ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು | ಬತ್ತಿದ ಜೀವನದಿ: ನದಿ ಪಾತ್ರ ಭಣಭಣ

Published 1 ಮಾರ್ಚ್ 2024, 7:02 IST
Last Updated 1 ಮಾರ್ಚ್ 2024, 7:02 IST
ಅಕ್ಷರ ಗಾತ್ರ

ಯಳಂದೂರು: ಬಿರು ಬಿಸಿಲಿಗೆ ತಾಲ್ಲೂಕಿನ ನದಿಗಳು ಬತ್ತುತ್ತಿದ್ದು, ಹೊಳೆ ಅಂಚಿನ ಕೊಳವೆ ಬಾವಿ, ಜನ, ಜಾನುವಾರುಗಳ ದಾಹ ನೀಗಿಸುತ್ತಿದ್ದ ಕಾಲುವೆ ಕೆರೆಯ ಅಂಗಳವೂ ದಿನೇ ದಿನೇ ತಳಮುಟ್ಟುತ್ತಿದೆ.

ತಾಲ್ಲೂಕಿನಲ್ಲಿ ಸುವರ್ಣಾವತಿ ನದಿ 20 ಕಿ.ಮೀ ಹರಿದು ಕಾವೇರಿ ನದಿ ಸೇರುತ್ತದೆ. ಮೂರು ವರ್ಷಗಳಿಂದ ಹೊಳೆಯಲ್ಲಿ ಜೀವ ಜಲ ಹರಿಯುತ್ತಿತ್ತು. ಹಾಗಾಗಿ, ಈ ಭಾಗದ ಕೃಷಿಕರು ನೀರಿನ ಅಭಾವದಿಂದ ಪಾರಾಗಿದ್ದರು. ಪ್ರತಿ ದಿನ ಆಲೆಮನೆ, ಇಟ್ಟಿಗೆ ಘಟಕ, ಪಶು ಪಕ್ಷಿ ಹಾಗೂ ಹೊಲ, ತೋಟಗಳ ನೀರಿನ ಅಗತ್ಯವನ್ನು ಪೂರೈಸುತ್ತಿತ್ತು. ಆದರೆ, ವಾರದಿಂದ ಬಿಸಿಲಿನ ರವ ಏರುಗತಿಯಲ್ಲಿ ಇದ್ದು, ನದಿಯ ನೀರಿನ ಪಸೆಯನ್ನು ಆರಿಸಿದೆ. ಇದರಿಂದ ನದಿ ಭಾಗದ ಮೀನುಗಾರರು ಹಾಗೂ ಮನೆವಾರ್ತೆ ಬಳಕೆದಾರರು ತಲ್ಲಣಿಸಿದ್ದಾರೆ.

‘ನದಿಯಲ್ಲಿ ನೀರು ತಳ ಮುಟ್ಟಿದೆ. ಇದರಿಂದ ಹೊಳೆ ಅಂಚಿನ ಸಸ್ಯ ವೈವಿಧ್ಯ ಒಣಗುತ್ತಿದೆ.  ಪುನುಗುಬೆಕ್ಕು, ಉಡ, ಪಕ್ಷಿಗಳ ಆಶ್ರಯ ತಾಣವಾಗಿದ್ದ ಪ್ರದೇಶ ಈಗ ಭಣಗುಟ್ಟುತ್ತಿದೆ. ಕಪ್ಪೆ, ಚಿಟ್ಟೆ ಮತ್ತಿತರ ಜೀವಿಗಳ ಸಂಚಾರ ಹಳಿ ತಪ್ಪಲಿದೆ. ಹಳ್ಳಿಗಳ ರೇಷ್ಮೆ ಕೈಗಾರಿಕೆಗೆ ನೀರಿನ ತೊಂದರೆ ಕಾಡಲಿದೆ’ ಎಂದು ನದಿ ಸಾಲಿನ ಗ್ರಾಮಗಳ ಜನರು ಆತಂಕ ವ್ಯಕ್ತಪಡಿಸಿದರು.

ಅಂತರ್ಜಲ ಕುಸಿತ: ‘ನದಿಗಳಲ್ಲಿ ನೀರು ಕುಸಿದರೆ ಅಂತರ್ಜಲವೂ ಪಾತಾಳ ಮುಟ್ಟಲಿದೆ. ಕೊಳವೆ ಬಾವಿ ಕೊರೆಸುವವರ ಸಂಖ್ಯೆ ಬೇಸಿಗೆಯಲ್ಲಿ ಹೆಚ್ಚಾಗಲಿದೆ. ಇದರಿಂದ ಬೆಳೆಗಾರರು ನೀರು ಮೇಲೆತ್ತಲೂ ಹೆಚ್ಚಿನ ಆರ್ಥಿಕ ಹೊರೆ ಹೊರಬೇಕಿದೆ. ನಾಲೆ ಸಂಪರ್ಕದಿಂದ ಹರಿಯುವ ಕಾಲುವೆಯಲ್ಲಿ ಈಗಾಗಲೇ ನೀರು ಹರಿಸುವುದನ್ನು ಸ್ಥಗಿತಗೊಳಿಸಿದ್ದು, ಮುಂದಿನ ತಿಂಗಳಲ್ಲಿ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ’ ಎಂದು ಗಣಿಗನೂರಿನ ಸುರೇಶ್ ಆತಂಕ ವ್ಯಕ್ತಪಡಿಸಿದರು.

ಘಟ್ಟದಲ್ಲಿ ಹುಟ್ಟುವ ನದಿ: ಸುವರ್ಣಾವತಿ ಹಾಗೂ ಭಾರ್ಗವಿ ನದಿಗಳು ಬಿಳಿಗಿರಿರಂಗನ ಬೆಟ್ಟದ ಪೂರ್ವ ಘಟ್ಟಗಳಲ್ಲಿ ಹುಟ್ಟುತ್ತವೆ. ಹೊನ್ನುಹೊಳೆ ಸುವರ್ಣಾವತಿ ಮತ್ತು ಚಿಕ್ಕಹೊಳೆ ಜಲಾಶಯಗಳಲ್ಲಿ ಕೂಡುತ್ತವೆ. ಮುಂಗಾರು, ಹಿಂಗಾರಿಯಲ್ಲಿ ಉತ್ತಮ ಮಳೆಯಾಗಿದ್ದರೆ ನೀರು ಹರಿಯುವ ಪ್ರಮಾಣ ಹೆಚ್ಚಾಗುತ್ತಿತ್ತು. ಮಳೆ ಕೊರತೆಯಿಂದಾಗಿ ಜಲಾಶಯಗಳಿಗೆ ನೀರು ಹರಿಯುವುವಿಕೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. 

ಬೇಸಿಗೆಯಲ್ಲೂ ಹರಿಯುತ್ತಿದ್ದ ನದಿ‌ ಹಲವು ಗ್ರಾಮಗಳಿಗೆ ನದಿ ನೀರೇ ಆಸರೆ ಜಲಾಶಯಗಳಲ್ಲೂ ಇಳಿದ ಜಲಮಟ್ಟ
ಭಾರ್ಗವಿ ನದಿಯಲ್ಲಿ ಇಳಿದ ನೀರು
ಬಿಆರ್‌ಟಿ ಹುಲಿ ಅಭಯಾರಣ್ಯದಲ್ಲಿ ಹರಿಯುವ ಭಾರ್ಗವಿ ನದಿಯಲ್ಲೂ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿದ. ನೀರು ಸಣ್ಣ ಕಾಲುವೆಯಂತೆ ಹರಿಯುತ್ತಿದೆ. ‘ಗೊಂಬೆಗಲ್ಲು ಮತ್ತು ಕೆರದಿಂಬ ಪೋಡುಗಳ ಜನರ ಅಗತ್ಯತೆಯನ್ನು ಈ ನದಿ ಪೂರೈಸುತ್ತದೆ. ಬೇಸಿಗೆಯಲ್ಲಿ ನದಿ ಸಮೀಪದ ಕಲ್ಲಿನ ಗುಂಡಿಗಳಲ್ಲಿ ನೀರು ಸಂಗ್ರಹಿಸಲು ಪುಟ್ಟ ಜಲಾವರ ನಿರ್ಮಿಸಲಾಗಿದೆ. ಸದ್ಯಕ್ಕೆ ನೀರು ಇದೆ. ಒಂದೆರಡು ತಿಂಗಳು ಮಳೆ ಬಾರದಿದ್ದರೂ ನಿರ್ವಹಿಸಬಹುದು. ವನ್ಯ ಜೀವಿಗಳು ಕೂಡ ಇದೇ ನೀರನ್ನು ಬಳಸಬೇಕಿದೆ’ ಎಂದು ಕೆರೆದಿಂಬ ಪೋಡಿನ ಮಾದೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT