ಮಂಗಳವಾರ, ಏಪ್ರಿಲ್ 13, 2021
31 °C

ಬಾಲಕಿಯರ ಮದುವೆಯಾಗಿ ದೈಹಿಕ ಸಂಬಂಧ: ಇಬ್ಬರಿಗೆ 10 ವರ್ಷಗಳ ಕಠಿಣ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಇಬ್ಬರು ಬಾಲಕಿಯರನ್ನು ಪ್ರೀತಿಸಿ, ತಮಿಳುನಾಡಿಗೆ ಕರೆದೊಯ್ದು ಮದುವೆ ಮಾಡಿಕೊಂಡು ದೈಹಿಕ ಸಂಬಂಧ ಬೆಳೆಸಿದ್ದ ಇಬ್ಬರು ಅಪರಾಧಿಗಳಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶ ಹೊರಡಿಸಿದೆ. 

ಹನೂರು ತಾಲ್ಲೂಕು ರಾಮಾಪುರ ಠಾಣಾ ವ್ಯಾಪ್ತಿಯ ಪಿ.ಬಿ.ದೊಡ್ಡಿ‌ ಗ್ರಾಮದ ಮಂಜು ಹಾಗೂ ಮುತ್ತು ಅಲಿಯಾಸ್‌ ಮುತ್ತುರಾಜ್‌ ಶಿಕ್ಷೆಗೆ ಗುರಿಯಾದವರು. ಇಬ್ಬರ ವಿರುದ್ಧ ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಗಳು ಸಾಬೀತಾಗಿರುವುದರಿಂದ ಇಬ್ಬರಿಗೂ ಕಠಿಣ ಕಾರಾಗೃಹ ಶಿಕ್ಷೆಯ ಜೊತೆಗೆ ತಲಾ ₹5.20 ಲಕ್ಷ ದಂಡ ವಿಧಿಸಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಸದಾಶಿವ ಎಸ್‌.ಸುಲ್ತಾನ್‌ಪುರಿ ಅವರು ಸೋಮವಾರ ಆದೇಶ ಹೊರಡಿಸಿದ್ದಾರೆ. 

ಘಟನೆಯ ವಿವರ: 2016ರ ಜೂನ್‌ ತಿಂಗಳಲ್ಲಿ ಘಟನೆ ನಡೆದಿತ್ತು. ಮಂಜು ಮತ್ತು ಮುತ್ತು ಅವರು ಇಬ್ಬರು ಬಾಲಕಿಯರನ್ನು ಪ್ರೀತಿಸುತ್ತಿದ್ದರು. ಇಬ್ಬರೂ ಪರಸ್ಪರ ಮಾತನಾಡಿಕೊಂಡು, ಬಾಲಕಿಯರನ್ನು ಮದುವೆಯಾಗುವ ಉದ್ದೇಶದಿಂದ ಅವರನ್ನು ದೂರ ಕರೆದುಕೊಂಡು ಹೋಗುವ ಯೋಜನೆ ರೂಪಿಸಿದ್ದರು. ಅದರಂತೆ ಜೂನ್‌ 13ರಂದು ರಾತ್ರಿ ಕೊಳ್ಳೇಗಾಲದವರೆಗೆ ಬೈಕ್‌ನಲ್ಲಿ ಬಂದು ಅಲ್ಲಿಂದ ಬಸ್‌ನಲ್ಲಿ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರು ತಾಲ್ಲೂಕಿನ ಗರೆನ್ಸಿ ಗ್ರಾಮಕ್ಕೆ ಕರೆದುಕೊಂಡು ಹೋಗಿ ಅಲ್ಲಿ, ತಮಗೆ ಪರಿಚಯವಿದ್ದ ಆರ್ಮುಗಂ ಎಂಬುವವರ ಮನೆಗೆ ತೆರಳಿ, ತಾವು ಗಂಡ ಹೆಂಡತಿಯರು ಎಂದು ಹೇಳಿ ಆಶ್ರಯ ಪಡೆದಿದ್ದರು. ಜೂನ್‌ 15ರಂದು ಬೆಳಿಗ್ಗೆ ಅದೇ ಗ್ರಾಮದಲ್ಲಿರುವ ಮುನೇಶ್ವರ ದೇವಾಲಯಕ್ಕೆ ತೆರಳಿ ಅಲ್ಲಿ ಇಬ್ಬರು ಬಾಲಕಿಯರಿಗೆ ಕರಿಮಣಿ ಸರಕಟ್ಟಿ ಮದುವೆಯಾಗಿದ್ದರು. ಅದೇ ದಿನ ರಾತ್ರಿ ಆರ್ಮುಗಂ ಮನೆಯಲ್ಲಿ ಉಳಿದುಕೊಂಡು ಬಾಲಕಿಯರೊಂದಿಗೆ ದೈಹಿಕ ಸಂಬಂಧ ಬೆಳೆಸಿದ್ದರು.  

ಘಟನೆ ಸಂಬಂಧ ರಾಮಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್‌ಸ್ಪೆಕ್ಟರ್‌ ಎಚ್‌.ಗೋವಿಂದರಾಜು ಅವರು ತನಿಖೆ ನಡೆಸಿ ಆರೋಪಿಗಳ ವಿರುದ್ಧ ನ್ಯಾಯಾಲಯದಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. 

ಇಬ್ಬರ ವಿರುದ್ಧದ ಆರೋಪ ಸಾಬೀತಾಗಿರುವುದರಿಂದ ನ್ಯಾಯಾಧೀಶ ಸದಾಶಿವ ಎಸ್‌.ಸುಲ್ತಾನ್‌ಪುರಿ ಅವರು ಇಬ್ಬರನ್ನೂ ಅಪರಾಧಿಗಳೆಂದು ಘೋಷಿಸಿ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯ ಜೊತೆಗೆ ತಲಾ ₹5.20 ಲಕ್ಷ ದಂಡ ವಿಧಿಸಿದ್ದಾರೆ. ಈ ದಂಡವನ್ನು ಸಂತ್ರಸ್ತ ಬಾಲಕಿಯರಿಗೆ ಪರಿಹಾರದ ರೂಪದಲ್ಲಿ ನೀಡಬೇಕು ಎಂದು ಅವರು ಆದೇಶಿಸಿದಲ್ಲಿ ತಿಳಿಸಿದ್ದಾರೆ. ದಂಡ ‌ಪಾವತಿಸಿದಿದ್ದರೆ ಮತ್ತೆ ಎರಡು ವರ್ಷಗಳ ಸಾಧಾರಣ ಶಿಕ್ಷೆ ಅನುಭವಿಸಬೇಕು ಎಂದು ಅವರು ಹೇಳಿದ್ದಾರೆ. 

ಪ್ರಾಸಿಕ್ಯೂಷನ್‌ ಪರವಾಗಿ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಕೆ.ಯೋಗೇಶ್‌ ಅವರು ವಾದ ಮಂಡಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು