ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಅರಿಸಿನ ಧಾರಣೆ ಕುಸಿತ; ರೈತ ಕಂಗಾಲು

ಎಂಐಎಸ್‌ನಲ್ಲಿ ಖರೀದಿಗೆ ಮುಂದಾಗುವಂತೆ ಸರ್ಕಾರಕ್ಕೆ ಒತ್ತಾಯ ಪತ್ರ ಚಳವಳಿ
Last Updated 13 ಫೆಬ್ರುವರಿ 2023, 6:07 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಅರಿಸಿನ ಕಟಾವು ನಡೆಯುತ್ತಿದ್ದು, ಆರಂಭದಲ್ಲೇ ಧಾರಣೆ ಕುಸಿದಿರುವುದರಿಂದ ರೈತರು ನಷ್ಟದ ಸುಳಿಗೆ ಸಿಲುಕಿದ್ದು, ಕಂಗಾಲಾಗಿದ್ದಾರೆ.

ಸದ್ಯ ಮಾರುಕಟ್ಟೆಯಲ್ಲಿ ಕ್ವಿಂಟಲ್‌ ಅರಿಸಿನಕ್ಕೆ ₹ 6,000 ದಿಂದ ₹ 6,200ರವರೆಗೆ ಇದೆ. ಕಳೆದ ವರ್ಷ ಬೆಲೆ ₹ 6,800–₹ 7,000ದವರೆಗೂ ಇತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬೆಳೆಯ ನಿರ್ವಹಣಾ ವೆಚ್ಚ ಎಕರೆಗೆ ₹ 25 ಸಾವಿರದಷ್ಟು ಹೆಚ್ಚಾಗಿದೆ ಎಂದು ಬೆಳೆಗಾರರು ತಿಳಿಸಿದ್ದಾರೆ.

ಸರ್ಕಾರವು ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ (ಎಂಐಎಸ್‌) ಅಡಿಯಲ್ಲಿ ಅರಿಸಿನಕ್ಕೆ ವೈಜ್ಞಾನಿಕ ಬೆಲೆ ನಿಗದಿ ಪಡಿಸಿ ಮಾರುಕಟ್ಟೆಯಲ್ಲಿ ಧಾರಣೆ ಸ್ಥಿರವಾಗಿರುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅರಿಸಿನ ಬೆಳೆಗಾರರ ಒಕ್ಕೂಟದ ಅಡಿಯಲ್ಲಿ ಬೆಳೆಗಾರರು ಪತ್ರ ಚಳವಳಿ ನಡೆಸುತ್ತಿದ್ದಾರೆ. ಗುಂಡ್ಲುಪೇಟೆ ಭಾಗದ ಬೆಳೆಗಾರರು ರೈತರ ಪರಿಸ್ಥಿತಿಯನ್ನು ವಿವರಿಸಿ, ಎಂಐಎಸ್‌ ಅನುಷ್ಠಾನಗೊಳಿಸುವಂತೆ ಬೆಳೆಗಾರರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಅಂಚೆಗೆ ಹಾಕುತ್ತಿದ್ದಾರೆ. ಇದಲ್ಲದೇ 16ರಂದು ಜಿಲ್ಲೆಯಾದ್ಯಂತ ಅರಿಸಿನ ಬೆಳೆಗಾರರು ಜಿಲ್ಲಾ ಕೇಂದ್ರಕ್ಕೆ ಬೈಕ್‌ ರ‍್ಯಾಲಿ ನಡೆಸಿ ಎಂಐಎಸ್‌ಗಾಗಿ ಒತ್ತಾಯಿಸಲಿದ್ದಾರೆ.

ಪ್ರಮುಖ ವಾಣಿಜ್ಯ ಬೆಳೆ: ಅರಿಸಿನ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ. ತೋಟಗಾರಿಕೆ ಇಲಾಖೆ ಪ್ರಕಾರ ಈ ಬಾರಿ ಜಿಲ್ಲೆಯಲ್ಲಿ 8000 ಹೆಕ್ಟೇರ್‌ ಪ್ರದೇಶದಲ್ಲಿ ಅರಿಸಿನ ಬೆಳೆಯಲಾಗಿದೆ. 9000ಕ್ಕೂ ಹೆಚ್ಚು ರೈತರು ಅರಿಸಿನ ಬೆಳೆಯನ್ನು ಅವಲಂಬಿಸಿದ್ದಾರೆ.

ಏಳು ವರ್ಷಗಳಲ್ಲಿ ಕನಿಷ್ಠ ಬೆಲೆ: ‘ಎರಡು ವರ್ಷಗಳ ಹಿಂದೆ ಅರಿಸಿನಕ್ಕೆ ಹೆಚ್ಚು ಬೆಲೆ ಇತ್ತು. ಕ್ವಿಂಟಲ್‌ಗೆ ₹ 8000ದವರೆಗೂ ಬೆಲೆ ಇತ್ತು. ಸಾಮಾನ್ಯವಾಗಿ ಕಟಾವಿನ ಆರಂಭದಲ್ಲಿ ಹೆಚ್ಚು ಬೆಲೆ ಇದ್ದು, ನಂತರ ಕಡಿಮೆಯಾಗುತ್ತಾ ಹೋಗುತ್ತದೆ. ಈ ಬಾರಿ ಆರಂಭದಲ್ಲಿ ಕಡಿಮೆ ಬೆಲೆ ಇದ್ದು, ಮುಂದೆ ಇನ್ನಷ್ಟು ಕಡಿಮೆಯಾದರೆ ತೀವ್ರ ನಷ್ಟ ಅನುಭವಿಸಬೇಕಾಗುತ್ತದೆ’ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದರು.

‘ಕಟಾವು ಶುರುವಾಗಿದೆ. ಅರಿಸಿನ ಕೀಳಿಸುವುದಕ್ಕೆ ಎಕರೆಗೆ ₹ 35 ಸಾವಿರ ಬೇಕು. ಈ ಬಾರಿ ಬೆಲೆ ಕಡಿಮೆ ಇದೆ. ಹಾಕಿದ ಬಂಡವಾಳವೂ ಬರುವಂತೆ ಕಾಣಿಸುತ್ತಿಲ್ಲ’ ಎಂದು ತಾಲ್ಲೂಕಿನ ಬಂದೀಗೌಡನಹಳ್ಳಿ ಬೆಳೆಗಾರ ರವಿಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಏಳು ವರ್ಷಗಳಲ್ಲೇ ಈ ಬಾರಿ ಅತ್ಯಂತ ಕಡಿಮೆ ಬೆಲೆ ಇದೆ. ಒಂದು ಎಕರೆಯಲ್ಲಿ ಅರಿಸಿನ ಬೆಳೆಯಲು ₹1.5 ಲಕ್ಷದಿಂದ ₹1.9 ಲಕ್ಷದವರೆಗೂ ವೆಚ್ಚವಾಗಿದೆ. ಈಗಿನ ಬೆಲೆಯೇ ಮುಂದುವರಿದರೆ, ಬೆಳೆದವರಿಗೆ ಲಾಭ ಏನೂ ಸಿಗುವುದಿಲ್ಲ’ ಎಂದು ಗುಂಡ್ಲುಪೇಟೆ ತಾಲ್ಲೂಕಿನ ಶಿವಪುರದ ಬೆಳೆಗಾರ ನಾಗಾರ್ಜುನ ಕುಮಾರ್‌ ತಿಳಿಸಿದರು.

ಮಹಾರಾಷ್ಟ್ರದ ಅರಿಸಿನ ಕಾರಣ: ‘ಜಿಲ್ಲೆಯಲ್ಲಿ ಈ ವರ್ಷ ಅರಿಸಿನ ಬೆಳೆ ವಿಸ್ತೀರ್ಣ ಕಡಿಮೆಯಾಗಿದೆ. ಅರಿಸಿನ ಬೆಳೆಯುತ್ತಿದ್ದವರು, ಬಾಳೆ ಬೆಳೆದಿದ್ದಾರೆ. ಮಹಾರಾಷ್ಟ್ರದಲ್ಲಿ ಇದೇ ಬೆಲೆಗೆ ಅರಿಸಿನ ಸಿಗುತ್ತಿದ್ದು, ಅಲ್ಲಿಂದ ರಾಜ್ಯಕ್ಕೆ ಬರುತ್ತಿದೆ. ಇದರಿಂದಾಗಿ ಇಲ್ಲಿ ಬೆಲೆ ಕಡಿಮೆಯಾಗಿದೆ’ ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಬಿ.ಎಸ್‌.ಶಿವಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಲ್ಲಿ ಜಿಲ್ಲೆಯಲ್ಲಿ ಅರಿಸಿನ ಬೆಳೆ ಆಯ್ಕೆ ಮಾಡಲಾಗಿದೆ. ಆದರೆ, ಇದರಿಂದ ಜಿಲ್ಲೆಯ ಬೆಳೆಗಾರರಿಗೆ ಯಾವುದೇ ಪ್ರಯೋಜನವಾಗಿಲ್ಲ. ಕನಿಷ್ಠ ಪಕ್ಷ ಉತ್ತಮ ಧಾರಣೆಗೂ ಸಿಕ್ಕಿಲ್ಲ’ ಎಂಬುದು ಬೆಳೆಗಾರರ ಅಳಲು.

ಎಂಐಎಸ್‌ ಜಾರಿಗೆ ಒತ್ತಾಯ

‘ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಬೆಲೆ ಕಡಿಮೆಯಾದಾಗ, ಅದಕ್ಕೆ ಸ್ಥಿರತೆ ತಂದು ಕೊಡುವ ಉದ್ದೇಶದಿಂದಲೇ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ (ಎಂಐಎಸ್‌) ಜಾರಿಗೆ ತರಲಾಗಿದೆ. ಈ ಯೋಜನೆಯಲ್ಲಿ ಸರ್ಕಾರ ಮಧ್ಯಪ್ರವೇಶಿಸಿ ಕನಿಷ್ಠ ಬೆಲೆ ನಿಗದಿ ಪಡಿಸಿ ಆ ಮೊತ್ತಕ್ಕೆ ಬೆಳೆಯನ್ನು ಖರೀದಿಸುತ್ತದೆ. ತಾತ್ಕಾಲಿಕ ಅವಧಿಗೆ ಇದು ಜಾರಿಯಲ್ಲಿರುತ್ತದೆ. ಅರಿಸಿನ ಬೆಳೆಗಾರರ ಹಿತ ಕಾಪಾಡಲು ಸರ್ಕಾರ ಎಂಐಎಸ್‌ ಜಾರಿಗೊಳಿಸಬೇಕು’ ಎಂದು ನಾಗಾರ್ಜುನ್‌ ಕುಮಾರ್ ಒತ್ತಾಯಿಸಿದರು.

‘2012ರಲ್ಲಿ ಅರಿಸಿನ ಬೆಲೆ ಕ್ವಿಂಟಲ್‌ಗೆ ₹ 3000 ಇದ್ದಾಗ, ಸರ್ಕಾರ ₹ 5000 ನಿಗದಿ ಪಡಿಸಿ ರೈತರಿಂದ ಖರೀದಿಸಿತ್ತು. 2015ರಲ್ಲಿ ಆಂಧ್ರಪ್ರದೇಶದಲ್ಲಿ ಸರ್ಕಾರ ಇದೇ ಯೋಜನೆ ಅಡಿಯಲ್ಲಿ ₹ 6500 ಬೆಲೆ ನಿಗದಿ ಮಾಡಿ ಅರಿಸಿನ ಖರೀದಿಸಿ ರೈತರ ರಕ್ಷಣೆಗೆ ಧಾವಿಸಿತ್ತು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT