ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Varalakshmi vrat: ಚಾಮರಾಜನಗರದಲ್ಲಿ ಹಬ್ಬದ ಸಂಭ್ರಮ, ಮಹಿಳೆಯರಿಂದ ವ್ರತಾಚರಣೆ

Published 25 ಆಗಸ್ಟ್ 2023, 12:42 IST
Last Updated 25 ಆಗಸ್ಟ್ 2023, 12:42 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಾದ್ಯಂತ ಹಿಂದೂಗಳು ಶುಕ್ರವಾರ ವರ ಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.

ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯ ಹಿಂದಿನ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬ/ವ್ರತವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನ ಮಹಾಲಕ್ಷ್ಮಿಯನ್ನು ಪೂಜಿಸಿದರೆ ಕುಟುಂಬದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ. ಅಷ್ಟೈಶ್ವರ್ಯ ಲಭಿಸುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಹಾಗಾಗಿ, ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.  

ಹಬ್ಬದ ಅಂಗವಾಗಿ ಜಿಲ್ಲೆಯಾದ್ಯಂತ ಮನೆಗಳಲ್ಲಿ ಹಬ್ಬದ ವಾತಾವರಣ ಕಂಡು ಬಂತು. ಮಹಿಳೆಯರು ವರಮಹಾಲಕ್ಷ್ಮಿ ವ್ರತ ಆಚರಿಸಿದರು. 

ಬಾಳೆ ಕಂದು, ಮಾವಿನ ಸೊಪ್ಪು, ಕಬ್ಬಿನ ಪೈರುಗಳ ತೋರಣಗಳಿಂದ ಮನೆಗಳನ್ನು ಅಲಂಕರಿಸಲಾಗಿತ್ತು. ಮನೆ ಮುಂಭಾಗದಲ್ಲಿ ಮಹಿಳೆಯರು ಬಣ್ಣ ಬಣ್ಣದ ರಂಗೋಲಿಗಳು ಹಬ್ಬದ ಕಳೆಯನ್ನು ಹೆಚ್ಚಿಸಿತ್ತು.   

ಹೊಸ ಸೀರೆಯಲ್ಲಿ ಕಂಗೊಳಿಸುತ್ತಿದ್ದ ಮಹಿಳೆಯರು ಮನೆಗಳಲ್ಲಿ ಬೆಳಿಗ್ಗೆಯಿಂದ ಉಪವಾಸ ಇದ್ದು, ಮಹಾಲಕ್ಷ್ಮಿಯ ಮೂರ್ತಿ ಸ್ಥಾಪಿಸಿ, ಹೂವು, ಚಿನ್ನಾಭರಣಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಿದರು. ಹೊಸ ಧಿರಿಸಿನಲ್ಲಿ ಮಿಂಚುತ್ತಿದ್ದ ಹೆಣ್ಣುಮಕ್ಕಳು, ಮಕ್ಕಳು ಪೂಜೆಯಲ್ಲಿ ಪಾಲ್ಗೊಂಡರು.

ವಿವಿಧ ಭಕ್ಷ್ಯಗಳ ನೈವೇದ್ಯ
ಮನೆಗಳಲ್ಲಿ ಒಬ್ಬಟ್ಟು, ಚಕ್ಕುಲಿ, ಕೋಡುಬಳೆ, ಕರ್ಜಿಕಾಯಿ, ಪಾಯಸ ಸೇರಿದಂತೆ ವಿವಿಧ ಭಕ್ಷ್ಯಗಳನ್ನು ತಯಾರಿಸಿ ಮಹಾಲಕ್ಷ್ಮಿಗೆ ನೈವೇದ್ಯ ಮಾಡಿದರು. ನಗ, ನಾಣ್ಯಗಳನ್ನು ಲಕ್ಷ್ಮಿಯ ಮುಂದೆ ಇಟ್ಟು ಐಶ್ವರ್ಯಕ್ಕಾಗಿ ಪ್ರಾರ್ಥಿಸಿದರು. ಸುಮಂಗಲಿಯರನ್ನು ಮನೆಗೆ ಕರೆದು, ಅರಿಸಿನ– ಕುಂಕುಮ ಕೊಟ್ಟರು. 

ಹಬ್ಬದ ಅಡುಗೆ

ಹಬ್ಬದ ಅಂಗವಾಗಿ ಮನೆಗಳಲ್ಲಿ ವಿಶೇಷ ಅಡುಗೆಯನ್ನೂ  ಸಿದ್ಧಪಡಿಸಲಾಗಿತ್ತು. ನೆಂಟರಿಷ್ಟರು, ಸ್ನೇಹಿತರನ್ನು ಆಹ್ವಾನಿಸಿ ವಿಶೇಷ ಊಟ ಬಡಿಸಿದರು.

 ದೇವಾಲಯಗಳಲ್ಲೂ ಪೂಜೆ

ಹಬ್ಬದ ಅಂಗವಾಗಿ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು. ಮಹಾಲಕ್ಷ್ಮಿ ಸೇರಿದಂತೆ ದೇವಿಯರ ಸಾನಿಧ್ಯ ಇರುವ ದೇಗುಲಗಳಲ್ಲಿ ದೇವತೆಗಳ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ಕುಟುಂಬ ಸಮೇತರಾಗಿ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT