ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಗಡೂರಿಂದ ಬಸವಕಲ್ಯಾಣಕ್ಕೆ ಜಾಥಾ. ಏ.5ಕ್ಕೆ ಚಾಲನೆ

ವಚನ ಸಂವಿಧಾನ ಆಶಯ; ಸಮಾನ ಮನಸ್ಜರ ವೇದಿಕೆಯಿಂದ ಆಯೋಜನೆ
Published 28 ಮಾರ್ಚ್ 2024, 4:26 IST
Last Updated 28 ಮಾರ್ಚ್ 2024, 4:26 IST
ಅಕ್ಷರ ಗಾತ್ರ

ಚಾಮರಾಜನಗರ: ‘ವಚನ ಸಂವಿಧಾನ ಉಳಿಸೋಣ, ಬಹುತ್ವ ಸಮಾಜ ಕಟ್ಟೋಣ’ ಎಂಬ ಧ್ಯೇಯವಾಕ್ಯದೊಂದಿಗೆ ಜನರಲ್ಲಿ ಸಂವಿಧಾನ ರಕ್ಷಣೆ ಮತ್ತು ಮತದಾನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಮಾನ ಮನಸ್ಕರ ವೇದಿಕೆಯು ನಂಜನಗೂಡು ತಾಲ್ಲೂಕಿನ ತಗಡೂರಿನಿಂದ ಬೀದರ್‌ ಜಿಲ್ಲೆಯ ಬಸವಕಲ್ಯಾಣದವರೆಗೆ ಜಾಥಾ ಹಮ್ಮಿಕೊಂಡಿದ್ದು, ಏಪ್ರಿಲ್‌ 5ರಂದು ತಗಡೂರಿನಲ್ಲಿ ಚಾಲನೆ ನೀಡಲಿದೆ. 

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾನ ಮನಸ್ಕರ ವೇದಿಕೆಯ ಸಂಚಾಲಕ ಸಿ.ಕೆ.ಜಗನ್‌ ಅವರು, 'ವಿವಿಧ ಸಂಘಟನೆಗಳು ಒಟ್ಟಾಗಿ ಸಮಾನ ಮನಸ್ಕರ ವೇದಿಕೆಯನ್ನು ಕಟ್ಟಿಕೊಂಡಿದ್ದು, ಕಳೆದ ವರ್ಷದ ಡಿಸೆಂಬರ್‌ನಲ್ಲಿ ಇದು ಅಸ್ತಿತ್ವಕ್ಕೆ ಬಂದಿದೆ. ವಚನಗಳ ಆಶಯಗಳನ್ನು ಹೊಂದಿರುವ ಸಂವಿಧಾನ, ಎಲ್ಲರನ್ನೂ ಒಳಗೊಳ್ಳುವ, ಬಹುತ್ವ ಸಂವಿಧಾನ ಜಾರಿಗೆ ಬರಬೇಕು ಎಂಬ ಉದ್ದೇಶದಿಂದ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಈ ಜಾಥಾವನ್ನು ಹಮ್ಮಿಕೊಂಡಿದ್ದೇವೆ’ ಎಂದರು. 

ಏಪ್ರಿಲ್‌ 5ರಂದು, ಗಾಂಧೀಜಿಯವರು ಭೇಟಿ ನೀಡಿದ್ದ ನಂಜನಗೂಡು ತಾಲ್ಲೂಕಿನ ತಗಡೂರಿನಿಂದ ಜಾಥಾ ಆರಂಭವಾಗಲಿದೆ. ಮೇ 5ರಂದು ಬಸವಕಲ್ಯಾಣ ‌ಕಲ್ಯಾಣ ತಲುಪಲಿದೆ. ಜಾಗತಿಕ ಲಿಂಗಾಯತ ಮಹಾಸಭಾ, ದಲಿತ ಸಂಘಟನೆಗಳು, ಬಸವ ಕೇಂದ್ರ ಸೇರಿದಂತೆ ವಿವಿಧ ಸಂಘಟನೆಗಳು ನಮಗೆ ಬೆಂಬಲ ನೀಡಿವೆ. ವಚನ ಸಂವಿಧಾನವನ್ನು ಒಪ್ಪಿ ಅಪ್ಪಿಕೊಳ್ಳುವ ಸಮಾನ ಮನಸ್ಕರನ್ನು ಬರಮಾಡಿಕೊಳ್ಳುತ್ತೇವೆ. ಮತದಾನದ ಪ್ರಾಮುಖ್ಯತೆ ಕುರಿತು ಜನರಿಗೆ ಅರಿವು ಮೂಡಿಸಲಾಗುವುದು. ಜಾಥಾದ ಮೂಲಕ ಸಂವಿಧಾನದ ಆಶಯಗಳನ್ನು ಈಡೇರಿಸಲು ಜನರಲ್ಲಿ ಜಾಗೃತಿ ಮೂಡಿಸಲಾಗುವುದು’ ಎಂದು ಹೇಳಿದರು.

ರಂಗಕರ್ಮಿ ಕೆ.ವೆಂಕಟರಾಜು ಮಾತನಾಡಿ, ‘ಏಪ್ರಿಲ್‌ 5ರಂದು ಜಾಥಾ ನಗರಕ್ಕೆ ಬರಲಿದೆ. ನಗರದ ವಿವಿಧ ಬೀದಿಗಳಲ್ಲಿ ಜಾಥಾ ಸಾಗಲಿದೆ. ಅಲ್ಲಲ್ಲಿ ಭಾಷಣಗಳು ಇರಲಿವೆ. ಸಾರ್ವಜನಿಕ ಸಭೆಯನ್ನೂ ಆಯೋಜಿಸಲಾಗುವುದು’ ಎಂದು ಹೇಳಿದರು.   

‘ಸಂವಿಧಾನ ಈಗ ಅಪಾಯದಲ್ಲಿದೆ. ಅದರ ಚೌಕಟ್ಟಿನಲ್ಲೇ ಇದ್ದುಕೊಂಡು ಸಂವಿಧಾನವನ್ನು ಬದಲಾಯಿಸುವ ಪ್ರಯತ್ನ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಜನರು ಎಚ್ಚರಿಕೆಯಿಂದ ಮತದಾನ ಮಾಡಬೇಕು. ಪ್ರತಿಯೊಬ್ಬರೂ ತಮ್ಮ ಹಕ್ಕನ್ನು ಚಲಾಯಿಸಬೇಕು’ ಎಂದು ಹೇಳಿದರು. 

ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಖಜಾಂಚಿ ಶಿವಪ್ರಸಾದ್, ಪುನರ್ಚಿತ್‌ ಸಂಸ್ಥೆಯ ವೀರಭದ್ರನಾಯಕ ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT