ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಚವಾಡಿ ಗುಡ್ಡದ ಮಠ: 6 ವರ್ಷದ ಬಳಿಕ ವೀರಭದ್ರೇಶ್ವರ ಸ್ವಾಮಿ ಜಾತ್ರೆ

₹ 1.5 ಲಕ್ಷ ವೆಚ್ಚದಲ್ಲಿ ನೂತನ ರಥ ನಿರ್ಮಾಣ, ಬೆಳ್ಳಿ ಕವಚ ಧಾರಣೆ ಸಂಭ್ರಮ
Last Updated 8 ಸೆಪ್ಟೆಂಬರ್ 2019, 19:30 IST
ಅಕ್ಷರ ಗಾತ್ರ

ಚಾಮರಾಜನಗರ:ತಾಲ್ಲೂಕಿನಚನ್ನಪ್ಪನಪುರದಲ್ಲಿರುವ ಅಮಚವಾಡಿ ಗುಡ್ಡದ ಮಠದ ವೀರಭದ್ರೇಶ್ವರ ಸ್ವಾಮಿಯ ಜಾತ್ರೋತ್ಸವ ಆರು ವರ್ಷಗಳ ಬಳಿಕ ಸೆ.10ರಂದು ನಡೆಯಲಿದೆ.

ಮೂರು ವರ್ಷಕ್ಕೊಮ್ಮೆ ನಡೆಯುತ್ತಿದ್ದ ಜಾತ್ರೆ, ಬರಗಾಲ ಹಾಗೂ ರಥ ದುರಸ್ತಿ ಕಾರಣಕ್ಕೆ 2012ರ ಬಳಿಕ ನಡೆದಿಲ್ಲ. ಈಗ ₹ 1.5 ಲಕ್ಷ ವೆಚ್ಚದಲ್ಲಿ ಹೊಸ ರಥ ನಿರ್ಮಾಣವಾಗಿದೆ.

ಇತಿಹಾಸ: 12ನೇ ಶತಮಾನದಲ್ಲಿ ಚೋಳರ ಕಾಲದಲ್ಲಿ ನಿರ್ಮಾಣವಾದ ದೇವಸ್ಥಾನ ಇದು. ಶಿವನ ಆರಾಧಕರಾಗಿದ್ದ ಚೋಳರು ವೀರಭದ್ರಸ್ವಾಮಿಯನ್ನು ಇಲ್ಲಿ ಪ್ರತಿಷ್ಠಾಪನೆ ಮಾಡಿದರು ಎನ್ನುತ್ತದೆ ಇತಿಹಾಸ. ಮೈಸೂರು ರಾಜಮನೆತನದ ಆಡಳಿತದ ಕಾಲದಲ್ಲಿ ಮಹಾರಾಣಿ ಆಗಿದ್ದ ರಾಜಮ್ಮಣಿ ಎನ್ನುವವರು ದೇವಸ್ಥಾನದ ಜೀರ್ಣೋದ್ಧಾರಕ್ಕೆ ಮುಂದಾದರು ಎಂದು ಹೇಳುತ್ತಾರೆ ಹಿರಿಯರು.

ಬೆಳ್ಳಿ ಕವಚ ಆಕರ್ಷಣೆ: ದೇವಸ್ಥಾನ ಅಭಿವೃದ್ಧಿಯಾದ ನಂತರ ಮಹಾರಾಜರು ಪ್ರತಿವರ್ಷ ದೇವಸ್ಥಾನಕ್ಕೆ ಬಂದು ವೀರಭದ್ರಸ್ವಾಮಿಗೆ ಬೆಳ್ಳಿ ಕವಚ ಧಾರಣೆ ಮಾಡಿ ಜಾತ್ರೆ ಮಾಡಿಸುತ್ತಿದ್ದರು.ಮಹಾರಾಜರ ಕಾಲದಲ್ಲೇಬೆಳ್ಳಿ ಕವಚ ಸಿದ್ಧಗೊಂಡಿದೆ. ಪ್ರತಿವರ್ಷವೂ ಮಹಾರಾಜರು ಬಂದು ಬೆಳ್ಳಿ ಕವಚ ತೊಡಿಸುವ ಪದ್ಧತಿ ಜಯಚಾಮರಾಜೇಂದ್ರ ಒಡೆಯರ್‌, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರವರೆಗೂ ಇತ್ತು.ಸ್ವಾತಂತ್ರ್ಯ ನಂತರ ಈ ಪದ್ಧತಿ ಮುಂದುವರಿಯಲಿಲ್ಲ. ಅಂದಿನ ಅರ್ಚಕರಿಗೆ ಗುರುವಿನ ಸ್ಥಾನ ನೀಡಲಾಗಿತ್ತು. ಅರ್ಚಕರು ಜಾತ್ರಾ ಸಂದರ್ಭದಲ್ಲಿ ಪೂಜೆ ಸಲ್ಲಿಸಿ, ಪ್ರಸಾದವನ್ನು ಮಹಾರಾಜರಿಗೆ ನೀಡುತ್ತಿದ್ದರು ಎಂದು ಸ್ಥಳೀಯರು ಹೇಳುತ್ತಾರೆ.

ಬೆಳ್ಳಿ ಕವಚ ಈಗಮುಜರಾಯಿ ಇಲಾಖೆ ವಶದಲ್ಲಿದೆ. ಜಾತ್ರಾ ಸಂದರ್ಭದಲ್ಲಿ ಪೊಲೀಸ್‌ ಬಂದೋಬಸ್ತ್‌ನೊಂದಿಗೆ ಬೆಳ್ಳಿ ಕವಚ ಧಾರಣೆ ಮಾಡಲಾಗುತ್ತದೆ.ಬಳಿಕ ಇಲಾಖೆ ವಶಕ್ಕೆ ಪಡೆಯುತ್ತದೆ.

‘ಪ್ರತಿ ವರ್ಷ ನಡೆಯುತ್ತಿದ್ದ ಜಾತ್ರಾ ಮಹೋತ್ಸವ ಸ್ವಾತಂತ್ರ್ಯ ನಂತರ ಮೂರು ವರ್ಷಕ್ಕೊಮ್ಮೆ ನಡೆಸಲು ಆರಂಭಿಸಲಾಯಿತು. ಗೌರಿ–ಗಣೇಶ ಹಬ್ಬ ಮುಗಿದ 8 ಮತ್ತು 9ನೇ ದಿನ ಜಾತ್ರೆ ಜರುಗುತ್ತದೆ. 2012ರಿಂದಈಚೆಗೆ ಎರಡು ಬಾರಿ ಜಾತ್ರೆ ನಡೆಯಬೇಕಿತ್ತು. ಆದರೆ, ಬರಗಾಲ ಹಾಗೂ ರಥ ದುರಸ್ತಿಯಾಗಿದ್ದರಿಂದ6 ವರ್ಷ ರಥೋತ್ಸವ ನಡೆದಿರಲಿಲ್ಲ’ ಎಂದು ಅರ್ಚಕರಾದ ಪುಟ್ಟಸ್ವಾಮಾರಾಧ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ನೂತನ ರಥ ನಿರ್ಮಾಣ: ಗ್ರಾಮಸ್ಥರು ಒಗ್ಗೂಡಿ₹ 1.5 ಲಕ್ಷ ವೆಚ್ಚದಲ್ಲಿ 35 ಅಡಿ ಎತ್ತರದ ನೂತನ ರಥವನ್ನು ಸಿದ್ಧಗೊಳಿಸಿದ್ದಾರೆ. ತಾಲ್ಲೂಕಿನ ಹೊನ್ನಹಳ್ಳಿ ಗ್ರಾಮದ ಬಸವಣ್ಣ ಅವರು ಗೊಬ್ಬಳಿ ಮರದಿಂದ ರಥ ನಿರ್ಮಿಸಿದ್ದಾರೆ. ವೀರಭದ್ರೇಶ್ವರ ಸ್ವಾಮಿಯ ಕಂಚಿನ ಮೂರ್ತಿಯನ್ನು ರಥದಲ್ಲಿ ಕೂರಿಸಿದ ನಂತರ ಉತ್ಸವ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT