ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ: ಕಾಡಂಚಿನಲ್ಲಿ ಹುಲಿ, ಚಿರತೆ ಹಾವಳಿ; ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

ಜಾನುವಾರು ಮೇಲೆ ಆಗಾಗ್ಗೆ ದಾಳಿ
Last Updated 30 ನವೆಂಬರ್ 2021, 3:04 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನ ಗ್ರಾಮಗಳಲ್ಲಿ ಹುಲಿ, ಚಿರತೆಗಳ ಉಪಟಳ ಈಚಿನ ದಿನಗಳಲ್ಲಿ ಮತ್ತೆ ಹೆಚ್ಚಾಗಿದ್ದು, ಜಾನುವಾರುಗಳ ಮೇಲೆ ಆಗಾಗ್ಗೆ ದಾಳಿ ಮಾಡುತ್ತಿವೆ.

ಓಂಕಾರ ವಲಯ, ಗೋಪಾಲಸ್ವಾಮಿ ಬೆಟ್ಟ, ಕುಂದುಕೆರೆ ವಲಯಗಳಲ್ಲಿ ಹೆಚ್ಚು ಗ್ರಾಮಗಳು ಕಾಡಿಗೆ ಹೊಂದಿಕೊಂಡಿವೆ. ಈ ಭಾಗದ ಬಹುತೇಕ ರೈತರು ಕೃಷಿಯ ಜೊತೆಗೆ, ಜೀವನೋಪಾಯಕ್ಕಾಗಿ ಹಸು, ಕುರಿ, ಮೇಕೆಗಳನ್ನೂ ಸಾಕುತ್ತಿದ್ದಾರೆ. ಹುಲಿ ಮತ್ತು ಚಿರತೆಗಳು ಜಾನುವಾರುಗಳ ಮೇಲೆ ದಾಳಿ ಮಾಡುತ್ತಿರುವುದರಿಂದ ರೈತರು ನಷ್ಟ ಅನುಭವಿಸುತ್ತಿದ್ದು, ಆತಂಕಕ್ಕೂ ಒಳಗಾಗಿದ್ದಾರೆ.

ಗುಂಡ್ಲುಪೇಟೆ ಬಫರ್‌ ವಲಯದ ವ್ಯಾಪ್ತಿಗೆ ಬರುವ ತ್ರಿಯಂಬಕಪುರದ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ಪ್ರಾಣಿಯೊಂದು ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದೆ. ಗ್ರಾಮಸ್ಥರು ಹುಲಿ ಎಂದು ಹೇಳುತ್ತಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಇದನ್ನು ನಿರಾಕರಿಸಿದ್ದಾರೆ. ಅದು ಚಿರತೆ ಎಂದು ಹೇಳುತ್ತಿದ್ದಾರೆ.

‘ಹಲವು ದಿನಗಳಿಂದ ನಮ್ಮ ಗ್ರಾಮದಲ್ಲಿ ಹುಲಿ ಇದೆ.ಮೂರ್ನಾಲ್ಕು ಜಾನುವಾರು ಬಲಿಯಾಗಿವೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರೂ, ಹುಲಿ ಸೆರೆಗೆ ಕ್ರಮ ವಹಿಸುತ್ತಿಲ್ಲ’ ಎಂದು ಗ್ರಾಮದ ಮಲ್ಲಿಕಾರ್ಜುನ ದೂರಿದರು.

‘ಕುಂದುಕೆರೆ ವ್ಯಾಪ್ತಿಯ ಮಂಗಲ, ಎಲಚೆಟ್ಟಿ, ಜಕ್ಕಹಳ್ಳಿ ಗ್ರಾಮದಲ್ಲಿ ಹೆಚ್ಚಿನ ಜನರು ಜಾನುವಾರುಗಳನ್ನು ನಂಬಿಕೊಂಡು ಜೀವನ ರೂಪಿಸಿಕೊಂಡಿದ್ದಾರೆ. ಇಂತಹದ್ದರಲ್ಲಿ ಹುಲಿ–ಚಿರತೆ, ಹಸುಗಳನ್ನು ಕೊಂದು ತಿಂದರೆ ರೈತರು ಬದುಕುವುದು ಹೇಗೆ? ಇಲಾಖೆಯವರು ಜಾನುವಾರು ಸತ್ತರೆ ಸೂಕ್ತ ಪರಿಹಾರವನ್ನೂ ಕೊಡಲ್ಲ. ಜೆರ್ಸಿ ತಳಿಯ ಹಸುಗಳನ್ನು ಹುಲಿ–ಚಿರತೆ ದಾಳಿ ಮಾಡಿ ಕೊಂದರೆ ಇಲಾಖೆ ಕೊಡುವ ಪರಿಹಾರದಿಂದ ಮತ್ತೊಂದು ಹಸುವನ್ನು ಕೊಳ್ಳಲು ಸಾಧ್ಯವಿಲ್ಲ’ ಎಂದು ಜಕ್ಕಹಳ್ಳಿ ಗ್ರಾಮದ ಮಹೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಬಂಡೀಪುರ ಬಫರ್ ಜೋನ್ ವಲಯದ ಬೆಟ್ಟದ ಮಾದಹಳ್ಳಿಯ ಶಿವಕುಮಾರ್ ಎಂಬುವರ ಬಾಳೆ ತೋಟದಲ್ಲಿ ಭಾನುವಾರ ಎರಡು ಹುಲಿ ಮರಿ ಕಾಣಿಸಿಕೊಂಡಿದ್ದವು. ಇಲಾಖೆ ಸಿಬ್ಬಂದಿ ಬಂದು ಪರಿಶೀಲನೆ ಮಾಡಿದಾಗ ಒಂದು ಮಾತ್ರ ಕಾಣಿಸಿಕೊಂಡಿತ್ತು. ರೈತರು ಹುಲಿಗಳನ್ನು ಸೆರೆ ಹಿಡಿದು ಕಾಡಿಗೆ ಬಿಡುವಂತೆ ಒತ್ತಾಯಿಸಿದಾಗ, ಮತ್ತೆ ಹುಲಿ ಮರಿ ಅಥವಾ ಹುಲಿ ಕಾಣಿಸಿಕೊಂಡರೆ ಬೋನು ಇರಿಸಿ ಸೆರೆ ಹಿಡಿಯಲಾಗುವುದು ಎಂದು ಸಿಬ್ಬಂದಿ ಗ್ರಾಮಸ್ಥರಿಗೆ ತಿಳಿಸಿದ್ದಾರೆ.

ಜಿಂಕೆ, ಹಂದಿಗಳು ಗ್ರಾಮಗಳಿಗೆ ಹೊಂದಿಕೊಂಡಂತಿರುವ ಪ್ರದೇಶಗಳಲ್ಲಿ ಬೀಡು ಬಿಡುತ್ತಿರುವುದರಿಂದ ಹುಲಿ, ಚಿರತೆಗಳು ಗ್ರಾಮಗಳಿಗೆ ಬರುತ್ತಿವೆ. ಅವುಗಳು ಸಿಗದಿದ್ದರೆ ದನ–ಕರುಗಳ ಮೇಲೆ ದಾಳಿ ಮಾಡುತ್ತವೆ. ಗ್ರಾಮೀಣ ಭಾಗದ ಜನರು ಮನೆಯ ಹಿಂಭಾಗ ಹೆಚ್ಚು ಕೊಳಚೆ ಪ್ರದೇಶ ಸೃಷ್ಟಿಯಾಗದಂತೆ ಸ್ವಚ್ಛತೆ ಕಾಪಾಡಬೇಕು’ ಎಂದು ಪರಿಸರ ಪ್ರೇಮಿ ಕೂತನೂರು ಗೋಪಾಲ್ ತಿಳಿಸಿದರು.

ಅದು ಹುಲಿಯಲ್ಲ, ಚಿರತೆ

ವಲಯ ಅರಣ್ಯ ಅಧಿಕಾರಿ ಲೋಕೇಶ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ, ‘ತ್ರಿಯಂಬಕಪುರದಲ್ಲಿ ಕಾಣಿಸಿಕೊಂಡಿರುವುದು ಹುಲಿಯಲ್ಲ; ಚಿರತೆ. ಹೆಜ್ಜೆ ಗುರುತುಗಳಿಂದ ಇದು ದೃಢಪಟ್ಟಿದೆ. ಚಿರತೆ ಸೆರೆ ಹಿಡಿಯಲು ಬೋನು ಇರಿಸಲಾಗುವುದು. ಗ್ರಾಮಸ್ಥರು ಭಯ ಪಡಬೇಕಾಗಿಲ್ಲ’ ಎಂದು ಹೇಳಿದರು.

‘ಗ್ರಾಮೀಣ ಭಾಗದಲ್ಲಿ ಜಮೀನುಗಳನ್ನು ಪಾಳು ಬಿಟ್ಟಿರುವುದರಿಂದ ಗಿಡಗಂಟಿ ಹೆಚ್ಚು ಬೆಳೆದಿವೆ. ಹಾಗಾಗಿ, ಚಿರತೆಗಳು ಇಂತಹ ಪ್ರದೇಶದಲ್ಲಿ ಆಶ್ರಯ ಪಡೆದಿರುತ್ತವೆ. ಹಾಗಾಗಿ, ಪಾಳು ಬಿದ್ದಿರುವ ಮತ್ತು ಹೆಚ್ಚು ಲಂಟನಾಗಳಿರುವ ಜಾಗದಲ್ಲಿ ಜಾನುವಾರು ಬಿಡಬಾರದು’ ಎಂದು ಇಲಾಖೆ ಸಿಬ್ಬಂದಿ ಸಲಹೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT