ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರದಲ್ಲಿ ಸಫಾರಿ ದರ ಹೆಚ್ಚಳ: ಪ್ರವಾಸಿಗರು, ಸ್ಥಳೀಯರ ಅಸಮಾಧಾನ

ಬಂಡೀಪುರ: ಜನವರಿಯಲ್ಲಿ ದರ ಏರಿಕೆಯ ಬಗ್ಗೆ ಚರ್ಚೆ, ಬಳಿಕ ಸರ್ಕಾರಕ್ಕೆ ಪ್ರಸ್ತಾವ
Last Updated 3 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ದರ ಪರಿಷ್ಕರಣೆ ಬಗ್ಗೆ ಸ್ಥಳೀಯರು ಹಾಗೂ ಪ್ರವಾಸಿಗರಿಂದ ವಿರೋಧ ವ್ಯಕ್ತವಾಗಿದೆ. ಹೊಸ ದರ ದುಬಾರಿಯಾಗಿದ್ದು, ಬಡವರು ಹಾಗೂ ಮಧ್ಯಮ ವರ್ಗದವರಿಗೆ ಇದು ಹೊರೆಯಾಗಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸಫಾರಿ ದರ, ಬಂಡೀಪುರ ವಸತಿ ಗೃಹಗಳ ದರ ಸೇರಿದಂತೆ ವಿವಿಧ ಸೇವಾ ದರಗಳನ್ನು ಪರಿಷ್ಕರಿಸಿ ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರು ಮಾರ್ಚ್‌ 31ರಂದು ಆದೇಶ ಹೊರಡಿಸಿದ್ದಾರೆ. ಏಪ್ರಿಲ್‌ 1ರಿಂದ ಇದು ಜಾರಿಗೆ ಬಂದಿದೆ.

ಜನವರಿ 29ರಂದು ಅಧಿಕಾರಿಗಳ ನಡುವೆ ನಡೆದಿದ್ದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ದರ ಹೆಚ್ಚಳದ ಬಗ್ಗೆ ಚರ್ಚೆಯಾಗಿತ್ತು. ಆ ಬಳಿಕ ಹುಲಿ ಯೋಜನೆ ನಿರ್ದೇಶಕರು ಕಳುಹಿಸಿದ್ದ ಪ್ರಸ್ತಾವದ ಆಧಾರದ ಮೇಲೆ ದರ ಹೆಚ್ಚಿಸಲಾಗಿದೆ. ನಾಲ್ಕು ವರ್ಷಗಳಿಂದ ದರ ಪರಿಷ್ಕರಣೆಯಾಗಿಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.

ಈ ಹಿಂದೆ, ಪ್ರವೇಶ ಶುಲ್ಕ ₹250 ಸಫಾರಿಗೆ ₹100, ಪರಿಷ್ಕೃತ ದರದಂತೆ ಪ್ರವೇಶ ಶುಲ್ಕ ₹300 ಹಾಗೂ ಸಫಾರಿಗೆ ₹300ಕ್ಕೆ ಹೆಚ್ಚಿಸಲಾಗಿದೆ.ವಿದೇಶಿ ಪ್ರವಾಸಿಗರಿಗೆ ಪ್ರವೇಶ ಶುಲ್ಕ ₹500, ಸಫಾರಿಗೆ ₹500ರಂತೆ ಒಬ್ಬರಿಗೆ ₹1,000 ನಿಗದಿ ಪಡಿಸಲಾಗಿದೆ.

ಸಫಾರಿಗೆ ಜಿಪ್ಸಿ ಬಾಡಿಗೆ ₹3,000 ರಿಂದ ₹3,500, 9 ಸೀಟಿನ ಕ್ಯಾಂಪರ್ ಬಾಡಿಗೆ ₹5,000 ದಿಂದ 7,000 ಸಾವಿರಕ್ಕೆ ಹೆಚ್ಚಿಸಲಾಗಿದೆ.

ಕ್ಯಾಮೆರಾ ದರ ಹೆಚ್ಚಳ

ವನ್ಯಜೀವಿ ಛಾಯಾಗ್ರಹಣಕ್ಕೆ ಬಳಸುವ ಕ್ಯಾಮೆರಾಗಳಿಗೆ ವಿಧಿಸಲಾಗಿರುವ ಶುಲ್ಕವನ್ನೂ ಹೆಚ್ಚಿಸಲಾಗಿದೆ.200 ಎಂಎಂ ಲೆನ್ಸ್ನ ಕ್ಯಾಮರಾಗೆ ಒಂದು ಟ್ರಿಪ್‌ಗೆ ₹750 ಮತ್ತು 200 ಎಂಎಂಗಿಂತ ಒಳಗಿನ ಲೆನ್ಸ್‌ ಹೊಂದಿರುವ ಕ್ಯಾಮೆರಾಗೆ ₹150, ಹವ್ಯಾಸಿ ಛಾಯಾಗ್ರಹಕರಿಗೆ ಪ್ರತಿ ಟ್ರಿಪ್‌ಗೆ ₹1,500 ನಿಗದಿ ಮಾಡಲಾಗಿದೆ.

ಬಂಡೀಪುರ ಸ್ವಾಗತ ಕೌಂಟರ್‌ ಬಳಿ ರಾತ್ರಿ ಪೂರ್ತಿ ನಿಲುಗಡೆ ಮಾಡುವ ಜೀಪ್ ಕಾರುಗಳಿಗೆ ₹50, ಲಘು ವಾಹನಗಳಿಗೆ ₹100 ಮತ್ತು ಬಸ್ ಮತ್ತು ಟ್ರಕ್ಗಳಿಗೆ ₹150 ನಿಗದಿ ಮಾಡಲಾಗಿದೆ.

ಸದ್ಯದ ಮಟ್ಟಿಗೆ ಸಫಾರಿ ಕೌಂಟರ್‌ನಲ್ಲಿ ವಾಹನ ನಿಲುಗಡೆ ದರ ಹೆಚ್ಚಳವಾಗಿಲ್ಲ, ಗೋಪಾಲಸ್ವಾಮಿ ಬೆಟ್ಟದ ಪಾರ್ಕಿಂಗ್ನಲ್ಲಿ ಮಾತ್ರ ದರ ಹೆಚ್ಚಳವಾಗಿದೆ.

ವಿರೋಧ

‘ಕೋವಿಡ್ ಸಂಕಷ್ಟದ ಕಾಲಘಟ್ಟದಲ್ಲಿ ಏಕಾಏಕಿ ದರವನ್ನು ದುಪ್ಪಟ್ಟು ಮಾಡಿರುವುದರಿಂದ ಬಡವರು ಹಾಗೂ ಮದ್ಯಮ ವರ್ಗದ ಜನರಿಗೆ ತೊಂದರೆಯಾಗುತ್ತದೆ. ಬಂಡೀಪುರ ಸಫಾರಿ ಕೇವಲ ಉಳ್ಳವರಿಗೆ ಮಾತ್ರವೇ ಆದಂತೆ ಇದೆ. ಸ್ಥಳೀಯ ಛಾಯಾಗ್ರಹಕರು ಮತ್ತು ಅರಣ್ಯ ಪ್ರಿಯರಿಗೆ ಕಾಡಿಗೆ ಹೋಗಲು ಸಾಧ್ಯವಿಲ್ಲದಂತಾಗಿದೆ. ದರಗಳು ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ಮಾಡಬಾರದು. ಸ್ಥಳೀಯರು ಸಹ ಸಫಾರಿಗೆ ಹೋಗುವಂತಾಗಬೇಕು’ ಎಂದು ಮಂಗಲ ಗ್ರಾಮದ ಉಮೇಶ್ ಅವರು ಹೇಳಿದರು.

ಮೂಲ ಸೌಕರ್ಯಗಳೆಲ್ಲಿದೆ: ಪ್ರವಾಸಿಗರು, ಸ್ಥಳೀಯರ ಪ್ರಶ್ನೆ

ಸಫಾರಿ ಕೌಂಟರ್ ಮೇಲುಕಾಮನಹಳ್ಳಿ ಬಳಿಗೆ ಸ್ಥಳಾಂತರಗೊಂಡು ವರ್ಷ ಕಳೆದರೂ ಇನ್ನೂ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ವಾಹನಗಳ ನಿಲುಗಡೆಗೆ ₹50 ನಿಗದಿ ಮಾಡಿದ್ದರೂ ನೆರಳಿನ ವ್ಯವಸ್ಥೆ ಇಲ್ಲ. ಶುದ್ಧ ಕುಡಿಯುವ ನೀರಿನ ಘಟಕ ಇಲ್ಲದಿರುವುದರಿಂದ 20 ಲೀಟರ್ ಕ್ಯಾನಿನಲ್ಲಿ ಇಡುತ್ತಿದ್ದಾರೆ. ಸಫಾರಿಗೆ ಹೆಚ್ಚು ಜನರು ಬಂದರೆ ಎಲ್ಲರಿಗೂ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇಲ್ಲ. ಹಾಗಿದ್ದರೂ ದರ ಹೆಚ್ಚಿಸಲಾಗಿದೆ ಎಂದು ಪ್ರವಾಸಿಗರು ದೂರಿದ್ದಾರೆ.

‘ಮೂಲ ಸೌಕರ್ಯಗಳನ್ನು ಒದಗಿಸದೆ ಏಕಾಏಕಿ ದರ ಹೆಚ್ಚಳ ಮಾಡುವುದು ಸರಿಯಲ್ಲ,ಅಲ್ಲದೆ ಮದ್ಯಮ ಮತ್ತು ಬಡ ಜನರನ್ನು ಗಮನದಲ್ಲಿಟ್ಟುಕೊಂಡು ದರ ನಿಗದಿ ಮಾಡಬೇಕು’ ಎಂದು ಸ್ಥಳೀಯ ವನ್ಯಜೀವಿ ಛಾಯಾಗ್ರಹಕರ ರಾಬಿನ್ಸನ್ ಅವರು ತಿಳಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಎಸ್‌.ಆರ್‌.ನಟೇಶ್‌ ಅವರು, ‘ದರ ಹೆಚ್ಚಳದ ಬಗ್ಗೆ ಪ್ರವಾಸಿಗರಿಂದ ಯಾವುದೇ ಪ್ರತಿರೋಧ ಕಂಡು ಬಂದಿಲ್ಲ. ಎಲ್ಲದಕ್ಕೂ ಎರಡು ಪಟ್ಟು ಹೆಚ್ಚಾಗಿಲ್ಲ. ಕೆಲವೊಂದಕ್ಕೆ ಮಾತ್ರ ಜಾಸ್ತಿಯಾಗಿದೆ. ಪ್ರವಾಸಿಗರ ಸಂಖ್ಯೆಯಲ್ಲೂ ಕಡಿಮೆ ಆಗಿಲ್ಲ’ ಎಂದು ಹೇಳಿದರು.

ಬಂಡೀಪುರ ವಾಸ್ತವ್ಯವೂ ತುಟ್ಟಿ

ಬಂಡೀಪುರ ಕ್ಯಾಂಪಸ್‌ನಲ್ಲಿರುವ ವಸತಿ ಗೃಹಗಳ ದರದಲ್ಲೂ ಏರಿಕೆಯಾಗಿದೆ. ವಿಶ್ರಾಂತಿ ಗೃಹ ಹಾಗೂ ಕಾಟೇಜ್‌ಗಳ ಬಾಡಿಗೆ ₹1500ದಿಂದ ₹2000, ಗಜೇಂದ್ರ ಗಣ್ಯರ ಕೊಠಡಿ–1ರ ಬಾಡಿಗೆ ಬಾಡಿಗೆ ₹2500ದಿಂದ ₹3000, ಗಜೇಂದ್ರ ಗಣ್ಯರ ಕೊಠಡಿ–2ರ ಬಾಡಿಗೆ ₹200ದಿಂದ ₹2,500, ಗಜೇಂದ್ರ ಗಣ್ಯರ ಕೊಠಡಿ 3 ಮತ್ತು 4ರ ಬಾಡಿಗೆಯನ್ನು ₹1500ದಿಂದ ₹2000ಕ್ಕೆ ಏರಿಸಲಾಗಿದೆ. 10 ಹಾಸಿಗೆಯ ಡಾರ್ಮಿಟರಿಗೆ ₹2,500 ಮತ್ತು 20 ಹಾಸಿಗೆಯ ಡಾರ್ಮಿಟರಿಗೆ ₹5000 ನಿಗದಿಪಡಿಸಲಾಗಿದೆ. ಹೆಚ್ಚುವರಿ ಹಾಸಿಗೆ ಶುಲ್ಕವನ್ನು ₹250 ರಿಂದ ₹500ಗೆ ಹೆಚ್ಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT