ಶುಕ್ರವಾರ, ಸೆಪ್ಟೆಂಬರ್ 17, 2021
30 °C
ಪ್ರೊ.ಚಿಂತಾಮಣಿ ಅವರ ಸಾಮಾಜಿಕ ಕಾಳಜಿ, ಬರವಣಿಗೆ ಕೊಂಡಾಡಿದ ಪ್ರೊ.ರೇಣುಕಾರ್ಯ

ವಿದ್ಯಮಾನ, ಅರ್ಥಚಿಂತನೆ ಕೃತಿಗಳ ಲೋಕಾರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನರ: ‘ನಮ್ಮ ಸಮಾಜದಲ್ಲಿ ಆರ್ಥಿಕ ಸಮಾನತೆ ಬರುವರೆಗೂ ದೇಶ ಪ್ರಗತಿ ಹೊಂದಲು ಸಾಧ್ಯವಿಲ್ಲ’ ಎಂದು ಅರ್ಥಶಾಸ್ತ್ರಜ್ಞ ಹಾಗೂ ಮೈಸೂರಿನ ಪೂಜಾ ಭಾಗವತ್‌ ಮಹಾಜನ ಸ್ನಾತಕೋತ್ತರ ಅಧ್ಯಯನ ಕೇಂದ್ರದ ‌ನಿರ್ದೇಶಕ ಪ್ರೊ.ಸಿ.ಕೆ.ರೇಣುಕಾರ್ಯ ಅವರು ಮಂಗಳವಾರ ಪ್ರತಿಪಾದಿಸಿದರು. 

ಲೇಖಕ ಹಾಗೂ ಅರ್ಥಶಾಸ್ತ್ರಜ್ಞ ಪ್ರೊ.ಆರ್‌.ಎಂ.ಚಿಂತಾಮಣಿ ಅವರ ‘ವಿದ್ಯಮಾನ’, ‘ಅರ್ಥಚಿಂತನೆ’ ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ‘ಉತ್ಪತ್ತಿಯಾಗುವ ವರಮಾನ ಹಾಗೂ ಸಂಪತ್ತು ಸಮಾಜದಲ್ಲಿ ಸಮಾನವಾಗಿ ಹಂಚಿಕೆಯಾಗದಿದ್ದರೆ ದೇಶವು ಪ್ರಗತಿಯಾಗಿದೆ ಎಂದು ಹೇಳಲು ಸಾಧ್ಯವಿಲ್ಲ’ ಹೇಳಿದರು. 

‘ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಬುದ್ಧಿವಂತರು ಇರುವ ದೇಶ ನಮ್ಮದು. ಸಂಪನ್ಮೂಲ ಬೇಕಾದಷ್ಟು ಇದೆ. ಆದರೆ, ಅದರ ನಿರ್ವಹಣೆ ಸರಿಯಾಗುತ್ತಿಲ್ಲ’ ಎಂದರು.

ಪ್ರೊ.ಚಿಂತಾಮಣಿ ಅವರ ವ್ಯಕ್ತಿತ್ವ ಹಾಗೂ ಬರವಣಿಗೆಯನ್ನು ಕೊಂಡಾಡಿದ ರೇಣುಕಾರ್ಯ ಅವರು, ‘ಚಿಂತಾಮಣಿ ಅವರ ಲೇಖನಗಳು ಸಂಶೋಧನಾತ್ಮಕವಾಗಿಲ್ಲ. ಆದರೆ, ಸಾಮಾನ್ಯ ಜನರ ಮನಮುಟ್ಟುವಂತೆ ಅರ್ಥಶಾಸ್ತ್ರದ  ವಿಚಾರಗಳನ್ನು ಸರಳವಾಗಿ, ಸ್ಪಷ್ಟವಾಗಿ ಬರೆಯುತ್ತಾರೆ. ದೇಶದ ಅರ್ಥವ್ಯವಸ್ಥೆ, ಅಥವಾ ದೇಶದ ಅರ್ಥ ವಿಚಾರಗಳನ್ನು ಜನರಿಗೆ ಅರ್ಥವಾಗಿ ಬರೆಯುವಂತೆ ಬರೆಯುವುದು ಸುಲಭವಲ್ಲ. ಆ ಸಾಮರ್ಥ್ಯ ಚಿಂತಾಮಣಿ ಅವರಿಗೆ ಸಿದ್ಧಿಸಿದೆ. ಆರ್ಥಿಕ ಹಾಗೂ ವಾಣಿಜ್ಯ ಕ್ಷೇತ್ರಗಳ ಎಲ್ಲ ವಿಚಾರಗಳ ಬಗ್ಗೆ ಸ್ಪಷ್ಟ ಚಿತ್ರಣ ಕೊಡುವ ಶಕ್ತಿ ಅವರಲ್ಲಿದೆ’ ಎಂದರು. 

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮಾತನಾಡಿ, ‘ಸರಳ ಸಜ್ಜನಿಕೆ ವ್ಯಕ್ವಿತ್ವದ ಚಿಂತಾಮಣಿ ಅವರಲ್ಲಿ ಮಾನವೀಯ ತುಡಿತ ಹಾಗೂ ಸಮಾಜಮುಖಿ ಆಲೋಚನೆಗಳಿವೆ. ಅವರ ಪ್ರತಿಯೊಂದು ಲೇಖನದಲ್ಲೂ ರೈತ, ಬಡ ಕಾರ್ಮಿಕ ಸೇರಿದಂತೆ ಸಮಾಜದ ಕಟ್ಟ ಕಡೆಯ ವ್ಯಕ್ತಿ ಕಾಣಿಸುತ್ತಾನೆ’ ಎಂದರು.‌

ಜಿಲ್ಲೆಯ ಆರ್ಥಿಕ ಪ್ರಗತಿಯ ವಿಚಾರವನ್ನು ಪ್ರಸ್ತಾಪಿಸಿದ ಅವರು, ‘ನಮ್ಮ ಜಿಲ್ಲೆಯಲ್ಲಿ ಅಭಿವೃದ್ಧಿಗೆ ವಿರೋಧವಾದ ವಾತಾವರಣ ಇದೆ ಎಂದು ನನಗೆ ಅನ್ನಿಸುತ್ತದೆ. ಇಲ್ಲಿ 2.11 ಲಕ್ಷ ಹಿಡುವಳಿದಾರರು ಇದ್ದಾರೆ. ಈ ಪೈಕಿ ಶೆ 60ರಿಂದ ಶೇ 70ರಷ್ಟು ಅತಿ ಸಣ್ಣ ರೈತರು. ಶೇ 25ರಷ್ಟು ಸಣ್ಣ ರೈತರು ಇದ್ದಾರೆ. ಜಿಲ್ಲೆಯು ಕೃಷಿ ಹಾಗೂ ಅದಕ್ಕೆ ಸಂಬಂಧಿಸಿ ಅರ್ಧ ವ್ಯವಸ್ಥೆಯನ್ನು ಹೊಂದಿದೆ. ಆದರೆ ಇಲ್ಲಿ ಕೌಶಲಯುಕ್ತ ಮಾನವ ಸಂಪನ್ಮೂಲದ ತಯಾರಿಕೆ ಆಗುತ್ತಿಲ್ಲ. ಇಲ್ಲಿರುವವರು ಬಹುತೇಕರು ಅರೆ ಕೌಶಲ ಹೊಂದಿರುವವರು ಇಲ್ಲವೇ ಕೌಶಲ ರಹಿತ ಜನರು. ಜಿಲ್ಲೆಯಲ್ಲಿ ಮಾನವ ಸಂಪನ್ಮೂಲ ಸಾಕಷ್ಟಿದ್ದು, ಕೈಗಾರಿಕೆಗಳಿಗೆ ವಿಪುಲ ಅವಕಾಶಗಳಿವೆ’ ಎಂದು ಪ್ರತಿಪಾದಿಸಿದರು. 

ಚಿಂತಾಮಣಿ ಅಭಿಮಾನಿ ಬಳಗದ ಬಿ.ವಿ.ವೆಂಕಟನಾಗಪ್ಪ ಶೆಟ್ಟಿ ಮಾತನಾಡಿದರು. ಅಭಿಮಾನಿ ಬಳಗದ ಎ.ಡಿಸಿಲ್ವಾ, ಕೆ.ವೆಂಟಕರಾಜು ಇದ್ದರು.    

‘ಅಭಿವೃದ್ಧಿಗಾಗಿ ಹೋರಾಟ ಮಾಡಿ’
ಪ್ರೊ.ಚಿಂತಾಮಣಿ ಅವರು ಮಾತನಾಡಿ, ‘ಚಾಮರಾಜನಗರದಿಂದ ತಮಿಳುನಾಡು ಕಡೆಗೆ ರೈಲು ಸಂಪರ್ಕ ಆಗಿ, ಕನ್ಯಾಕುಮಾರಿಯಿಂದ ಕಾಶ್ಮೀರದವರಗೆ ಸಂಪರ್ಕಿಸುವ ರೀತಿ ಆಗಬೇಕು ಎಂಬುದು ನನ್ನ ಆಸೆ. ಈಗ ಅದು ಆಗಿಲ್ಲ. ಮುಂದಿನ ತಲೆಮಾರು ಇದಕ್ಕಾಗಿ ಹೋರಾಟ ನಡೆಸಬೇಕು’ ಎಂದರು. 

ಚಾಮರಾಜನಗರ ಬೆಳೆಯಬೇಕು. ಸುತ್ತಮುತ್ತ ಕೈಗಾರಿಕೆಗಳು ಬರಬೇಕು. ನಗರವು ಬೆಂಗಳೂರಿಗೆ ಸಮೀಪದಲ್ಲಿದ್ದರೂ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇಲ್ಲಿನ ಜನರು ಜಿಲ್ಲೆಯ ಅಭಿವೃದ್ಧಿಗಾಗಿ ಹೋರಾಟ ಮಾಡಬೇಕು’ ಎಂದು ಅವರು ಸಲಹೆ ನೀಡಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು