ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ಬೆನ್ನಿಗೆ ನಿಂತ ವೀರಶೈವ–ಲಿಂಗಾಯತ ಮಹಾಸಭಾ

ಸಿಎಂ ಬದಲಾವಣೆ ಮಾಡಿದರೆ ಸಮಾಜ ಸುಮ್ಮನಿರುವುದಿಲ್ಲ–ಮೂಡ್ಲುಪುರ ನಂದೀಶ್‌
Last Updated 20 ಜೂನ್ 2021, 15:52 IST
ಅಕ್ಷರ ಗಾತ್ರ

ಚಾಮರಾಜನಗರ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಬದಲಾವಣೆ ವಿಚಾರದಲ್ಲಿ ಬಿಜೆಪಿಯಲ್ಲಿ ಕೆಲವು ಮುಖಂಡರು ನೀಡುತ್ತಿರುವ ಹೇಳಿಕೆಯನ್ನು ಖಂಡಿಸಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕ, ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಇನ್ನೂ ಎರಡು ವರ್ಷಗಳ ಕಾಲ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂದು ಆಗ್ರಹಿಸಿದೆ.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಮೂಡ್ಲುಪುರ ನಂದೀಶ್‌ ಅವರು, ‘ ಯಡಿಯೂರಪ್ಪ ಅವರು ರಾಜ್ಯದ ಪ್ರಶ್ನಾತೀತ ನಾಯಕರು. ಎರಡು ವರ್ಷಗಳ ಅವಧಿಯಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ದಿಗಾಗಿ ಹಗಲಿರಳೆನ್ನದೇ ಶ್ರಮಿಸುತ್ತಿದ್ದಾರೆ. ಅವರು ಅಧಿಕಾರ ವಹಿಸಿಕೊಂಡ ದಿನದಿಂದಲೂ ಭೀಕರ ಪ್ರವಾಹ ಹಾಗೂ ಕೋವಿಡ್-19 ನಂತಹ ಸಂಕಷ್ಟಗಳೇ ಎದುರಾಗಿವೆ. ಈ ಸಂದಿಗ್ಧ ಪರಿಸ್ಥಿತಿಗಳನ್ನು ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ’ ಎಂದರು.

‘ರಾಜ್ಯದ ಅರ್ಥ ವ್ಯವಸ್ಥೆ ಹದಗೆಟ್ಟಿದ್ದರೂ, ಜನರ ಸಂಕಷ್ಟಕ್ಕೆ ಮರುಗಿ ಬಡವರು, ಶ್ರಮಿಕರು, ದೀನ ದಲಿತರಿಗೆ ವಿಶೇಷ ಪ್ಯಾಕೇಜ್‌ ಘೋಷಿಸಿದ್ದಾರೆ. ರೈತರ ಪ್ರಗತಿಯೂ ಒತ್ತು ನೀಡಿದ್ದಾರೆ. ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳಿಗೆ ₹1 ಲಕ್ಷ ಪರಿಹಾರವನ್ನೂ ಘೋಷಿಸಿದ್ದಾರೆ’ ಎಂದರು.

ಅಭಿವೃದ್ಧಿಯನ್ನೇ ಧ್ಯೇಯವಾಗಿಟ್ಟುಕೊಂಡು ಎರಡು ವರ್ಷಗಳಿಂದ ಯಡಿಯೂರಪ್ಪ ಅವರು ಕೆಲಸ ಮಾಡುತ್ತಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ರಾಜ್ಯವನ್ನು ಮುನ್ನಡೆಸುತ್ತಿರುವ ಸಂದರ್ಭದಲ್ಲಿ ಅವರನ್ನು ಬದಲಾವಣೆ ಮಾಡುವ ಮಾತುಗಳು ಕೇಳಿ ಬರುತ್ತಿರುವುದು ಸರಿಯಲ್ಲ. ಶಿಸ್ತಿನ ಪಕ್ಷವಾದ ಬಿಜೆಪಿಯಲ್ಲಿ ಅಶಿಸ್ತಿನಿಂದ ವರ್ತನೆ ಮಾಡುವವರ ವಿರುದ್ಧ ವರಿಷ್ಠರು ಕ್ರಮ ಕೈಗೊಳ್ಳಬೇಕು. ಯಡಿಯೂರಪ್ಪ ಅವರ ನಾಯಕತ್ವದ ವಿರುದ್ದ ಮಾತನಾಡುವವರು 2023ರ ಚುನಾವಣೆಯಲ್ಲಿ ತಮ್ಮ ಶಕ್ತಿಯನ್ನು ತೋರಿಸಲಿ’ ಎಂದು ನಂದೀಶ್ ಅವರು ಸವಾಲು ಹಾಕಿದರು.

ಇನ್ನು ಎರಡು ವರ್ಷ ಅವರಿಗೆ ಅವಕಾಶ ಮಾಡಿಕೊಡಬೇಕು. ಈ ಬಗ್ಗೆ ಬಿಜೆಪಿ ಹೈಕಮಾಂಡ್‌ ಸ್ಪಷ್ಟ ಸೂಚನೆ ನೀಡಬೇಕು. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಮುಂದಾದರೆ ಬಿಜೆಪಿ ತಕ್ಕ ಬೆಲೆ ತೆರಬೇಕಾಗುತ್ತದೆ. ರಾಜ್ಯದ ವೀರಶೈವ ಲಿಂಗಾಯತ ಸಮುದಾಯದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಉಪಾಧ್ಯಕ್ಷೆ ರತ್ನಮ್ಮ, ಕೋಶಾಧ್ಯಕ್ಷ ವಿಶ್ವನಾಥ್ ಇದ್ದರು.

‘ನಮಗೆ ಪಕ್ಷ ಅಲ್ಲ, ವ್ಯಕ್ತಿ ಮುಖ್ಯ’

ಸಮುದಾಯದವನ್ನು ಪ್ರತಿನಿಧಿಸುವ ಸಂಘಟನೆಯೊಂದು ಒಂದು ಪಕ್ಷ, ವ್ಯಕ್ತಿಯನ್ನು ಬಹಿರಂಗವಾಗಿ ಬೆಂಬಲಿಸುವುದು ಸರಿಯೇ ಎಂಬ ಪ್ರಶ್ನೆಗೆ ಉತ್ತರಿಸಿದ ನಂದೀಶ್‌ ಅವರು, ‘ನಾವು ಯಾವುದೇ ಪಕ್ಷದ ಪರವಾಗಿಲ್ಲ. ವ್ಯಕ್ತಿಯ ಪರ. ಯಡಿಯೂರಪ್ಪ ಅವರು ನಮ್ಮ ಸಮಾಜದ ನಾಯಕ. ಹಾಗಾಗಿ ಅವರನ್ನು ಬೆಂಬಲಿಸುತ್ತಿದ್ದೇವೆ. ಯಾವ ಪಕ್ಷದವರೇ ಇರಲಿ. ನಮ್ಮ ಸಮಾಜದ ಮುಖಂಡರನ್ನು ಸದಾ ಬೆಂಬಲಿಸುತ್ತೇವೆ’ ಎಂದು ಹೇಳಿದರು.

‘ಸಮಾಜದವರಿಗೆ ಅನ್ಯಾಯ, ತೊಂದರೆಯಾಗುತ್ತಿದ್ದರೆ ನಾವು ಸುಮ್ಮನೆ ಇರಲು ಆಗುವುದಿಲ್ಲ. ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ವಿರುದ್ಧ ನಮ್ಮ ಸಮಾಜದ ಶಾಸಕರೇ ಮಾತನಾಡುತ್ತಿರುವುದು ಸರಿಯಲ್ಲ’ ಎಂದು ಮಹಾಸಭಾ ಜಿಲ್ಲಾ ಘಟಕದ ಉಪಾಧ್ಯಕ್ಷ ಪ್ರಭುಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT