರು ಕ್ಯಾಂಟೀನ್‌ಗೆ ಭೇಟಿ ನೀಡಿ ವಾಪಸ್ ಆಗುತ್ತಿದ್ದಾರೆ. ಕ್ಯಾಂಟೀನ್‌ ಮುಚ್ಚಿರುವುದರಿಂದ ಬಡವರು ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ’ ಎಂದು ಎಂದು ಯಳಂದೂರಿನ ಗ್ರಾಹಕ ಮಹೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಯಳಂದೂರು ಪಟ್ಟಣ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲೇಶ್‌ ಪ್ರತಿಕ್ರಿಯಿಸಿ, ‘ಸಿಬ್ಬಂದಿಗೆ ಸಮರ್ಪಕವಾಗಿ ಸಂಬಳ ನೀಡಿಲ್ಲದಿರುವ ಬಗ್ಗೆ ಮಾಹಿತಿ ಇದೆ. ಈ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ನೀಡಲಾಗಿದೆ. ಬುಧವಾರ ಕ್ಯಾಂಟೀನ್ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು' ಎಂದರು.

ಕೊಳ್ಳೇಗಾಲದಲ್ಲೂ ಕ್ಯಾಂಟೀನ್‌ ಬಂದ್‌ ಆಗಿರುವುದರಿಂದ ಜನರು ತೊಂದರೆ ಅನುಭವಿಸಿದರು.

‘21ರಂದು ಸೋಮವಾರ ಗುತ್ತಿಗೆದಾರ ಗೋವಿಂದ ಬಾಬು ಪೂಜಾರಿ ಅವರು ನಗರಸಭೆ ಆಯುಕ್ತ ನಂಜುಂಡಸ್ವಾಮಿ ಅವರಿಗೆ ಕರೆ ಮಾಡಿ, ‘ನಮಗೆ 1 ವರ್ಷದಿಂದ ಬಿಲ್ ಪಾವತಿಯಾಗಿಲ್ಲ. ಹಾಗಾಗಿ ನಾವು ಕ್ಯಾಂಟೀನ್‌ ಬಂದ್ ಮಾಡಿದ್ದೇವೆ’ ಎಂದು ಹೇಳಿದ್ದಾಗಿ ತಿಳಿದು ಬಂದಿದೆ.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಆಯುಕ್ತ ನಂಜುಂಡಸ್ವಾಮಿ, ‘ಟೆಂಡರ್‌ದಾರರು ಯಾರ ಮಾತನ್ನೂ ಕೇಳದೆ ಕ್ಯಾಂಟೀನ್‌ ಬಂದ್‌ ಮಾಡಿದ್ದಾರೆ. ಬೆಂಗಳೂರಿನ ಚೆಫ್‌ ಟಾಕ್ ಫುಡ್ ಅಂಡ್‌ ಹಾಸ್ಟಿಟಲಿಟಿ ಹಾಗೂ ಗುತ್ತಿಗೆದಾರ ಗೋವಿಂದ ಬಾಬು ಪೂಜಾರಿ ಅವರಿಗೆ ನೋಡಿಸ್ ಜಾರಿ ಮಾಡಲಾಗಿದೆ’ ಎಂದರು.

ಗುಂಡ್ಲುಪೇಟೆಯಲ್ಲೂ ಇದೇ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಟೆಂಡರ್‌ ಪಡೆದ ಏಜೆನ್ಸಿಗೆ ಬಿಲ್‌ ಪಾವತಿ ಮಾಡಿಲ್ಲ. ಹೀಗಾಗಿ, ಕ್ಯಾಂಟೀನ್‌ ಬಂದ್‌ ಆಗಿದೆ ಎಂದು ಅಲ್ಲಿನ ಸಿಬ್ಬಂದಿ ತಿಳಿಸಿದರು.

‘ಬುಧವಾರದಿಂದ ಪುನರಾರಂಭ’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಎಂ.ವಿ.ಸುಧಾ ಮಾತನಾಡಿ, ‘ನಾವು ಈಗಾಗಲೇ ಗುತ್ತಿಗೆದಾರರೊಂದಿಗೆ ಮಾತನಾಡಿದ್ದೇವೆ. ಸಿಬ್ಬಂದಿ ಗೈರಾಗಿದ್ದರಿಂದ ಕ್ಯಾಂಟೀನ್‌ ಬಂದ್‌ ಆಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಅವರಿಗೆ ನೋಟಿಸ್‌ ನೀಡಲಾಗಿದೆ. ಬುಧವಾರದಿಂದ ಬೇರೆ ಸಿಬ್ಬಂದಿ ನಿಯೋಜಿಸಿ ಕ್ಯಾಂಟಿನ್‌ ಪುನರಾರಂಭಿಸಲಾಗುವುದು ಎಂದು ಹೇಳಿದ್ದಾರೆ’ ಎಂದರು.

ಸರ್ಕಾರ ಬಿಲ್‌ ಪಾವತಿ ಮಾಡಿಲ್ಲ ಎಂಬ ಆರೋಪದ ಬಗ್ಗೆ ಕೇಳಿದ್ದಕ್ಕೆ, ‘ಟೆಂಡರ್‌ ಪಡೆದವರು ಪ್ರತಿ ತಿಂಗಳು ನಗರ ಸ್ಥಳೀಯ ಸಂಸ್ಥೆಗಳಿಗೆ ಖರ್ಚಾಗಿರುವ ಹಣದ ಬಿಲ್‌ ನೀಡಬೇಕು. ಅದನ್ನು ಸರ್ಕಾರಕ್ಕೆ ಕಳುಹಿಸಿ ಬಿಲ್‌ ಪಾವತಿಗೆ ಕ್ರಮವಹಿಸಲಾಗುತ್ತದೆ. ನಮ್ಮ ಜಿಲ್ಲೆಯಲ್ಲಿ ಟೆಂಡರ್‌ ಪಡೆದ ಸಂಸ್ಥೆ ನಮಗೆ ಬಿಲ್‌ ಸಲ್ಲಿಸಿಲ್ಲ’ ಎಂದು ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT