ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಮುಂದುವರೆದ ಸಾವಿನ ಸರಣಿ, ಮತ್ತಿಬ್ಬರು ಮೃತ್ಯು

ಕೋವಿಡ್‌–19: ಗುಣಮುಖರಾದವರು 72 ಮಂದಿ, 48 ಮಂದಿಗೆ ಸೋಂಕು
Last Updated 9 ಆಗಸ್ಟ್ 2020, 14:31 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌–19 ಸಾವಿನ ಸರಣಿ ಮುಂದುವರೆದಿದೆ. ಸೋಂಕು ದೃಢಪಟ್ಟು ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಭಾನುವಾರ ಮೃತಪಟ್ಟಿದ್ದಾರೆ.

‌ಇಬ್ಬರೂ ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದರು. ಆದರೆ, ಇಬ್ಬರು ಕೋವಿಡ್‌ಯೇತರ ಕಾರಣದಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತವು ಮಾಧ್ಯಮಗಳಿಗೆ ನೀಡಿರುವ ವರದಿಯಲ್ಲಿ ಹೇಳಿದೆ. ಸರ್ಕಾರದ ಶಿಷ್ಟಾಚಾರದಂತೆ ಇಬ್ಬರ ಅಂತ್ಯಕ್ರಿಯೆಗಳನ್ನೂ ಪಿಎಫ್‌ಐನ ಸ್ವಯಂ ಸೇವಕರು ನೆರವೇರಿಸಿದ್ದಾರೆ.

ಚಾಮರಾಜನಗರದ 55 ವರ್ಷದ ಮಹಿಳೆ (ರೋಗಿ ಸಂಖ್ಯೆ 175825) ಇದೇ 7ರಂದು ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ, ಮೃತಪಟ್ಟಿದ್ದಾರೆ. ನಗರದವರೇ ಆದ 48 ವರ್ಷದ ಪುರುಷ (ರೋಗಿ ಸಂಖ್ಯೆ 1,71,635) ಹೃದ್ರೋಗದಿಂದ ಬಳಲುತ್ತಿದ್ದರು. ಇದೇ 6ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಭಾನುವಾರ ಅವರು ಕೊನೆಯುಸಿರೆಳೆದಿದ್ದಾರೆ. ಅವರು ಕೂಡ ಕೋವಿಡ್‌–19ಗೆ ತುತ್ತಾಗಿರುವುದು ದೃಢಪಟ್ಟಿದೆ.

ಜಿಲ್ಲಾಡಳಿತ ನೀಡಿರುವ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಈವರೆಗೆ 14 ಮಂದಿ ಕೋವಿಡ್‌ನಿಂದಾಗಿ ಮೃತಪಟ್ಟಿದ್ದಾರೆ. ಭಾನುವಾರದ ಎರಡು ಪ್ರಕರಣ ಸೇರಿದಂತೆ, ಸೋಂಕು ದೃಢಪಟ್ಟು, ಕೋವಿಡ್‌ಯೇತರ ಕಾರಣದಿಂದ ಮೃತಪಟ್ಟರ ಸಂಖ್ಯೆ ಏಳಕ್ಕೆ ಏರಿದೆ.

ದಾಖಲೆಯ ಗುಣಮುಖ: ಭಾನುವಾರವೂ ಜಿಲ್ಲೆಯಲ್ಲಿ ದಾಖಲೆಯ ಸಂಖ್ಯೆಯಲ್ಲಿ ಜನರು ಕೋವಿಡ್‌–19ನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಒಟ್ಟು 72 ಮಂದಿ ಸೋಂಕುಮುಕ್ತರಾಗಿದ್ದಾರೆ. ಈವರೆಗೆ ಗುಣಮುಖರಾದವರ ಸಂಖ್ಯೆ 773ಕ್ಕೆ ಏರಿದೆ.

ಗುಣಮುಖರಾದವರಲ್ಲಿ ಚಾಮರಾಜನಗರ ತಾಲ್ಲೂಕಿನ 28, ಗುಂಡ್ಲುಪೇಟೆಯ 25, ಕೊಳ್ಳೇಗಾಲದ 10, ಯಳಂದೂರು ತಾಲ್ಲೂಕಿನ ಎಂಟು, ಹನೂರು ತಾಲ್ಲೂಕಿನ ಒಬ್ಬರು ಇದ್ದಾರೆ.

ಹೊಸದಾಗಿ 48 ಕೋವಿಡ್‌–19 ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 1,151ಕ್ಕೆ ಏರಿದೆ. ಸದ್ಯ 357 ಸಕ್ರಿಯ ಪ್ರಕರಣಗಳಿವೆ. 15 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೆಚ್ಚಿದ ಪರೀಕ್ಷೆಗಳು: ಜಿಲ್ಲೆಯಲ್ಲಿ ಕೋವಿಡ್‌–19 ಪರೀಕ್ಷೆಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಭಾನುವಾರ 740 ಮಂದಿಯ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆ (ಆರ್‌ಟಿಪಿಸಿಆರ್‌–534, ರ‍್ಯಾಪಿಡ್‌ ಆ್ಯಂಟಿಜೆನ್‌– 200, ಟ್ರು ನಾಟ್‌–6) ನಡೆಸಲಾಗಿದೆ. 691 ಮಂದಿಯ ವರದಿ ನೆಗೆಟಿವ್‌ ಬಂದಿದೆ.

ಭಾನುವಾರ ದೃಢಪಟ್ಟ 48 ಪ್ರಕರಣಗಳ ಪೈಕಿ, ‌ಚಾಮರಾಜನಗರ ತಾಲ್ಲೂಕಿನಲ್ಲಿ 18, ಕೊಳ್ಳೇಗಾಲದಲ್ಲಿ 16, ಗುಂಡ್ಲುಪೇಟೆಯಲ್ಲಿ 12, ಯಳಂದೂರು ತಾಲ್ಲೂಕಿನಲ್ಲಿ ಎರಡು ಪ್ರಕರಣಗಳು ವರದಿಯಾಗಿವೆ.

ಸಕ್ರಿಯ ಪ್ರಕರಣಗಳು: ಎಲ್ಲಿ ಎಷ್ಟು?

ಜಿಲ್ಲೆಯಲ್ಲಿ 357 ಸಕ್ರಿಯ ಪ್ರಕರಣಗಳಿವೆ. ಚಾಮರಾಜನಗರ ತಾಲ್ಲೂಕಿನಲ್ಲಿ ಅತಿ ಹೆಚ್ಚು, 116 ಪ್ರಕರಣಗಳು ಇವೆ. ಕೊಳ್ಳೇಗಾಲ ತಾಲ್ಲೂಕಿನ 95, ಗುಂಡ್ಲುಪೇಟೆ ತಾಲ್ಲೂಕಿನ 74, ಯಳಂದೂರು ತಾಲ್ಲೂಕಿನ 51 ಹಾಗೂ ಹನೂರಿನ 21 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT