ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆಮಹದೇಶ್ವರ ವನ್ಯಧಾಮದಲ್ಲೂ ಎರಡು ಆನೆಗಳ ಸಾವು

Last Updated 8 ಏಪ್ರಿಲ್ 2020, 16:11 IST
ಅಕ್ಷರ ಗಾತ್ರ

ಹನೂರು: ಕಾವೇರಿ ವನ್ಯಧಾಮದಲ್ಲಿ ಎರಡು ಹೆಣ್ಣಾನೆಗಳು ಮೃತಪಟ್ಟ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ, ಮಲೆಮಹದೇಶ್ವರ ವನ್ಯಧಾಮದಲ್ಲೂ ಎರಡು ಆನೆಗಳು ಸಾವಿಗೀಡಾಗಿರುವುದು ಪತ್ತೆಯಾಗಿದೆ.

29 ವರ್ಷದ ಹೆಣ್ಣಾನೆ ಚಂಗಡಿ ಅರಣ್ಯ ಪ್ರದೇಶದಲ್ಲಿ ಮೃತಪ‍ಟ್ಟಿದ್ದರೆ, 25 ವರ್ಷ ಗಂಡಾನೆಯ ಮೃತದೇಹ ಜಿ.ಜೆ.ಗೌಡನಹಳ್ಳಿ ಅರಣ್ಯ ಪ್ರದೇಶದಲ್ಲಿ ಬುಧವಾರ ಕಂಡು ಬಂದಿದೆ.

ರಾಮಾಪುರ ವನ್ಯಜೀವಿ ವಲಯದ ಚಂಗಡಿ ಅರಣ್ಯದಲ್ಲಿರುವ ದೊಡ್ಡಹಳ್ಳ ಪ್ರದೇಶಕ್ಕೆ ನೀರು ಕುಡಿಯಲು ಹೋಗುವಾಗ ಹೆಣ್ಣಾನೆಯು ಆಯ ತಪ್ಪಿ ಮೃತಪಟ್ಟಿದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ. ಮಂಗಳವಾರ ಕಳೇಬರ ಪತ್ತೆಯಾಗಿದ್ದು, ಮೂರು ದಿನಗಳ ಹಿಂದೆ ಮೃತಪ‍ಟ್ಟಿರಬಹುದು ಎಂದು ಅವರು ಹೇಳಿದ್ದಾರೆ.

ಆನೆಯ ಮರಣೋತ್ತರ ಪರೀಕ್ಷೆಬುಧವಾರ ನಡೆಸಿ ಸುಟ್ಟ ನಂತರ, ಜಿ.ಜೆ.ಗೌಡನಹಳ್ಳಿ ಅರಣ್ಯ ಪ್ರದೇಶದ ಚಿಕ್ಕಮರೂರು ಬೀಟ್‌ನಲ್ಲಿ 25 ವರ್ಷದ ಗಂಡಾನೆ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ವಲಯ ಅರಣ್ಯಾಧಿಕಾರಿ ರಾಜೇಶ್ ಗವಾಲ್ ಅವರುಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಎರಡೂ ಪ್ರಕರಣಗಳ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ಏಡುಕುಂಡಲು, ‘ಹೆಣ್ಣಾನೆಯು ನೀರು ಕುಡಿಯಲು ಹೋಗಿ ಸತ್ತಿದೆ. ಇದರ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು, ಆನೆಯು ಮೇಲಿಂದ ಕೆಳಕ್ಕೆ ಬಿದ್ದ ಕಾರಣ ಬಲವಾಗಿ ಪೆಟ್ಟಾಗಿದ್ದರಿಂದ ಸಾವಿಗೀಡಾಗಿದೆ ಎಂಬುದು ದೃಢಪಟ್ಟಿದೆ. ಗಂಡಾನೆಯು 20 ದಿನಗಳ ಹಿಂದೆಯೇ ಮೃತಪಟ್ಟಿದೆ. ಇದು ಸಹಜ ಸಾವು ಎಂಬುದು ಮರಣೋತ್ತರ ಪರೀಕ್ಷೆಯಿಂದ ತಿಳಿದು ಬಂದಿದೆ’ ಎಂದು ಹೇಳಿದರು.

ದೇಹ ಸಂಪೂರ್ಣವಾಗಿ ಕೊಳೆದು ಹೋಗಿ ಆನೆಯ ತಲೆಬುರುಡೆ ಮತ್ತು ದಂತ ಮಾತ್ರ ಇದ್ದು, ಎಲುಬುಗಳು ತುಂಡಾಗಿ ಬಿದ್ದಿವೆ. ಈ ಪ್ರದೇಶವು ತೀರಾ ಕಡಿದಾಗಿದ್ದು, ನೀರು ಅಥವಾ ಆಹಾರದ ಕೊರತೆಯಿಂದಾಗಿ ಮೃತಪ‍ಟ್ಟಿರಬಹುದು ಎಂಬ ಅನುಮಾನವನ್ನು ಅರಣ್ಯ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT