ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಕಾಣದ ಮೋಳೆ ಬಡಾವಣೆ

ಕೊಳ್ಳೇಗಾಲ ನಗರ ವ್ಯಾಪ್ತಿಯಲ್ಲಿದ್ದರೂ ಮೂಲ ಸೌಕರ್ಯ ಕೊರತೆ
Last Updated 16 ಏಪ್ರಿಲ್ 2021, 16:41 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಇಲ್ಲಿನ ನಗರಸಭೆಯ 5ನೇ ವಾರ್ಡ್‌ನ ವ್ಯಾಪ್ತಿಗೆ ಬರುವ ಮೋಳೆ ಬಡಾವಣೆಯಲ್ಲಿ ಮೂಲ ಸೌಕರ್ಯಗಳ ಕೊರತೆಯಿಂದ ಜನರು ನಿತ್ಯವೂ ತೊಂದರೆ ಅನುಭವಿಸುತ್ತಿದ್ದಾರೆ.

ಬಡಾವಣೆಯಲ್ಲಿ ಸಾವಿರ ಕುಟುಂಬಗಳು ವಾಸ ಮಾಡುತ್ತಿವೆ. 3 ಸಾವಿರ ಜನರಿದ್ದಾರೆ. ಬಡವರು ಮತ್ತು ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಗರಸಭೆಯ ವ್ಯಾಪ್ತಿಯಲ್ಲಿದ್ದರೂ, ಅಭಿವೃದ್ಧಿ ಕಂಡಿಲ್ಲ.

ಚರಂಡಿ ವ್ಯವಸ್ಥೆ ಸರಿಯಿಲ್ಲ. ಬಡಾವಣೆಯ ರಸ್ತೆಗಳು ಹಾಳಾಗಿವೆ. ಬೀದಿ ದೀಪ ಬೆಳಕು ನೀಡುತ್ತಿಲ್ಲ. ಮುಖ್ಯ ರಸ್ತೆಯಲ್ಲೇ ಕಸದ ರಾಶಿಯಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿಯಿದೆ.

ಬಡಾವಣೆಯ ಕೆಲವು ಬೀದಿಗಳಲ್ಲಿ ಚರಂಡಿ ಇದ್ದರೂ ನೀರು ಸರಾಗವಾಗಿ ಹರಿಯುವುದಿಲ್ಲ. ಸ್ವಚ್ಛಗೊಳಿಸುವ ಕಾರ್ಯವನ್ನೂ ನಗರಸಭೆ ಸರಿಯಾಗಿ ಮಾಡುತ್ತಿಲ್ಲ. ಚರಂಡಿಯೊಳಗೆ ಆಳೆತ್ತರದ ಗಿಡಗಳು ಬೆಳೆದಿವೆ. ಇದರಿಂದ ಬಡಾವಣೆ ಗಬ್ಬು ನಾರುತ್ತಿದೆ. ಸಾಂಕ್ರಾಮಿಕ ರೋಗ ಬರಬಹುದು ಎಂಬ ಭೀತಿಯಲ್ಲಿ ಜನರಿದ್ದಾರೆ.

‘ಇನ್ನೂ ಕೆಲವು ಬೀದಿಗಳಲ್ಲಿ ಚರಂಡಿ ಇಲ್ಲ. ಹೀಗಾಗಿ ನಿವಾಸಿಗಳು ಮನೆಯ ಹಿಂಭಾಗದ ಖಾಲಿ ನಿವೇಶನದಲ್ಲಿ ಚರಂಡಿ ನೀರನ್ನು ಬಿಟ್ಟಿದ್ದಾರೆ. ತ್ಯಾಜ್ಯವನ್ನೂ ಖಾಲಿ ಜಾಗದಲ್ಲೇ ಎಸೆಯಲಾಗುತ್ತಿದೆ. ನಮ್ಮ ವಾರ್ಡ್‌ ಸಮಸ್ಯೆಗಳಿಂದ ಯಾವಾಗ ಮುಕ್ತಿ ಹೊಂದುತ್ತದೆಯೋ ತಿಳಿದಿಲ್ಲ’ ಎಂದು ಬಡಾವಣೆ ನಿವಾಸಿ ಮಹೇಶ್ ಹೇಳಿದರು.

ರಸ್ತೆ ಇಲ್ಲ: ಮೋಳೆಯ ಕೆಲವು ಬೀದಿಗಳಿಗೆ ಇನ್ನೂ ಸುಸಜ್ಜಿತ ರಸ್ತೆಗಳಿಲ್ಲ. ಕಲ್ಲು ಮಣ್ಣಿನ ರಸ್ತೆಯಲ್ಲೇ ಜನರು ಸಂಚರಿಸಬೇಕು. ಮಳೆ ಬಂದರೆ ರಸ್ತೆ ಕೆಸರುಮಯವಾಗುತ್ತದೆ.

‘ಸರಿಯಾದ ರಸ್ತೆ ಮತ್ತು ಚರಂಡಿ ಇಲ್ಲದೆ ಮಳೆಗಾಲದಲ್ಲಿ ನೀರು ಮನೆಗಳಿಗೆ ನುಗುತ್ತದೆ. ಇದರಿಂದಾಗಿ ನಾವೆಲ್ಲಾ ತುಂಬಾ ತೊಂದರೆ ಅನುಭವಿಸುವಂತಾಗಿದೆ. ಅಧಿಕಾರಿಗಳು ರಸ್ತೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕು’ ಎಂದು ಉಪ್ಪಾರ ಬಡಾವಣೆಯ ನಿವಾಸಿ ಮಹಾಲಕ್ಷ್ಮೀ ಒತ್ತಾಯಿಸಿದರು.

ಪಾಳು ಬಿದ್ದ ಶೌಚಾಲಯ, ಬಯಲೇ ಆಶ್ರಯ

ಬಡಾವಣೆಯ ಮುಖ್ಯ ರಸ್ತೆ ಸೇರಿದಂತೆ ಅಕ್ಕ ಪಕ್ಕದ ಖಾಲಿ ನಿವೇಶನ, ಜಮೀನುಗಳನ್ನು ಬಡಾವಣೆಯ ನಿವಾಸಿಗಳು ಪ್ರತಿ ನಿತ್ಯವೂ ಬಹಿರ್ದೆಸೆಗೆ ಬಳಸುತ್ತಿದ್ದಾರೆ. ಇದ್ದ ಶೌಚಾಲಯ ಪಾಳು ಬಿದ್ದ ಕಾರಣ ನಿವಾಸಿಗಳು ಬಯಲನ್ನೇ ಆಶ್ರಯಿಸಿದ್ದಾರೆ.

ಕೆಲವರು ಮನೆಯಲ್ಲೇ ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ಶೌಚಾಲಯವಿದ್ದರೂ ಅದನ್ನು ಉಪಯೋಗಿಸದೆ, ಬಯಲನ್ನೇ ಅವಲಂಬಿಸಿದ್ದಾರೆ.

‘ಅಭಿವೃದ್ಧಿ ಕೆಲಸ ಪ್ರಗತಿಯಲ್ಲಿ’

ಸಮಸ್ಯೆಗಳ ಬಗ್ಗೆ ಪ್ರತಿಕ್ರಿಯಿಸಿದ ಐದನೇ ವಾರ್ಡ್‌ ಸದಸ್ಯ ಧರಣೇಶ್‌, ‘ನನ್ನ ವಾರ್ಡ್‌ನಲ್ಲಿ ಕಡು ಬಡವರು ವಾಸ ಮಾಡುತ್ತಿದ್ದಾರೆ. ಮೂಲ ಸೌಕರ್ಯಗಳ ಕೊರತೆ ಬಗ್ಗೆ ಶಾಸಕರು, ಸಂಸದರ ಗಮನಕ್ಕೆ ತಂದಿದ್ದೇನೆ. ಹೆಚ್ಚಿನ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಈಗಾಗಲೇ ರಸ್ತೆ, ಚರಂಡಿ ಕಾಮಗಾರಿಗಳಿಗೆ ₹ 50 ಲಕ್ಷಕ್ಕೂ ಹೆಚ್ಚು ಅನುದಾನ ಬಿಡುಗಡೆಯಾಗಿದ್ದು, ಕೆಲಸ ನಡೆಯುತ್ತಿವೆ’ ಎಂದು ಹೇಳಿದರು.

ಬಡಾವಣೆಯಲ್ಲಿ ಮೂಲಸೌಕರ್ಯಗಳ ಕೊರತೆಯಿಂದ ನಿವಾಸಿಗಳಿಗೆ ತೊಂದರೆಯಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸಬೇಕು

- ರಾಮಸ್ವಾಮಿ, ಬಡಾವಣೆಯ ನಿವಾಸಿ

ಬಡಾವಣೆಯ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು. ನಗರಸಭೆಯಿಂದ ಪ್ರತಿ ನಿತ್ಯ ಕಸ ಸಂಗ್ರಹಿಸಲು ವ್ಯವಸ್ಥೆ ಮಾಡಲಾಗುವುದು

- ವಿಜಯ್, ನಗರಸಭೆ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT