ಚಾಮರಾಜನಗರ: ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ದಿವಗಂತ ಆರ್.ಧ್ರುವನಾರಾಯಣ ಅವರ 62ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಇದೇ 31ರಂದು ಅವರ ಅಭಿಮಾನಿ ಬಳಗವು ನಗರದಲ್ಲಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.
‘ಧ್ರುವನಾರಾಯಣ ಅಭಿಮಾನಿ ಬಳಗದ ವತಿಯಿಂದ ಪ್ರತಿವರ್ಷವೂ ಸರಳವಾಗಿ ಸಮಾಜಮುಖಿಯಾಗಿ ಅವರ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಂಡು ಬರಲಾಗಿದ್ದು, ಈ ಬಾರಿ ಬಹಳ ದುಃಖದಿಂದ ಆಚರಣೆ ಮಾಡಲಾಗುತ್ತಿದೆ. ಅವರು ನಮ್ಮೊಂದಿಗೆ ಇಲ್ಲ ಬೇಸರ ತಂದಿದೆ. ಆದರೆ, ಅವರ ನೆನಪಿನಲ್ಲಿ ಈ ವರ್ಷವೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. 31ರಂದು ಕಣ್ಣಿನ ಉಚಿತ ತಪಾಸಣಾ ಶಿಬಿರ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ’ ಎಂದರು.
ನಗರದ ರೋಟರಿ ಭವನದಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಶಿಬಿರಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.
‘2013ರಿಂದ ಪ್ರತಿ ವರ್ಷವೂ ಧ್ರುವನಾರಾಯಣ ಹುಟ್ಟುಹಬ್ಬದ ಅಂಗವಾಗಿ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಅವರ ಸರಳ, ಸಜ್ಜನಿಕೆಯ ಆದರ್ಶಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ’ ಎಂದರು.
‘ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಶಾಲಾ ಮಕ್ಖಳಿಗೆ ಶಾ ಲಾಬ್ಯಾಗ್, ಸ್ಪೆಟರ್ ವಿತರಣೆ, ಗುಂಡ್ಲುಪೇಟೆ ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹಣ್ಣು- ಹಂಪಲು ವಿತರಣೆ, ಕೊಳ್ಳೇಗಾಲದಲ್ಲಿ ಆರೋಗ್ಯ ತಪಾಸಣೆ ಶಿಬಿರ ಅಯೋಜನೆ ಮಾಡಲಾಗಿದೆ. ಇದರ ಸದುಪಯೋಗಪಡೆದುಕೊಳ್ಳಬೇಕು’ ಎಂದು ಮರಿಸ್ವಾಮಿ ಮನವಿ ಮಾಡಿದರು.
ಆರ್.ಧ್ರುವನಾರಾಯಣ್ ಅಭಿಮಾನಿ ಬಳಗದ ಅಧ್ಯಕ್ಷ ಕಾಗಲವಾಡಿ ಚಂದ್ರು ಮಾತನಾಡಿ, ‘ಧ್ರುವನಾರಾಯಣ ಅಭಿಮಾನಿ ಬಳಗ ಮತ್ತು ಚೇತನ ಕಲಾವಾಹಿನಿ ವತಿಯಿಂದ ರೋಟರಿ ಡಯಾಲಿಸಿಸ್ ಕೇಂದ್ರಕ್ಕೆ ಆ ದಿನ ಬರುವ ಎಲ್ಲ ರೋಗಿಗಳ ವೆಚ್ಚವನ್ನು ಭರಿಸಲಾಗುತ್ತದೆ. ಮೂಡಲಧ್ವನಿ ವೃದ್ದಾಶ್ರಮದಲ್ಲಿ ಮಧ್ಯಾಹ್ನದ ಊಟ ವ್ಯವಸ್ಥೆ, ಉತ್ತುವಳ್ಳಿ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ, ನಗರದ 9 ನೇ ವಾರ್ಡ್ ಉರ್ದು ಶಾಲಾ ಮಕ್ಖಳಿಗೆ ನೋಟ್ ಪುಸ್ತಕ ವಿತರಣೆ, ಭೋಗಾಪುರ ಸರ್ಕಾರಿ ಶಾಲೆಗೆ ತಟ್ಟೆ, ಲೋಟ ವಿತರಣೆ, ಕೆ.ಮೂಕಳ್ಳಿ, ರಾಮಸಮುದ್ರ ಶಾಲೆಗೆ ತಟ್ಟೆ ಲೋಟ ವಿತರಣೆ, ಮಂಗಲ ಹೊಸೂರು ಶಾಲೆಗೆ ಟಿವಿ, ಆಂಡ್ರಾಯ್ಡ್ ಬಾಕ್ಸ್ ಮತ್ತು ಸಮವಸ್ತ್ರ ವಿತರಣೆ, ಕರಡಿಮೋಳೆ ಸರ್ಕಾರಿ ಸರ್ಕಾರಿ ಶಾಲೆಗೆ ನಲಿ- ಕಲಿ ಮಕ್ಕಳಿಗೆ ಪೀಠೋಪಕರಣ ವಿತರಣೆ, 62 ಮಂದಿ ಸೋಬಾನೆ ಕಲಾವಿದರಿಗೆ ಸಮವಸ್ತ್ರ ವಿತರಣೆ ಮಾಡುವ ಮೂಲಕ ಆಚರಣೆ ಮಾಡಲಾಗುವುದು’ ಎಂದರು.
ಮುಖಂಡರಾದ ಕೆ.ಪಿ.ಸದಾಶಿವಮೂರ್ತಿ, ಉಮೇಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವು, ಆರ್.ಧ್ರುವನಾರಾಯಣ್ ಅಭಿಮಾನಿ ಬಳಗದ ಪ್ರಧಾನ ಕಾರ್ಯದರ್ಶಿ ಎಲ್ಐಸಿ ನಾಗನಾಯಕ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.