ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

880 ಮರಗಳಿಗೆ ಕೊಡಲಿ ಏಟು?

ಕೊಳ್ಳೇಗಾಲ– ಹನೂರು ರಸ್ತೆ ವಿಸ್ತರಣೆ ಯೋಜನೆ, ಪರ್ಯಾಯ ವ್ಯವಸ್ಥೆಗೆ ಆಗ್ರಹ
Last Updated 27 ಜೂನ್ 2019, 19:45 IST
ಅಕ್ಷರ ಗಾತ್ರ

ಹನೂರು: ಕೊಳ್ಳೇಗಾಲ– ಹನೂರು ರಸ್ತೆ ವಿಸ್ತರಣೆ ಯೋಜನೆಗಾಗಿ 880 ಮರಗಳಿಗೆ ಕೊಡಲಿ ಏಟು ಬೀಳುವ ಆತಂಕ ಎದುರಾಗಿದೆ.

ಎರಡೂ ಪಟ್ಟಣಗಳ ನಡುವಿನ 23 ಕಿ.ಮೀ ಉದ್ದದ ರಸ್ತೆಯನ್ನು ₹110 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು, ಲೋಕೋಪಯೋಗಿ ಇಲಾಖೆಯ ಅಂಗ ಸಂಸ್ಥೆ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾರ್ಯಕ್ರಮ (ಕೆ–ಶಿಪ್‌) ವಿಭಾಗ ಮುಂದಾಗಿದೆ.ಅದಕ್ಕಾಗಿ ಈ ಮಾರ್ಗದಲ್ಲಿರುವ 880 ಮರಗಳನ್ನು ಕಡಿಯಲು ಗುರುತು ಮಾಡಲಾಗಿದೆ.

ಮಧುವನಹಳ್ಳಿಯಿಂದ ಹನೂರು ಪಟ್ಟಣದ ತಟ್ಟೆಹಳ್ಳದ ನಡುವೆ ಬರುವ ಚಿಕ್ಕಿಂದುವಾಡಿ, ದೊಡ್ಡಿಂದುವಾಡಿ ಸರ್ಕಲ್, ಸಿಂಗನಲ್ಲೂರು, ಕೊಂಗರಹಳ್ಳಿ, ಕಾಮಗೆರೆ ಹಾಗೂ ಮಂಗಲ ಗ್ರಾಮಗಳ ರಸ್ತೆ ಬದಿಯಲ್ಲಿನ ಮರಗಳಿಗೆ ಗುರುತು ಹಾಕಲಾಗಿದೆ. ನೀಲಗಿರಿ, ಅರಳಿ
ಮರ, ಬೇವು, ಬೀಟೆ, ಹುಣಸೆ, ಮಡ್ಡಿಮರ, ಆಲ, ಜಾಲಿ, ಬನ್ನಿ, ಹೊಂಗೆ ‌ಸೇರಿದಂತೆ ಹಲವು ಜಾತಿಯ ವೃಕ್ಷಗಳಿದ್ದು, ಈ ಪೈಕಿ ಆಲ ಹಾಗೂ ಬೇವಿನ ಮರಗಳೇ ಹೆಚ್ಚಾಗಿವೆ.

ರಾಜ್ಯದಲ್ಲೇ ಹೆಚ್ಚು ಆದಾಯ ಬರುವ ದೇವಾಲಯಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಮಹದೇಶ್ವರ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು ಎಂಬ ಕೂಗು ಐದಾರು ವ‌ರ್ಷಗಳಿಂದ ಕೇಳಿ ಬರುತ್ತಿತ್ತು. ಅಂತಿಮವಾಗಿ, ಈ ಯೋಜನೆಗೆ ಸರ್ಕಾರ ಅನುಮೋದನೆ ನೀಡಿತ್ತು. ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ರಸ್ತೆ ನಿರ್ಮಾಣ ಯೋಜನೆಗೆ ಚಾಲನೆ ಸಿಕ್ಕಿದೆ.

ರಸ್ತೆ ಬದಿಯಲ್ಲಿರುವ ಮರಗಳಲ್ಲದೇ, ವಿಸ್ತರಣೆಗಾಗಿ ಖರೀದಿಸಿರುವ ಜಮೀನಿನಲ್ಲಿರುವ ಮರಗಳನ್ನೂ ಗುರುತಿಸಲಾಗಿದೆ. ಈ ಪೈಕಿ ಬಹುತೇಕ ಮರಗಳು 30 ವರ್ಷಕ್ಕಿಂತಲೂ ಹಳೆಯದಾಗಿವೆ. ಇವುಗಳಲ್ಲಿ ಹೆಚ್ಚಿನ ಮರಗಳು ಅರಣ್ಯ ಇಲಾಖೆಯ ಮಹತ್ವಾಕಾಂಕ್ಷೆಯ ಮರಪಟ್ಟ ಯೋಜನೆಯಡಿ ಬೆಳೆದಿರುವ ಮರಗಳು. ಹುಲಸುಗುಡ್ಡೆಯಿಂದ ಪೊಲೀಸ್ ವಸತಿ ಗೃಹದವರೆಗೆ ಇರುವ ಹುಣಸೆ ಹಾಗೂ ಆಲದ ಮರಗಳನ್ನು ಈ ಯೋಜನೆಯಡಿ ಬೆಳೆಸಲಾಗಿದೆ.

ಪರ್ಯಾಯ ವ್ಯವಸ್ಥೆಗೆ ಆಗ್ರಹ: ರಸ್ತೆ ವಿಸ್ತರಣೆಗಾಗಿ, ಮರಗಳ ಕಡಿತಲೆಗೆ ಮುಂದಾಗಿರುವುದಕ್ಕೆ ಪರಿಸರವಾದಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಹಿರಿಯರು ನೆಟ್ಟು ಬೆಳೆಸಿದ ಮರಗಳನ್ನು ಅಭಿವೃದ್ಧಿ ಹೆಸರಿನಲ್ಲಿ ಕಡಿದು ರಸ್ತೆ ನಿರ್ಮಾಣ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆ. ಒಂದೆಡೆ, ಸರ್ಕಾರ ಗಿಡ ಬೆಳೆಸಿ ಎಂದು ವ್ಯಾಪಕ ಪ್ರಚಾರ ನಡೆಸುತ್ತಿದ್ದರೆ, ಇತ್ತ ಅಭಿವೃದ್ಧಿ ಹೆಸರಿನಲ್ಲಿ ಮರಗಳ ಹನನವಾಗುತ್ತಿದೆ. ಮರಗಳನ್ನು ಕಡಿಯದೇ, ರಸ್ತೆ ಅಭಿವೃದ್ಧಿಗೆ ಪರ್ಯಾಯ ವ್ಯವಸ್ಥೆ ಮಾಡಿದರೆ ಒಳಿತು’ ಎಂದು ಪರಿಸರ ಪ್ರೇಮಿ ವಿನಯ್‌ಕುಮಾರ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ’

‘ಕೊಳ್ಳೇಗಾಲ– ಹನೂರು ರಸ್ತೆಯ ಬದಿಗಳಲ್ಲಿಮರಗಳನ್ನು ಕಡಿಯುವ ಬಗ್ಗೆ ನಮಗೆ ಮಾಹಿತಿ ಬಂದಿಲ್ಲ. ಮಲೆಮಹದೇಶ್ವರ ವನ್ಯಧಾಮದ ಎರಡು ಬಫರ್ ವಲಯದಲ್ಲಿ ಈ ರಸ್ತೆ ಹಾದು ಹೋಗುವುದರಿಂದ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT