ಶುಕ್ರವಾರ, ಮೇ 7, 2021
25 °C
ತಾಲ್ಲೂಕಿನ ಮುಖ್ಯರಸ್ತೆ, ರಾಷ್ಟ್ರೀಯ ಹೆದ್ದಾರಿ ಖಾಲಿ ಜಾಗಗಳಲ್ಲಿ ಕಸದ ರಾಶಿ

ಕೊಳ್ಳೇಗಾಲ: ರಸ್ತೆಯ ಇಕ್ಕೆಲಗಳೇ ಕಸದ ತೊಟ್ಟಿ

ಅವಿನ್ ಪ್ರಕಾಶ್ ವಿ. Updated:

ಅಕ್ಷರ ಗಾತ್ರ : | |

Prajavani

ಕೊಳ್ಳೇಗಾಲ: ನಗರ ಪ್ರದೇಶದ ಹೊರವಲಯಗಳ ರಸ್ತೆಗಳಲ್ಲಿ ಮತ್ತು ರಾಷ್ಟ್ರೀಯ ಹೆದ್ದಾರಿಯ ಬದಿಗಳಲ್ಲಿ ಕಸ ಹಾಗೂ ಕೊಳೆತ ತ್ಯಾಜ್ಯಗಳನ್ನು ಎಸೆಯುವ ಪ್ರವೃತ್ತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ತಾಲ್ಲೂಕಿನ ಮುಳ್ಳೂರು ಗ್ರಾಮದ ರಸ್ತೆ, ಹೊಸ ಹಂಪಾಪುರ ರಸ್ತೆ, ನರೀಪುರ ರಸ್ತೆ, ಧನಗೆರೆ ರಸ್ತೆ, ಸತ್ತೇಗಾಲ ರಸ್ತೆ, ಸರಗೂರು ರಸ್ತೆ, ಮಧುವನಹಳ್ಳಿ ರಸ್ತೆ, ಸಿದ್ದಯ್ಯನಪುರ ರಸ್ತೆ, ಕೆಂಪನಪಾಳ್ಯ, ಕುಂತೂರು, ಉತ್ತಂಬಳ್ಳಿ ಗ್ರಾಮದ ಮುಖ್ಯ ರಸ್ತೆಗಳ ಇಕ್ಕೆಲಗಳಲ್ಲಿ ಹಾಗೂ ಖಾಲಿ ಇರುವ ಪ್ರದೇಶದಲ್ಲಿ ಪ್ಲಾಸ್ಟಿಕ್, ಹಳೆಯ ವಸ್ತುಗಳು, ತಲೆಕೂದಲು, ಬಟ್ಟೆಗಳು, ಸತ್ತ ನಾಯಿಗಳು, ಮೀನು, ಕೋಳಿ ತ್ಯಾಜ್ಯ ಸೇರಿದಂತೆ ಪರಿಸರ ಮಾಲಿನ್ಯ ಮಾಡುವಂತಹ ತ್ಯಾಜ್ಯಗಳನ್ನು ಎಸೆಯಲಾಗುತ್ತಿದೆ. 

ಆಯಾ ರಸ್ತೆಗಳ ವ್ಯಾಪ್ತಿಯಲ್ಲಿ ಬರುವ ಪಂಚಾಯಿತಿಗಳು ಈ ಬಗ್ಗೆ ಏನೂ ಕ್ರಮ ಕೈಗೊಳ್ಳುತ್ತಿಲ್ಲ ‌ಎಂಬುದು ಸ್ಥಳೀಯರ ಆರೋಪ. 

ಕೊಳ್ಳೇಗಾಲ ನಗರ ಹಾಗೂ ಬೇರೆ ಊರಿನಿಂದ ತ್ಯಾಜ್ಯದ ಮೂಟೆಯನ್ನು ತರುವ ಕೆಲವರು, ಅದನ್ನು ರಸ್ತೆ ಬದಿಗಳಲ್ಲಿ ಹಾಗೂ ಖಾಲಿ ಜಾಗಗಳಲ್ಲಿ ಎಸೆದು ಪರಿಸರವನ್ನು ಹಾಳು ಮಾಡುತ್ತಿದ್ದಾರೆ. ತ್ಯಾಜ್ಯಗಳಿಂದ ಸುತ್ತಮುತ್ತಲಿನ ವಾತಾವರಣದಲ್ಲಿ ಕೆಟ್ಟ ವಾಸನೆ ಹರಡುತ್ತಿದ್ದು, ಸ್ಥಳೀಯ ಜನರು ಮೂರು ಮುಚ್ಚಿಕೊಂಡು ತಿರುಗುವಂತಾಗಿದೆ’ ಎಂದು ಸರಗೂರು ಗ್ರಾಮದ ಮಹೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ರಸ್ತೆಗಳೇ ತ್ಯಾಜ್ಯ ತೊಟ್ಟಿ: ನಗರ ಪ್ರದೇಶದಲ್ಲಿ ತ್ಯಾಜ್ಯ ಉತ್ಪಾದಿಸುವ ಬಹುತೇಕರಿಗೆ ರಸ್ತೆಗಳ ಇಕ್ಕೆಲಗಳೇ ಕಸ ಎಸೆಯುವ ತೊಟ್ಟಿಗಳು. ಕೋಳಿ, ಮೀನು, ಕುರಿ ಮಾಂಸದ ತ್ಯಾಜ್ಯ, ಕಟ್ಟಡದ ಅವಶೇಷಗಳು, ಪ್ಲಾಸ್ಟಿಕ್...‌ ಹೀಗೆ ಎಲ್ಲ ರೀತಿಯ ತ್ಯಾಜ್ಯಗಳು ರಾತ್ರೋ ರಾತ್ರಿ, ಕೆಲವೊಮ್ಮೆ ಹಗಲು ಹೊತ್ತಿನಲ್ಲೇ ಇಲ್ಲಿ ರಾಶಿ ಬೀಳುತ್ತವೆ. 

ರಸ್ತೆಗಳು ಹಾದುಹೋಗುವ ಗ್ರಾಮ ಪಂಚಾಯಿತಿ ಸಿಬ್ಬಂದಿ ರಸ್ತೆಯ ಬದಿಯಲ್ಲಿರುವ ತ್ಯಾಜ್ಯವನ್ನು ಮುಟ್ಟುವುದಕ್ಕೆ ಹೋಗುವುದಿಲ್ಲ. ಕಸ ರಾಶಿಯ ಬಗ್ಗೆ ಸ್ಥಳೀಯರು ಯಾರಾದರೂ ದೂರು ನೀಡಿದರೆ, ತೆರವುಗೊಳಿಸುತ್ತಾರೆ. ಆದರೆ, ಕೆಲವು ದಿನಗಳ ನಂತರ ಮತ್ತೆ ಅದೇ ಸ್ಥಳದಲ್ಲಿ ಕಸದ ರಾಶಿ ಕಾಣುತ್ತದೆ. 

‘ಕೊಳೆಯುವ ವಸ್ತುಗಳನ್ನು ಎಸೆದು ಹೋಗುವುದರಿಂದ ಸ್ಥಳೀಯರು ವಾರಗಟ್ಟಲೇ ಕೆಟ್ಟ ವಾಸನೆಯ ನಡುವೆಯೇ ಬದುಕುವಂತಾಗುತ್ತದೆ. ಗಾಳಿಯ ರಭಸವಾಗಿ ಬೀಸುವಾಗ ಒಣಗಿದ ಕಸ, ಹಗುರವಾದ ವಸ್ತುಗಳು ಗಾಳಿಯಲ್ಲಿ ತೂರಿ ಬರುತ್ತವೆ’ ಎಂಬುದು ಗ್ರಾಮಸ್ಥರ ದೂರು.

ತಡರಾತ್ರಿ ಕೆಲವರು ವಾಹನಗಳಲ್ಲಿ ಬಂದು ಕಸ ಎಸೆದು ಹೋಗುತ್ತಿದ್ದಾರೆ. ಅವರನ್ನು ಪತ್ತೆ ಹಚ್ಚಿ, ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಧನಗೆರೆ ಗ್ರಾಮದ ಮಹದೇವ್‌ ಅವರು ಆಗ್ರಹಿಸಿದರು. 

ಕೆರೆಗಳಲ್ಲೂ ಕಸದ ರಾಶಿ

ರಸ್ತೆಗಳು ಮಾತ್ರವಲ್ಲ. ಬತ್ತಿ ಹೋದ ಕೆರೆಗಳಿಗೂ ತ್ಯಾಜ್ಯವನ್ನು ಎಸೆಯಲಾಗುತ್ತಿದೆ. ಸರಗೂರು ಕೆರೆ, ಮಧುವನಹಳ್ಳಿ ಕೆರೆ, ಕುಣಗಳ್ಳಿ ಕೆರೆ, ನಗರದ ದೊಡ್ಡ ರಂಗನಾಥನ ಕೆರೆಗಳಿಗೆ ಕೆಲವರು ಕಸಗಳನ್ನು ಹಾಕಿ ಕೆರೆಗಳನ್ನು ಹಾಳು ಮಾಡುತ್ತಿದ್ದಾರೆ. ಇದರಿಂದ ಕೆರೆಯ ನೀರು ಕಲುಷಿತವಾಗಿದೆ.

ಅನೇಕ ಬಾರಿ ಪಂಚಾಯಿತಿ ವತಿಯಿಂದ ಕಸವನ್ನು ಕೆರೆಗೆ ಹಾಕಬಾರದು ಎಂಬ ಸೂಚನೆಯನ್ನೂ ನೀಡಿದ್ದರೂ, ಅದೇ ಪ್ರವೃತ್ತಿ ಮುಂದುವರಿದಿದೆ ಎಂದು ಅಸಹಾಯಕತೆ ತೋಡಿಕೊಳ್ಳುತ್ತಾರೆ ಗ್ರಾಮ ಪಂಚಾಯಿತಿ ಅಧಿಕಾರಿಗಳು.

‘ತ್ಯಾಜ್ಯ ಎಸೆಯುವರ ವಿರುದ್ಧ ಕ್ರಮ’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಾಲ್ಲೂಕು ಪಂಚಾಯಿತಿಯ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಪ್ರೇಮ್‌ ಕುಮಾರ್‌ ಅವರು, ‘ಕೆಲವರು ನಗರ ಪ್ರದೇಶದಿಂದ ಮೀನು ಮತ್ತು ಕೋಳಿ ತ್ಯಾಜ್ಯಗಳನ್ನು ತಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆ ಬದಿಗಳಲ್ಲಿ ಬಿಸಾಡಿ ಹೋಗುತ್ತಿದ್ದಾರೆ. ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಾವು ಕಸಗಳನ್ನು ಸಂಗ್ರಹಣೆ ಮಾಡಿ ವಿಲೇವಾರಿ ಮಾಡುತ್ತಿದ್ದೇವೆ. ಇದೇ ಪುನರಾವರ್ತನೆಯಾದರೆ, ಕಸ ಎಸೆಯುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು. 

‘ನಗರಸಭೆ ವ್ಯಾಪ್ತಿಯ ರಸ್ತೆ ಬದಿಯಲ್ಲಿ ಕಸ ಎಸೆಯುವುದು ಕಾನೂನಿಗೆ ವಿರುದ್ಧ. ಕೊಳೆತ ಕಸ ಹಾಗೂ ತ್ಯಾಜ್ಯಗಳನ್ನು ಎಸೆಯುವವರು ಯಾರೇ ಆಗಿದ್ದರೂ ಕ್ರಮ ಕೈಗೊಳ್ಳಲಾಗುವುದು’ ಎಂದು ಕೊಳ್ಳೇಗಾಲ ನಗರಸಭೆಯ ಆರೋಗ್ಯ ಅಧಿಕಾರಿ ಭೂಮಿಕಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.