ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ | ಉರುಕಾತೇಶ್ವರಿ ದೇವಾಲಯ ಕೀ ಹಸ್ತಾಂತರಿಸಲು ಆಗ್ರಹ

ಮುಜರಾಯಿ ಇಲಾಖೆಗೆ ಸು‍ಪರ್ದಿಗೆ ನೀಡಿ ಹೊರಡಿಸಿದ್ದ ಆದೇಶ ರದ್ದು ಪಡಿಸಿದ ಹೈಕೋರ್ಟ್‌
Published 3 ಫೆಬ್ರುವರಿ 2024, 6:12 IST
Last Updated 3 ಫೆಬ್ರುವರಿ 2024, 6:12 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಉಮ್ಮತ್ತೂರಿನ ಉರುಕಾತೇಶ್ವರಿ ದೇವಾಲಯವನ್ನು ಮುಜರಾಯಿ ಇಲಾಖೆಗೆ ಸುಪರ್ದಿಗೆ ನೀಡಿರುವ ಸರ್ಕಾರದ ಆದೇಶವನ್ನು ಹೈಕೋರ್ಟ್‌ ಜನವರಿ 18ರಂದು ರದ್ದು ಮಾಡಿದ್ದು, ದೇವಸ್ಥಾನದ ಆಡಳಿತವನ್ನು ಉರುಕಾತೇಶ್ವರಿ ಅಮ್ಮನವರ  ದೇವಸ್ಥಾನ ಮಂಡಳಿಗೆ ಹಸ್ತಾಂತರಿಸಬೇಕು ಎಂದು ಆದೇಶ ನೀಡಿದೆ.

ಈ ಸಂಬಂಧ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಡಳಿತ ಮಂಡಳಿಯ ಪದಾಧಿಕಾರಿಗಳು, ದೇವಸ್ಥಾನದ ಬೀಗದ ಕೀ ಹಾಗೂ ದೇವಾಲಯದ ಖಾತೆ ನಿರ್ವಹಣೆಯ ಅಧಿಕಾರವನ್ನು ತಾಲ್ಲೂಕು ಆಡಳಿತ ತಕ್ಷಣವೇ ಮಂಡಳಿಗೆ ನೀಡಬೇಕು ಎಂದು ಆಗ್ರಹಿಸಿದರು. 

ಟ್ರಸ್ಟಿ ಮಹದೇವಸ್ವಾಮಿ ಮಾತನಾಡಿ, ‘ಹೈಕೋರ್ಟ್‌ ಆದೇಶದ ಆಧಾರದಲ್ಲಿ ನಾವು ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್‌ ಅವರಿಗೆ ಮನವಿ ಮಾಡಿದ್ದೇವೆ. ಜಿಲ್ಲಾಧಿಕಾರಿಯವರು ಕೀ ಹಸ್ತಾಂತರಿಸುವಂತೆ ತಹಶೀಲ್ದಾರ್‌ ಅವರಿಗೆ ಸೂಚಿಸಿದ್ದಾರೆ. ಹಾಗಿದ್ದರೂ ತಹಶೀಲ್ದಾರ್‌ ಅವರು ನೀಡುತ್ತಿಲ್ಲ. ಪ್ರತಿ ತಿಂಗಳ ಮೊದಲ ಮಂಗಳವಾರ ಅಮ್ಮನವರಿಗೆ ಪೂಜೆ ನಡೆಯಬೇಕು. ಈ ತಿಂಗಳ 6ರಂದು ಪೂಜೆ ನಡೆಯಬೇಕಿದ್ದು, ತಹಶೀಲ್ದಾರ್‌ ಅವರು ಕೀ ನೀಡದೇ ಹೋದರೆ, ನಾವು ಬೀಗ ಒಡೆದು, ಸಂಪ್ರದಾಯದಂತೆ ಪೂಜೆ ಸಲ್ಲಿಸಲಿದ್ದೇವೆ’ ಎಂದು ಹೇಳಿದರು. 

‘400 ವರ್ಷಗಳ ಇತಿಹಾಸ ಇರುವ ದೇವಾಲಯ ಇದು. 1947ರಲ್ಲಿ ಹೈಕೋರ್ಟ್‌ ಈ ದೇವಾಲಯದ ನಿರ್ವಹಣೆಯ ಹೊಣೆ ಲಿಂಗಾಯತರಿಗಲ್ಲದೆ, ಬೇರೆಯಾರಿಗೂ ಅವಕಾಶ ಇಲ್ಲ ಎಂದು ಹೇಳಿತ್ತು. ಆಡಳಿತ ನೋಡಿಕೊಳ್ಳಲು 15 ಸದಸ್ಯರ ಮಂಡಳಿಯನ್ನೂ ರಚಿಸಲಾಗಿತ್ತು. ಗ್ರಾಮದ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಆಡಳಿತ ಮಂಡಳಿಯನ್ನು ವಜಾ ಮಾಡಬೇಕು ಎಂದು ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದವು. ಕೆಳ ಹಂತದ ನ್ಯಾಯಾಲಯ ಅರ್ಜಿ ತಿರಸ್ಕರಿಸಿದಾಗ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಹೈಕೋರ್ಟ್‌ನಲ್ಲೂ ಇದು ವಜಾ ಆಗಿತ್ತು’ ಎಂದರು. 

‘ಹಾಗಿದ್ದರೂ 2022ರಲ್ಲಿ ರಾಜಕೀಯ ಪ್ರಭಾವ ಬಳಸಿ ದೇವಸ್ಥಾನವನ್ನು ತರಾತುರಿಯಲ್ಲಿ ಮುಜರಾಯಿ ಇಲಾಖೆ ಸ್ವಾಧೀನಕ್ಕೆ ನೀಡುವಂತೆ 2022ರ ಮಾರ್ಚ್‌ 10ರಂದು ಆದೇಶ ಹೊರಡಿಸಲಾಗಿತ್ತು. ಇದರ ವಿರುದ್ಧ ನಾವು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದೆವು. ನ್ಯಾಯಾಲಯ ಜನವರಿ 18ರಂದು ನಮ್ಮ ಪರವಾಗಿ ಆದೇಶ ಮಾಡಿದೆ. ದೇವಸ್ಥಾನದಲ್ಲಿ ಸಂಗ್ರಹವಾಗಿರುವ ಕಾಣಿಕೆ, ಹುಂಡಿ ಹಣ ಸೇರಿದಂತೆ ಇನ್ನಿತರ ವಸ್ತುಗಳನ್ನು ಮಂಡಳಿಗೆ ಹಸ್ತಾಂತರಿಸುವಂತೆಯೂ ತಿಳಿಸಿದೆ’ ಎಂದರು. 

‘ಆಡಳಿತ ಮಂಡಳಿಯಲ್ಲಿ ಅವ್ಯವಹಾರ, ಅಸಮರ್ಪಕ ನಿರ್ವಹಣೆ ಇದ್ದರೆ ಮಾತ್ರ ಅದರ ವಿರುದ್ಧ ಕ್ರಮ ಕೈಗೊಂಡು ಸರ್ಕಾರ ವಶಕ್ಕೆ ಪಡೆಯಬಹುದು. ಆದರೆ, ಇಲ್ಲಿ ಅಂತಹ ಲೋಪಗಳಾಗಿರಲಿಲ್ಲ’ ಎಂದು ಮಹದೇವಸ್ವಾಮಿ ಹೇಳಿದರು. 

‘ನಮಗೆ ಹಸ್ತಾಂತರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರೂ, ತಹಶೀಲ್ದಾರ್‌ ಅವರು ಇನ್ನೂ ಹಸ್ತಾಂತರ ಮಾಡಿಲ್ಲ. ಕಾರಣ ಏನು ಎಂಬುದು ತಿಳಿದಿಲ್ಲ. ಅವರು ಜಿಲ್ಲಾಧಿಕಾರಿಗಳು ಹಾಗೂ  ಮುಜರಾಯಿ ಇಲಾಖೆಯ ಹಿರಿಯ ಅಧಿಕಾರಿಗಳನ್ನು ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ದೂರಿದರು. 

‘ಮುಂದಿನ ಮಂಗಳವಾರ ಪೂಜೆ ನಡೆಯಬೇಕಾಗಿದ್ದು, ಅದಕ್ಕೂ ಮೊದಲು ಬೀಗದ ಕೀ ನೀಡದಿದ್ದರೆ, ನಾವು ಹೈಕೋರ್ಟ್‌ ಆದೇಶದಂತೆ ಬೀಗ ಒಡೆದು ಪೂಜೆ ಸಲ್ಲಿಸಬೇಕಾಗುತ್ತದೆ.  ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೆ ತಹಶೀಲ್ದಾರ್ ನೇರ ಹೊಣೆಗಾರರಾಗುತ್ತಾರೆ’ ಎಂದರು. 

ಆಡಳಿತ ಮಂಡಳಿ ಅಧ್ಯಕ್ಷ ಎಸ್‌.ಗುರುಮಲ್ಲಪ್ಪ, ಕಾರ್ಯದರ್ಶಿ ಸಿದ್ದರಾಜಪ್ಪ, ಖಜಾಂಚಿ ಎಂ.ರಾಜೇಶ್, ಟ್ರಸ್ಟಿಗಳಾದ ಕೆ.ರಾಮಣ್ಣ, ಎಸ್. ಉಮೇಶ್, ಲೋಕೇಶ್ ಇದ್ದರು.

ಉಮ್ಮತ್ತೂರಿನ ಉರುಕಾತೇಶ್ವರಿ ಅಮ್ಮನವರ ದೇವಾಲಯದ ನೋಟ
ಉಮ್ಮತ್ತೂರಿನ ಉರುಕಾತೇಶ್ವರಿ ಅಮ್ಮನವರ ದೇವಾಲಯದ ನೋಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT