ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿ ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಆತಂಕ

ಅರಕಲವಾಡಿ ಗ್ರಾಮದ ಹಲಸಿನ ಕಟ್ಟೆ ಬಳಿ ಕಂಡು ಬಂದ ವ್ಯಾಘ್ರ, ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ
Last Updated 26 ಜುಲೈ 2020, 14:57 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಅರಕಲವಾಡಿ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಸಾಸಿವೆಹಳ್ಳ, ಹಲಸಿನ ಕಟ್ಟೆ ಬಳಿ ಹುಲಿಯೊಂದು ಭಾನುವಾರ ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ.

ಗ್ರಾಮಸ್ಥರ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಯೂ ಹುಲಿಯನ್ನು ನೋಡಿದ್ದಾರೆ. ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್‌ ಕುಮಾರ್‌ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹಲಸಿನಕಟ್ಟೆಯ ಬಳಿಯ ಲೋಕೇಶ್‌ ಎಂಬುವವರು ತಮ್ಮ ಜಮೀನಿನಲ್ಲಿ ಬೆಳಿಗ್ಗೆ 5.50ರ ಸುಮಾರಿಗೆ ಸುಮಾರಿಗೆ ಹಸುವಿನ ಹಾಲು ಕರೆಯಲು ಮುಂದಾದಾಗ ಹುಲಿಯು ಹಸು ಹಾಗೂ ಅವರ ಮೇಲೆ ದಾಳಿ ನಡೆಸಲು ಯತ್ನಿಸಿದೆ. ಈ ಸಂದರ್ಭದಲ್ಲಿ ಅವರು ತಪ್ಪಿಸಿಕೊಂಡಿದ್ದಾರೆ. ಇನ್ನೂ ಪೂರ್ಣ ಪ್ರಮಾಣದಲ್ಲಿ ಬೆಳಕು ಹರಿಯದೇ ಇದ್ದುದರಿಂದ ಯಾವ ಪ್ರಾಣಿ ಎಂಬುದು ಸ್ಪಷ್ಟವಾಗಿರಲಿಲ್ಲ.

ಸಾಮಾನ್ಯವಾಗಿ ಈ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿರುವುದರಿಂದ, ಚಿರತೆಯೇ ಆಗಿರಬಹುದು ಎಂದು ಎಲ್ಲರೂ ನಂಬಿದ್ದರು. ಸೆರೆ ಹಿಡಿಯುವುದಕ್ಕಾಗಿ ಅರಣ್ಯ ಇಲಾಖೆ ಸಿಬ್ಬಂದಿ ಬೋನನ್ನೂ ಇಟ್ಟರು. ನಂತರ ಜಮೀನಿನಲ್ಲಿ ಇದ್ದ ಹೆಜ್ಜೆ ಗುರುತುಗಳನ್ನು ಗಮನಿಸಿದಾಗ, ಹುಲಿಯಾಗಿರಬಹುದು ಎಂಬ ಶಂಕೆ ವ್ಯಕ್ತವಾಯಿತು.

‘ಸಂಜೆ 4.30ರ ಹೊತ್ತಿಗೆ ಸ್ಥಳೀಯರು ಹುಲಿಯನ್ನು ನೋಡಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿಗೂ ಕಂಡಿದೆ. ಅರಣ್ಯ ಇಲಾಖೆ ಏನು ಕ್ರಮ ಕೈಗೊಳ್ಳುತ್ತದೆಯೋ ಗೊತ್ತಿಲ್ಲ. ಬಿಆರ್‌ಟಿಯ ಅಧಿಕಾರಿಗಳು ಬಂದಿದ್ದಾರೆ’ ಎಂದು ಸ್ಥಳೀಯ ನಿವಾಸಿ ಪ್ರಮೋದ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸಾಸಿವೆ ಹಳ್ಳದ ಬಳಿ ನಮ್ಮ ಸಿಬ್ಬಂದಿಗೂ ಹುಲಿ ಕಾಣಿಸಿಕೊಂಡಿದೆ. ಬೋನು ಇಡಲಾಗಿದೆ. ಆದರೆ, ಅದು ಬೋನಿಗೆ ಬೀಳುವ ಸಾಧ್ಯತೆ ಕಡಿಮೆ. ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಬೇಕು. ಈ ಬಗ್ಗೆ ಉನ್ನತ ಅಧಿಕಾರಿಗಳು ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದು ವಲಯ ಅರಣ್ಯ ಅಧಿಕಾರಿ ಅಭಿಲಾಷ್‌ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT