ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷ್ಮೆ ಸೀರೆಗಳಲ್ಲಿ ಮತದಾನ ಜಾಗೃತಿ ಘೋಷ!

Published 23 ಏಪ್ರಿಲ್ 2024, 4:48 IST
Last Updated 23 ಏಪ್ರಿಲ್ 2024, 4:48 IST
ಅಕ್ಷರ ಗಾತ್ರ

ಚಾಮರಾಜನಗರ: ಮತದಾನ ಜಾಗೃತಿ ಮೂಡಿಸುವುದಕ್ಕಾಗಿ ಜಿಲ್ಲಾ ಸ್ವೀಪ್‌ ಸಮಿತಿಯು ರೇಷ್ಮೆ ಸೀರೆಗಳಲ್ಲೂ ಮತದಾನದ ಮಹತ್ವ ಸಾರುವ ಘೋಷ ವಾಕ್ಯಗಳನ್ನು ಮುದ್ರಿಸಿದೆ. 

ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ‘ಚುನಾವಣಾ ಪರ್ವ-ದೇಶದ ಗರ್ವ’ ಘೋಷವಾಕ್ಯವುಳ್ಳ ವಿವಿಧ ವರ್ಣಗಳಿಂದ ಕೂಡಿದ ರೇಷ್ಮೆ ಸೀರೆಗಳನ್ನು ಸೋಮವಾರ ಅನಾವರಣ ಗೊಳಿಸಿದರು. 

ನಗರದ ಜಿಲ್ಲಾಡಳಿತ ಭವನದ ಒಳಾವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಕೈಮಗ್ಗ ನೇಕಾರರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಸೀರೆಗಳನ್ನು ಪ್ರದರ್ಶಿಸಲಾಯಿತು. 

ಜಿಲ್ಲಾ ಸ್ವೀಪ್ ಸಮಿತಿ ನೋಡೆಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಪಿ.ಲಕ್ಷ್ಮಿ  ಮಾತನಾಡಿ, ‘ಜಿಲ್ಲೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾನ ಅರಿವು ಕುರಿತ ಕಾರ್ಯಕ್ರಮಗಳನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಆಯೋಜಿಸಲಾಗುತ್ತಿದೆ. ಅದರ ಭಾಗವಾಗಿ ಚುನಾವಣಾ ಘೋಷವಾಕ್ಯಗಳನ್ನು ಮುದ್ರಿಸಿರುವ ರೇಷ್ಮೆ ಸೀರೆಗಳ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರೂ ಮತದಾನ ಮಾಡಬೇಕೆಂಬುದೇ ಜಾಗೃತಿ ಕಾರ್ಯಕ್ರಮಗಳ ಉದ್ದೇಶ’ ಎಂದರು. 

‘ಈ ಬಾರಿಯ ಚುನಾವಣೆಯಲ್ಲಿ ಮತದಾನ ದಿನವಾದ 26ರಂದು ಚುನಾವಣಾ ನಿರತ ಎಲ್ಲ ಮಹಿಳಾ ಅಧಿಕಾರಿಗಳು, ಸಿಬ್ಬಂದಿ ಕೊಳ್ಳೇಗಾಲದ ಕೈಮಗ್ಗ ನೇಕಾರರು ವಿಶೇಷವಾಗಿ ವಿನ್ಯಾಸಗೊಳಿಸಿ ‘ಚುನಾವಣಾ ಪರ್ವ-ದೇಶದ ಗರ್ವ’ ಘೋಷವಾಕ್ಯಗಳನ್ನು ಮುದ್ರಿಸಿರುವ ರೇಷ್ಮೆ ಸೀರೆಗಳನ್ನು ಧರಿಸಿ ಕರ್ತವ್ಯ ನಿರ್ವಹಿಸಲಿದ್ದಾರೆ. ಸಾರ್ವಜನಿಕರಲ್ಲಿ ಮತದಾನ ಜಾಗೃತಿ ಮೂಡಿಸಲು ಇದು ಸಹಕಾರಿಯಾಗಲಿದೆ’ ಎಂದು ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಪಿ. ಲಕ್ಷ್ಮೀ ಅವರು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ, ಜಿಲ್ಲಾಧಿಕಾರಿಯ ಕಚೇರಿ ಚುನಾವಣಾ ತಹಶೀಲ್ದಾರ್ ಕೀರ್ತನಾ, ಇತರರು ಭಾಗವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT