ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಮಿ ವಿವೇಕಾನಂದರದ್ದು ಭಾರತದ ವ್ಯಕ್ತಿತ್ವ

ಮೈಸೂರಿನ ರಾಮಕೃಷ್ಣಾಶ್ರಮದ ಸ್ವಾಮಿ ಸರ್ವಜಯಾನಂದಜಿ ಮಹಾರಾಜ್ ಪ್ರತಿಪಾದನೆ
Last Updated 12 ಜನವರಿ 2020, 15:18 IST
ಅಕ್ಷರ ಗಾತ್ರ

ಚಾಮರಾಜನಗರ: ‘ಸ್ವಾಮಿ ವಿವೇಕಾನಂದರದು ಭಾರತದ ವ್ಯಕ್ತಿತ್ವವಾಗಿತ್ತು. ಅವರು ಭಾರತದ ಧರ್ಮ ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸುತ್ತಿದ್ದರು. ಅವರು ಜಡತ್ವದಿಂದ ಕೂಡಿದ್ದ ದೇಶಕ್ಕೆ ಪುನಶ್ಚೇತನ ತುಂಬಿದರು’ ಎಂದು ಮೈಸೂರಿನರಾಮಕೃಷ್ಣಾಶ್ರಮದ ಸ್ವಾಮಿ ಸರ್ವಜಯಾನಂದಜಿ ಮಹಾರಾಜ್ ಅವರು ಪ್ರತಿಪಾದಿಸಿದರು.

ಜಿಲ್ಲಾಡಳಿತ ಹಾಗೂ ಕಾಲೇಜು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಹಾಗೂ ಯುವ ಸಬಲೀಕರಣ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಭಾರತವನ್ನು ಅರಿಯಬೇಕಿದ್ದರೆ ವಿವೇಕಾನಂದ ಅವರನ್ನು ಅಧ್ಯಯನ ಮಾಡಿ ಎಂದು ರವೀಂದ್ರನಾಥ ಟ್ಯಾಗೋರ್‌ ಅವರು ಹೇಳಿದ್ದರು. ಧರ್ಮ ಮತ್ತು ಅಧ್ಯಾತ್ಮವನ್ನು ನಿರ್ಲಕ್ಷಿಸಿದ್ದೇ ಭಾರತದ ಹೀನಸ್ಥಿತಿಗೆ ಕಾರಣ ಎಂದು ಅವರು ಪ್ರತಿಪಾದಿಸಿದದ್ದರು’ ಎಂದು ಹೇಳಿದರು.

‘ವಿವೇಕಾನಂದರುಇಡೀ ಜಗತ್ತಿಗೆ ಸೇವಾ ಮಾರ್ಗವನ್ನು ಬೋಧಿಸಿದರು. ಸೇವೆಯ ಮೂಲಕ ಆಧ್ಯಾತ್ಮಿಕವಾಗಿ ಬೆಳೆಯಬಹುದು. ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದವರಿಗೆ ಸಾವಿರ ಪಟ್ಟು ಪ್ರತಿಫಲ ಸಿಗುತ್ತದೆ ಎಂದು ಸಾರಿ ಹೇಳಿದ್ದರು’ ಎಂದು ಹೇಳಿದರು.

‘ಅಮೆರಿಕದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದ ಅವರು ಮಾಡಿದ ಐದು ನಿಮಿಷದ ಭಾಷಣದಿಂದ ಜಗತ್ತಿನಲ್ಲಿ ಅವರು ಪ್ರಸಿದ್ಧರಾದರು. ‘ನಾವು ಎಲ್ಲ ಧರ್ಮಗಳ ಸಹಿಷ್ಣುಗಳು. ಎಲ್ಲ ಧರ್ಮಗಳು ಸತ್ಯ ಎಂಬುದನ್ನು ಒಪ್ಪುತ್ತೇವೆ’ ಎಂದು ಅವರು ಮಾಡಿದ ಘೋಷಣೆಗೆ ಇಡೀ ಜಗತ್ತೇ ಮೆಚ್ಚಿತ್ತು. 39 ವರ್ಷ ಬದುಕಿದ್ದರೂ 1000 ವರ್ಷಗಳಿಗೆ ಸಾಕಾಗುವಷ್ಟು ಮೌಲ್ಯಗಳನ್ನು ಹಾಗೂ ಸಂದೇಶಗಳನ್ನು ಬಿಟ್ಟುಹೋಗಿದ್ದಾರೆ’ ಎಂದರು.

ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ‘ವಿವೇಕಾನಂದರು ಆರೋಗ್ಯ ಮತ್ತು ಶಿಸ್ತಿಗೆ ಹೆಚ್ಚು ಆದ್ಯತೆ ನೀಡಿದ್ದರು. ಕಡಿಮೆ ವರ್ಷ ಬದುಕಿದ್ದರೂ ಸಾಕಷ್ಟು ಸಾಧನೆ ಮಾಡಿದ್ದಾರೆ. ಸಾಯುವುದಕ್ಕೂ ಮುನ್ನ ಏನನ್ನಾದರೂ ಸಾಧಿಸಬೇಕು ಎಂದು ಅವರು ಹೇಳಿದ್ದರು’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎ.ಆರ್.ಬಾಲರಾಜ್ ಅವರು ಮಾತನಾಡಿ, ‘ರಾಷ್ಟ್ರೀಯತೆ ಕಡೆ ಹೆಚ್ಚು ಒಲವು ಹೊಂದಿದ್ದ ಸ್ವಾಮಿ ವಿವೇಕಾನಂದರು ಚಿಕ್ಕವಯಸ್ಸಿನಲ್ಲಿಯೇ ದೊಡ್ಡ ಸಾಧನೆ ಮಾಡಿದರು. ಪ್ರತಿಯೊಬ್ಬರೂ ಅವರ ಸಂದೇಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್ ಮಾತನಾಡಿ, ‘ಯುವಜನತೆ ತಮ್ಮ ಚಿಂತನೆ, ವಿಚಾರ, ತರ್ಕವನ್ನು ರಾಷ್ಟ್ರ ನಿರ್ಮಾಣಕ್ಕೆ ಬಳಸಬೇಕು. ಈಗ ಯುವಜನರು ಫೇಸ್ ಬುಕ್‌, ವಾಟ್ಸ್‌ಆ್ಯಪ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ತಲ್ಲೀನರಾಗುತ್ತಿದ್ದಾರೆ. ಓದಿನ ಕಡೆ ಗಮನ ಹರಿಸುತ್ತಿಲ್ಲ. ಮಹಾತ್ಮರ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶೋಭಾ ಮಾತನಾಡಿದರು.

ಲ್ಯಾಪ್‌ಟಾಪ್‌ ವಿತರಣೆ: ವಿವಿಧ ಸರ್ಕಾರಿ ಪದವಿ ಕಾಲೇಜುಗಳ 10 ವಿದ್ಯಾರ್ಥಿಗಳಿಗೆ ಕಾಲೇಜು ಶಿಕ್ಷಣ ಇಲಾಖೆ ವತಿಯಿಂದ ಲ್ಯಾಪ್‌ಟಾಪ್‌ ವಿತರಿಸಲಾಯಿತು. ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ತಹಸೀಲ್ದಾರ್ ಮಹೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಿ.ಎಸ್.ಕೃಷ್ಣಮೂರ್ತಿ, ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಚ್.ಎಸ್.ಪ್ರೇಮಲತಾ ಇದ್ದರು.

‘ಶ್ರದ್ಧೆಯಿಂದ ಧರ್ಮ ಪಾಲಿಸಿ’
‘ಪ್ರತಿಯೊಬ್ಬರೂ ಧರ್ಮ, ಸಂಸ್ಕೃತಿ ಉಳಿಸಲು ಸಂಕಲ್ಪ ಮಾಡಬೇಕು. ಧರ್ಮವು ಮನುಷ್ಯನಲ್ಲಿ ಸುಪ್ತವಾಗಿರುವ ದೈವತ್ವವನ್ನು ವ್ಯಕ್ತಪಡಿಸುವಂತೆ ಮಾಡುತ್ತದೆ. ಅಧ್ಯಾತ್ಮ ಆಲೋಚನೆಗೆ ಪರಿಶ್ರಮ, ತರಬೇತಿ ಬೇಕು.ಪ್ರತಿಯೊಬ್ಬರೂ ಸ್ವಾಮಿ ವಿವೇಕಾನಂದರ ಜೀವನ ಸಂದೇಶ ಓದಬೇಕು. ಪ್ರತಿಯೊಬ್ಬ ವ್ಯಕ್ತಿಯೂ ಅವರವರ ಧರ್ಮವನ್ನು ಶ್ರದ್ಧೆ, ಪ್ರಾಮಾಣಿಕತೆಯಿಂದ ಅನುಷ್ಠಾನ ಮಾಡಿದರೆ ಸಮಾಜದಲ್ಲಿ ಸಾಮರಸ್ಯ ಸ್ಥಾಪಿಸಲು ಸಾಧ್ಯ ಎಂದು ವಿವೇಕಾನಂದರು ಪ್ರತಿಪಾದಿಸಿದ್ದರು’ ಎಂದುಸ್ವಾಮಿ ಸರ್ವಜಯಾನಂದಜಿ ಮಹಾರಾಜ್ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT