ಮಂಗಳವಾರ, ಜನವರಿ 25, 2022
28 °C

ವೈಕುಂಠ ಏಕಾದಶಿ: ಶ್ರದ್ಧಾಭಕ್ತಿಯ ಸರಳ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಾದ್ಯಂತ ಗುರುವಾರ ವೈಕುಂಠ ಏಕಾದಶಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. 

ಕೋವಿಡ್‌ ಕಾರಣದಿಂದ ಎಲ್ಲ ದೇವಾಲಯಗಳಲ್ಲೂ ಏಕಾದಶಿ ಆಚರಣೆ ಸರಳವಾಗಿ ಪೂಜಾ ವಿಧಿ ವಿಧಾನಗಳಿಗೆ ಸೀಮಿತವಾಗಿತ್ತು. ಹೆಚ್ಚು ಭಕ್ತರು ಕಂಡು ಬರಲಿಲ್ಲ. 

ವೆಂಕಟೇಶ್ವರ, ಶ್ರೀನಿವಾಸ, ರಂಗನಾಥಸ್ವಾಮಿ, ನಾರಾಯಣ ದೇವಾಲಯಗಳಲ್ಲಿ ಗುರುವಾರ ಮುಂಜಾನೆಯಿಂದಲೇ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. 

ಸಾಮಾನ್ಯವಾಗಿ ವೈಕುಂಠ ಏಕಾದಶಿಯಂದು ದೇವಾಲಯಗಳಲ್ಲಿ ಭಕ್ತರ ಸಂದಣಿ ಹೆಚ್ಚಿರುತ್ತದೆ. ಈ ಬಾರಿ ಕೋವಿಡ್‌ ಕಾರಣಕ್ಕೆ ಹೆಚ್ಚು ಭಕ್ತರು ದೇವಾಲಯಗಳಿಗೆ ಭೇಟಿ ನೀಡಲಿಲ್ಲ. ಬೆಳಿಗ್ಗೆ ಸ್ವಲ್ಪ ಪ್ರಮಾಣದಲ್ಲಿ ಭಕ್ತರು ಕಂಡು ಬಂದರು. ಜನರು ಮನೆಗಳಲ್ಲೇ ಏಕಾದಶಿ ಪ್ರಯುಕ್ತ ಉಪವಾಸ ವ್ರತವನ್ನು ಆಚರಿಸಿದರು. 

ವೆಂಕಟೇಶ್ವರ, ನಾರಾಯಣಸ್ವಾಮಿ, ರಂಗನಾಥಸ್ವಾಮಿ ದೇವಾಲಯಗಳನ್ನು ರಂಗೋಲಿ, ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ದೇವರ ವಿಗ್ರಹಗಳಿಗೂ ವಿಶೇಷ ಅರ್ಚನೆ, ಅಭಿಷೇಕ ನೆರವೇರಿಸಲಾಯಿತು. ಬಳಿಕ ಹೂವು, ಆಭರಣಗಳಿಂದ ವಿಶೇಷ ಅಲಂಕಾರ ಮಾಡಲಾಯಿತು. 

ಚಾಮರಾಜನಗರದ ಕೊಳದ ಬೀದಿಯಲ್ಲಿರುವ ಕಾಡುನಾರಾಯಣಸ್ವಾಮಿ ದೇವಾಲಯ, ಉಮ್ಮತ್ತೂರಿನ ರಂಗನಾಥಸ್ವಾಮಿ ದೇವಾಲಯ, ವೆಂಕಟಯ್ಯನ ಛತ್ರದ ವೆಂಕಟೇಶ್ವರ ದೇಗುಲ, ಹರದನಗಳ್ಳಿಯ ವೇಣುಗೋಪಾಲಸ್ವಾಮಿ ದೇವಾಲಯಗಳಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. 

ಗುಂಡ್ಲುಪೇಟೆ ವರದಿ: ದಕ್ಷಿಣ ತಿರುಪತಿ ಎಂದು ಪ್ರಸಿದ್ಧಿ ಪಡೆದಿರುವ ತಾಲ್ಲೂಕಿನ ತೆರಕಣಾಂಬಿ ಹೋಬಳಿಯ ಹುಲುಗನ ಮುರಡಿ ವೆಂಕಟರಮಣಸ್ವಾಮಿ ದೇವಸ್ಥಾನ ಹಾಗೂ ಹಿಮವದ್‌ ಗೋಪಾಲಸ್ವಾಮಿ ಬೆಟ್ಟ ದೇವಸ್ಥಾನದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ಗೋಪಾಲಸ್ವಾಮಿಗೆ ಹೂವಿನ ಅಲಂಕಾರ ಮತ್ತು ವೆಂಕಟರಮಣಸ್ವಾಮಿಗೆ ವಿವಿಧ ಹಣ್ಣುಗಳ ಆಲಂಕಾರ ಮಾಡಲಾಗಿತ್ತು. ಯಾವ ದೇವಾಲಯಗಳಲ್ಲೂ ಭಕ್ತರ ಸಂಖ್ಯೆ ಹೆಚ್ಚಿರಲಿಲ್ಲ.

ಮಧ್ಯ ರಂಗನಿಗೂ ವಿಶೇಷ ಪೂಜೆ

ಕೊಳ್ಳೇಗಾಲ: ತಾಲ್ಲೂಕಿನ ಶಿವನಸಮುದ್ರದ ಮಧ್ಯರಂಗನಾಥಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿಯ ಪ್ರಯುಕ್ತ ವಿಶೇಷ ಧಾರ್ಮಿಕ ವಿಧಿ ವಿಧಾನಗಳು ನಡೆದವು. 

ಪ್ರತಿ ವರ್ಷ ವೈಕುಂಠ ಏಕಾದಶಿಯಂದು ರಂಗನಾಥಸ್ವಾಮಿಗೆ ಬೆಣ್ಣೆಯ ಅಲಂಕಾರ ಮಾಡಲಾಗುತ್ತದೆ. ಈಗ ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ಪ್ರಗತಿಯಲ್ಲಿರುವುದರಿಂದ ಬೆಣ್ಣೆ ಅಲಂಕಾರದ ಸೇವೆ ನಡೆಯಲಿಲ್ಲ. 

ಉಳಿದಂತೆ ಸ್ವಾಮಿಗೆ ಎಲ್ಲ ರೀತಿಯ ಅರ್ಚನೆ, ಅಭಿಷೇಕ ಮಾಡಲಾಯಿತು. ಹೂವಿನ ವಿಶೇಷ ಅಲಂಕಾರ ಮಾಡಲಾಗಿತ್ತು. 

ಕೋವಿಡ್‌ ನಿರ್ಬಂಧದ ಕಾರಣಕ್ಕೆ ಭಕ್ತರ ಸಂಖ್ಯೆ ಕಡಿಮೆ ಇತ್ತು. ಜೆಡಿಎಸ್‌ ಶಾಸಕ ಎಚ್.ಡಿ.ರೇವಣ್ಣ, ಹನೂರು ಶಾಸಕ ಆರ್.ನರೇಂದ್ರ ಸೇರಿದಂತೆ ಹಲವು ರಾಜಕೀಯ ಮುಖಂಡರು ರಂಗನಾಥನ ದರ್ಶನ ಪಡೆದರು.

ಉಪವಿಭಾಗಾಧಿಕಾರಿ ಗಿರೀಶ್ ದಿಲೀಪ್ ಬದೋಲೆ, ದೇವಾಲಯದ ಕಾರ್ಯನಿರ್ವಹಕಾಧಿಕಾರಿ ಸುರೇಶ್, ಅರ್ಚಕರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು