ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಜಿಲ್ಲೆಯಲ್ಲಿ ರಾತ್ರಿ ಕರ್ಫ್ಯೂ, ವಾರಾಂತ್ಯ ಕರ್ಫ್ಯೂ

ತರಕಾರಿ ದಿನಸಿ, ಅಗತ್ಯ ವಸ್ತುಗಳ ಅಂಗಡಿಗಳಿಗೆ ಬೆ.6ರಿಂದ ಮ 2ರವರೆಗೆ ಅವಕಾಶ
Last Updated 7 ಆಗಸ್ಟ್ 2021, 1:23 IST
ಅಕ್ಷರ ಗಾತ್ರ

ಚಾಮರಾಜನಗರ: ನೆರೆಯ ಕೇರಳ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವುದರಿಂದ ರಾಜ್ಯ ಸರ್ಕಾರ ರಾಜ್ಯದಾದ್ಯಂತ ರಾತ್ರಿ ಕರ್ಫ್ಯೂ ಹಾಗೂ ಗಡಿಜಿಲ್ಲೆಗಳಲ್ಲಿ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿದ್ದು, ಕೇರಳ ಮತ್ತು ತಮಿಳುನಾಡಿನೊಂದಿಗೆ ಗಡಿ ಹಂಚಿಕೊಂಡಿರುವ ಚಾಮರಾಜನಗರದಲ್ಲೂ ಶುಕ್ರವಾರ ರಾತ್ರಿ 9ರಿಂದ ವಾರಾಂತ್ಯ ಕರ್ಫ್ಯೂ ಜಾರಿಗೆ ಬಂದಿದೆ.

ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರಲಿದ್ದು, ಉಳಿದ ದಿನಗಳಲ್ಲಿ ರಾತ್ರಿ 9ರಿಂದ ಬೆಳಿಗ್ಗೆ 5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರಲಿದೆ.

ವಾರಾಂತ್ಯ ಕರ್ಫ್ಯೂ ಅವಧಿಯಲ್ಲಿ ವ್ಯಾಪಾರ ವಹಿವಾಟು, ಜನರ ಓಡಾಟಗಳ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಅಗತ್ಯ ವಸ್ತುಗಳ ಮಾರಾಟ, ತುರ್ತು ಸೇವೆಗಳನ್ನು ಬಿಟ್ಟು, ಇತರ ಎಲ್ಲ ಚಟುವಟಿಕೆಗಳಿಗೆ ನಿಷೇಧ ಹೇರಲಾಗಿದೆ.

ಮಧ್ಯಾಹ್ನ 2ರವರೆಗೆ ಅವಕಾಶ:ಆಸ್ಪತ್ರೆ, ಕ್ಲಿನಿಕ್‌, ಔಷಧಿ ಅಂಗಡಿಗಳು ದಿನಪೂರ್ತಿ ತೆರೆದಿರಲಿವೆ. ಉಳಿದಂತೆ ಹಾಲು, ಹಣ್ಣು, ತರಕಾರಿ, ಮೀನು, ಮಾಂಸ, ದಿನಸಿ ಅಂಗಡಿಗಳು, ನ್ಯಾಯಬೆಲೆ ಅಂಗಡಿಗಳು ಸೇರಿದಂತೆ ಅಗತ್ಯ ವಸ್ತುಗಳ ಮಾರಾಟ, ವಹಿವಾಟಿಗೆ ಬೆಳಿಗ್ಗೆ 5 ರಿಂದ ಮಧ್ಯಾಹ್ನ 2ರವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೂ ಮಧ್ಯಾಹ್ನ 2 ಗಂಟೆಯವರೆಗೆ ವ್ಯಾಪಾರ ಮಾಡಲು ಅನುವು ಮಾಡಲಾಗಿದೆ.

ಮದ್ಯದ ಅಂಗಡಿಗಳು ಬೆಳಿಗ್ಗೆ 5 ರಿಂದ ಮ. 2ರವರೆಗೆ ವಹಿವಾಟು ನಡೆಸಬಹುದಾಗಿದ್ದು, ಪಾರ್ಸೆಲ್‌ ಮಾತ್ರ ಇರಲಿದೆ. ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳು ದಿನಪೂರ್ತಿ ತೆರೆಯಬಹುದಾಗಿದ್ದರೂ ಪಾರ್ಸೆಲ್‌ ಮಾತ್ರ ಕೊಡಬಹುದು. ಆಹಾರದ ಹೋಂ ಡೆಲಿವರಿಗೆ ಯಾವುದೇ ಅಡೆತಡೆ ಇರುವುದಿಲ್ಲ.

ರೈಲು ಸಂಚಾರ ಎಂದಿನಂತೆ ಇರಲಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳೂ ಸಂಚಾರ ನಡೆಸಲಿದೆ. ಆದರೆ, ಬಸ್‌ಗಳ ಸಂಖ್ಯೆಗಳು ಕಡಿಮೆ ಇರಲಿವೆ. ಪ್ರಯಾಣಿಕರ ಆಧಾರದಲ್ಲಿ ಸಮಯ ಹೊಂದಾಣಿಕೆ ಮಾಡಿಕೊಂಡು ಬಸ್‌ ಸೇವೆ ಒದಗಿಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಬಿ. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ರೈಲು, ಬಸ್‌ ನಿಲ್ದಾಣಗಳಿಗೆ ಪ್ರಯಾಣಿಕರನ್ನು ಕರೆದೊಯ್ಯುವ ವಾಹನಗಳು ಸಂಚರಿಸಲು ಅವಕಾಶ ಇದೆ. ಈ ವಾಹನಗಳಲ್ಲಿ ಪ್ರಯಾಣಿಸುವವರು ಪ್ರಯಾಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅಂದರೆ ರೈಲು ಟಿಕೆಟ್‌, ಬಸ್‌ ಟಿಕೆಟ್‌ ಹೊಂದಿರುವುದು ಕಡ್ಡಾಯ.

ಉಳಿದ ಸರ್ಕಾರಿ ಕಚೇರಿಗಳು, ಬ್ಯಾಂಕುಗಳು, ತುರ್ತು ಸೇವೆಗಳನ್ನು‌ಒದಗಿಸುವ ಉದ್ದಿಮೆಗಳು, ಸಂಸ್ಥೆಗಳ ಸಿಬ್ಬಂದಿ ಗುರುತಿನ ಚೀಟಿ ಇಟ್ಟುಕೊಂಡು ಓಡಾಡುವುದಕ್ಕೆ ಅಡ್ಡಿ ಇಲ್ಲ. ಅನಾರೋಗ್ಯದಂತಹ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಂಚಾರಕ್ಕೂ ಅನುವು ಮಾಡಲಾಗಿದೆ.

ಈಗಾಗಲೇ ಹಲವು ನಿರ್ಬಂಧ

ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿ ಈಗಾಗಲೇ ವಾರಾಂತ್ಯದಲ್ಲಿ ಹಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ದೇವಾಲಯಗಳಲ್ಲಿ ಶನಿವಾರ ಮತ್ತು ಭಾನುವಾರ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಭರಚುಕ್ಕಿ, ಹೊಗೆನಕಲ್‌ ಜಲಪಾತ ಪ್ರದೇಶಗಳು ವಾರಾಂತ್ಯದಲ್ಲಿ ಪ್ರವಾಸಿಗರಿಗೆ ಬಂದ್‌ ಆಗಿವೆ. ಬಂಡೀಪುರ ಹಾಗೂ ಕೆ.ಗುಡಿ ಸಫಾರಿ ಕೂಡ ರದ್ದಾಗಿದೆ.

ಜಿಲ್ಲಾ ವ್ಯಾಪ್ತಿಯಲ್ಲಿ ಯಾವುದೇ ಲಾಡ್ಜ್‌, ರೆಸಾರ್ಟ್‌, ಹೋಂ ಸ್ಟೇ, ಅರಣ್ಯ ವಸತಿಗೃಹಗಳಲ್ಲಿ ರಾತ್ರಿ ಉಳಿದುಕೊಳ್ಳಲು 72 ಗಂಟೆಗಳ ಅವಧಿಯಲ್ಲಿ ಮಾಡಿಸಿದ ಆರ್‌ಟಿ–ಪಿಸಿಆರ್‌ ಪರೀಕ್ಷೆಯ ನೆಗಟಿವ್‌ ವರದಿ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ.

ವಾರದ ಐದು ದಿನಗಳಲ್ಲಿ ದೇವಾಲಯಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ದಾಸೋಹ, ಪ್ರಸಾದ, ಉತ್ಸವ ಸೇರಿದಂತೆ ಎಲ್ಲ ಸೇವೆಗಳನ್ನು ರದ್ದುಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT