ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19 | ಕೃಷಿಯತ್ತ ಮುಖ ಮಾಡಿದ ತೃತೀಯ ಲಿಂಗಿಗಳು

ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಈಡಾದ ಸಮುದಾಯ
Last Updated 19 ಜುಲೈ 2020, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್‌–19, ಲಾಕ್‌ಡೌನ್‌ನಿಂದಾಗಿ ತೃತೀಯ ಲಿಂಗಿಗಳು ಕೂಡ ಸಂಕಷ್ಟಕ್ಕೆ ಈಡಾಗಿದ್ದಾರೆ. ಈ ಕಷ್ಟದ ಪರಿಸ್ಥಿತಿಯಲ್ಲಿ ಸ್ವಾವಲಂಬಿಗಳಾಗಲು ಮುಂದಾಗಿರುವ ತಾಲ್ಲೂಕಿನ ಯಾನಗಹಳ್ಳಿ ಹಾಗೂ ಸುತ್ತಮುತ್ತಲಿನ ಐವರು ತೃತೀಯ ಲಿಂಗಿಗಳು ಸಂಪೂರ್ಣವಾಗಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ.

ಕುಟುಂಬದ ಆಸ್ತಿ ಪಾಲಿನಲ್ಲಿ ಸಿಕ್ಕಿದ ಜಮೀನಿನಲ್ಲಿ ವ್ಯವಸಾಯ ನಡೆಸುತ್ತಿದ್ದಾರೆ. ಕುಟುಂಬದ ಸಹಕಾರವೂ ಇವರಿಗೆ ಸಿಗುತ್ತಿದೆ.

ಯಾನಗಹಳ್ಳಿಯ ಮೀನಾ, ದೇವಿಯಮ್ಮ, ಕೆಂಪಮ್ಮ ಹಾಗೂ ತಾಹಿರಾ ವ್ಯವಸಾಯ ಮಾಡಿದರೆ, ರಾಗಿಣಿ ಎಂಬುವವರು ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಏಳೆಂಟು ಹಸುಗಳನ್ನು ಸಾಕುತ್ತಿದ್ದಾರೆ.

‘ಮುಂಬೈನಿಂದ ಐದಾರು ವರ್ಷ ಹಿಂದೆ ವಾಪಸ್‌ ಬಂದೆ. ಭಿಕ್ಷಾಟನೆ ಮಾಡುತ್ತಿದ್ದೆ. ಕೋವಿಡ್‌–19 ನಿಂದಾಗಿ ನಾಲ್ಕು ತಿಂಗಳುಗಳಿಂದ ತುಂಬ ಕಷ್ಟವಾಗಿದೆ.ನಮ್ಮನ್ನು ಕೂಲಿಗೆ ಯಾರೂ ಕರೆಯುವುದಿಲ್ಲ. ಊಟಕ್ಕೆ ತೊಂದರೆಯಾಗಿದೆ. ತಂದೆ ನೀಡಿದ ಒಂದೂವರೆ ಎಕರೆಯಷ್ಟು ಜಮೀನು ಇದೆ. ಅದರಲ್ಲಿ ಕೃಷಿ ಮಾಡಬೇಕು ಎಂದು ಹೊರಟಿದ್ದೇನೆ. ಈ ಮೊದಲು ಹುರುಳಿ ಹಾಕಿದ್ದೆ. ಈಗ ಜೋಳ, ರಾಗಿ ಬಿತ್ತಬೇಕು ಎಂಬ ಆಸೆ ಇದೆ’ ಎಂದು ಮೀನಾ ‘ಪ್ರಜಾವಾಣಿ’ಗೆ ತಿಳಿಸಿದರು.

ಜಮೀನನ್ನು ಉಳುಮೆ ಮಾಡಿರುವ ಅವರು, ಬಿತ್ತನೆಗಾಗಿ ಮಳೆ ಬರುವುದನ್ನು ಕಾಯುತ್ತಿದ್ದಾರೆ.

‘ನಾನು ಬೆಂಗಳೂರಿನಲ್ಲಿ ಇದ್ದೆ. ಪಾಲಿನಲ್ಲಿ ಬಂದ 35 ಗುಂಟೆ ಜಮೀನು ಇದೆ. ಅದರಲ್ಲಿ ತಮ್ಮ ಕೃಷಿ ಮಾಡುತ್ತಿದ್ದೆ. ಲಾಕ್‌ಡೌನ್‌ ಆದ ನಂತರ ಬೆಂಗಳೂರಿನಲ್ಲಿ ಕೆಲಸ ಇಲ್ಲ. ಊರಿಗೆ ಬಂದು ಕೃಷಿ ಮಾಡುತ್ತಿದ್ದೇನೆ. ಮುಸುಕಿನ ಜೋಳ ಬಿತ್ತನೆ ಮಾಡಿದ್ದೇನೆ’ ಎಂದು ದೇವಿಯಮ್ಮ ಹೇಳಿದರು.

ವಿದ್ಯುತ್, ಕೊಳವೆಬಾವಿ ಇಲ್ಲ‌

ಮೀನಾ, ರಾಗಿಣಿ ಅವರು ತಮ್ಮ ಜಮೀನಿನಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ವಿದ್ಯುತ್‌ ಸಂಪರ್ಕ ಇಲ್ಲ. ಕೊಳವೆ ಬಾವಿ ಇಲ್ಲ. ಕೃಷಿಗಾಗಿ ಮಳೆಯನ್ನೇ ಆಶ್ರಯಿಸಬೇಕಾಗಿದೆ.

‘ಕೃಷಿ ಮಾಡುವ ಆಸೆ ಮಳೆಗಾಲದಲ್ಲಿ ಮಾತ್ರ ನೆರವೇರುತ್ತದೆ. ನಮಗೆ ವಿದ್ಯುತ್‌ ಸಂಪರ್ಕ ಇಲ್ಲ. ನೀರಿಗೆ ಕೊಳವೆಬಾವಿ ಇಲ್ಲ. ಸರ್ಕಾರ ಈ ವ್ಯವಸ್ಥೆ ಮಾಡಿದರೆ, ತುಂಬಾ ಅನುಕೂಲ’ ಎಂದು ಮೀನಾ ತಿಳಿಸಿದರು.

‘ಯಾನಗಹಳ್ಳಿಯ ಐವರು ಸದಸ್ಯರು ಎಲ್ಲರಿಗೂ ಮಾದರಿಯಾಗಿದ್ದಾರೆ. ವಿದ್ಯುತ್‌, ಕೊಳವೆಬಾವಿ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ನಾವು ಭಿಕ್ಷಾಟನೆ, ಲೈಂಗಿಕ ವೃತ್ತಿಯನ್ನು ಬಿಡಬೇಕು ಎಂದು ಸರ್ಕಾರ ಬಯಸುತ್ತದೆ. ಅದಕ್ಕೆ ಪೂರಕವಾಗಿ ಆರ್ಥಿಕವಾಗಿ ನಾವು ಸ್ವಾವಲಂಬಿಗಳಾಗಲು ಬೇಕಾದ ವಾತಾವರಣವನ್ನು ಅದು ಸೃಷ್ಟಿಸಬೇಕು’ ಎಂದು ಸಮತಾ ಸೊಸೈಟಿಯ ಜಿಲ್ಲಾ ಅಧ್ಯಕ್ಷೆ ದೀಪು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT