ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ಜಿಲ್ಲೆ ಚಾಮರಾಜನಗರಕ್ಕೆ ವರವಾಯಿತೇ ಪ್ರಕೃತಿ?

ಚಾಮರಾಜನಗರ ಹಸಿರು ಜಿಲ್ಲೆ: ಕಾಡು– ಕೋವಿಡ್‌ ಸಂಬಂಧ ಅಧ್ಯಯನದ ಅಗತ್ಯತೆ ಪ್ರತಿಪಾದನೆ
Last Updated 29 ಮೇ 2020, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕೋವಿಡ್‌–19 ಪ್ರಕರಣಗಳು ದಾಖಲಾಗುತ್ತಿದ್ದರೆ, ಚಾಮರಾಜನಗರವೊಂದೇ ಹಸಿರು ಜಿಲ್ಲೆಯಾಗಿ ಉಳಿದಿದೆ.

ಕೇರಳ, ತಮಿಳುನಾಡು ಪಕ್ಕದಲ್ಲೇ ಇದ್ದರೂ, ಸೋಂಕು ಕಾಣಿಸಿಕೊಂಡಿಲ್ಲ.ಕೊರೊನಾ ವೈರಸ್‌ ನಿಯಂತ್ರಣಕ್ಕೆ ಜಿಲ್ಲಾಡಳಿತ ಕೈಗೊಂಡಿರುವ ಕಟ್ಟುನಿಟ್ಟಿನ ಕ್ರಮಗಳ ಜೊತೆಗೆ, ಜಿಲ್ಲೆಯಲ್ಲಿರುವ ಪ್ರಕೃತಿ ಸಂಪತ್ತು ಕೂಡ ನೆರವಾಗಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

5,676 ಚದರ ಕಿ.ಮೀ ವಿಸ್ತೀರ್ಣ ಹೊಂದಿರುವ ಗಡಿಜಿಲ್ಲೆಯ ಶೇ 50ರಷ್ಟು ಭೂಭಾಗ, ಅರಣ್ಯದಿಂದ ಕೂಡಿದೆ. ಬಂಡೀಪುರ ಮತ್ತು ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶಗಳು, ಮಲೆ ಮಹದೇಶ್ವರ ಹಾಗೂ ಕಾವೇರಿ ವನ್ಯಧಾಮಗಳು ಜಿಲ್ಲೆಯ ಜೀವ ವೈವಿಧ್ಯವನ್ನು ಹೆಚ್ಚಿಸಿವೆ.

‘ಅರಣ್ಯ ಪ್ರದೇಶ ಹೆಚ್ಚಿರುವ ಕಡೆಗಳಲ್ಲಿ ಕೋವಿಡ್‌–19 ಪ್ರಕರಣಗಳು ಕಡಿಮೆ ದಾಖಲಾಗಿವೆ. ಜೊತೆಗೆ ಅಲ್ಲಿರುವ ಜನರ ರೋಗ ನಿರೋಧಕ ಶಕ್ತಿಯೂ ಹೆಚ್ಚಿದೆ’ ಎಂದು ಮಧ್ಯಪ್ರದೇಶದ ಅರಣ್ಯ ಇಲಾಖೆ ಇತ್ತೀಚೆಗೆ ನಡೆಸಿದ್ದ ಅಧ್ಯಯನದ ವರದಿ ಹೇಳಿತ್ತು.

ಈ ಅಧ್ಯಯನದ ವಿವರಗಳು ಚಾಮರಾಜನಗರ ಜಿಲ್ಲೆಗೆ ಹೆಚ್ಚು ಹೊಂದುತ್ತವೆ. ಪರಿಸರ ತಜ್ಞರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡ ಈ ವಾದವನ್ನು ಒಪ್ಪುತ್ತಾರೆ. ಆದರೆ, ಸಸ್ಯ ವಿಜ್ಞಾನಿಗಳು ಒಪ್ಪುವುದಿಲ್ಲ.

‘ಕಾಡು ಇರುವ ಪ್ರದೇಶದಲ್ಲಿ ಜೀವವೈವಿಧ್ಯ ಇರುತ್ತದೆ. ಚಾಮರಾಜನಗರದಲ್ಲಿ ಸಾವಿರಾರು ವೃಕ್ಷ ಸಂತತಿಗಳಿವೆ. ಸಾಮಾನ್ಯವಾಗಿ ಮರಗಳು ಹೂ ಬಿಡುವಾಗ, ಅವು ಹೊರಸೂಸುವ ವಾಸನೆ (ಸುಗಂಧ ಅಥವಾ ದುರ್ಗಂಧ) ಬ್ಯಾಕ್ಟೀರಿಯಾ ಹಾಗೂ ವೈರಸ್ ವಿರುದ್ಧ ಹೋರಾಡಲು ಶಕ್ತವಾಗಿರುತ್ತದೆ. ಉದಾಹರಣೆಗೆ ಹೊಂಗೆ ಮತ್ತು ಬೇವಿನ ಮರಗಳು ಹೂ ಬಿಟ್ಟಾಗ, ರೋಗಕಾರಕ ಕೀಟಗಳ ಸಂಖ್ಯೆ ಕಡಿಮೆ ಇರುತ್ತವೆ. ಯಾವಾಗಲೂ ಅಷ್ಟೆ, ಅರಣ್ಯ ಇದ್ದರೆ ಕಾಯಿಲೆಗಳು ಇರುವುದಿಲ್ಲ’ ಎಂದು ಪರಿಸರ ತಜ್ಞ ಡಾ. ಅ.ನ.ಯಲ್ಲಪ್ಪ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅರಣ್ಯದ ಇರುವಿಕೆಯಿಂದಾಗಿಯೇ ಕೋವಿಡ್‌–19 ನಿಯಂತ್ರಣಕ್ಕೆ ಬಂದಿದೆ ಎಂದು ನಾನು ಹೇಳುವುದಿಲ್ಲ. ಆದರೆ, ಅರಣ್ಯದ ವ್ಯಾಪ್ತಿಯಲ್ಲಿ ನೆಲೆಸಿರುವವರ ಆರೋಗ್ಯ ಉತ್ತಮವಾಗಿ ಇರುತ್ತದೆ. ಗುಣಮಟ್ಟದ ಹವೆ, ಶುದ್ಧ ನೀರು ಲಭ್ಯ ಇದ್ದರೆ ಮನುಷ್ಯನ ರೋಗ ನಿರೋಧಕಶಕ್ತಿ ಹೆಚ್ಚಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ನಡೆಸುವ ಅಗತ್ಯವಿದೆ’ ಎಂದು ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್‌) ಮನೋಜ್‌ ಕುಮಾರ್‌ ತಿಳಿಸಿದರು.

ಅರಣ್ಯ ಪ್ರಭಾವದ ಸಾಧ್ಯತೆ ಇಲ್ಲ

ಅರಣ್ಯದ ಉಪಸ್ಥಿತಿಯು ಕೋವಿಡ್‌–19 ಮೇಲೆ ಪ್ರಭಾವ ಬೀರುವ ಸಾಧ್ಯತೆ ಕಡಿಮೆ ಎಂಬುದು ಸಸ್ಯವಿಜ್ಞಾನಿಗಳ ಹೇಳಿಕೆ. ರಾಜ್ಯದ ಮಲೆನಾಡು ಭಾಗದಲ್ಲೂ ಕೋವಿಡ್‌–19 ಪ್ರಕರಣಗಳು ದಾಖಲಾಗಿರುವುದನ್ನು ಅವರು ಉದಾಹರಿಸುತ್ತಾರೆ.

‘ಮಲೆನಾಡಿನಲ್ಲಿ ಅರಣ್ಯ ಪ್ರದೇಶ ಸಾಕಷ್ಟಿದೆ. ಆದರೂ, ಅಲ್ಲಿ ಪ್ರಕರಣಗಳು ದಾಖಲಾಗಿವೆ. ಕೊರೊನಾ ಇಡೀ ಜಗತ್ತಿಗೆ ಹೊಸ ವೈರಸ್‌. ಅದರ ಬಗ್ಗೆ ಇನ್ನೂ ಸ್ಪಷ್ಟವಾಗಿ ವಿಜ್ಞಾನಿಗಳಿಗೆ ಗೊತ್ತಾಗಿಲ್ಲ. ಮನುಷ್ಯನಿಂದ ಮನುಷ್ಯನಿಗೆ ಇದು ಹರಡುತ್ತದೆ. ಅರಣ್ಯ ಹೆಚ್ಚು ಇದ್ದರೆ, ಮನುಷ್ಯರ ಸಂಪರ್ಕ ಕಡಿಮೆಯಾಗಿ ವೈರಸ್‌ ಹರಡದೇ ಇರುವ ಸಾಧ್ಯತೆ ಇರುತ್ತದೆ. ಜಿಲ್ಲಾಡಳಿತ ಕೈಗೊಂಡ ಕ್ರಮಗಳಿಂದಾಗಿ ಚಾಮರಾಜನಗರ ಹಸಿರುವಲಯದಲ್ಲಿದೆಯೇ ವಿನಾ ಅರಣ್ಯದಿಂದಲ್ಲ’ ಎಂದು ಮೈಸೂರಿನ ಯುವರಾಜ ಕಾಲೇಜಿನ ಜೀವವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಶರ್ವಾಣಿ ‘ಪ್ರಜಾವಾಣಿ’ ತಿಳಿಸಿದರು.

ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಕೃಪಾಕರ್‌ ಕೂಡ ಈ ತರ್ಕವನ್ನು ಒಪ್ಪುವುದಿಲ್ಲ.

‘ಈ ವೈರಸ್‌ ಗಾಳಿಯಲ್ಲಿ ಹರಡುವುದಿಲ್ಲ. ಹಾಗಾಗಿ, ಕಾಡಿಗೂ ಕೋವಿಡ್‌ಗೂ ಸಂಬಂಧ ಕಲ್ಪಿಸಲು ಸಾಧ್ಯವಿಲ್ಲ. ನಮ್ಮಲ್ಲಿ ಜೀವವೈವಿಧ್ಯದಿಂದ ಆರೋಗ್ಯದ ಮೇಲಿನ ಪರಿಣಾಮದ ಬಗ್ಗೆ ಸರಿಯಾದ ಅಧ್ಯಯನಗಳು ನಡೆದಿಲ್ಲ. ಹೆಚ್ಚು ಹೆಚ್ಚು ನಡೆಯುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಅರಣ್ಯವಿದ್ದರೆ ಪ್ರಾಣವಾಯು ಮತ್ತು ಜೀವಜಲ ಶುದ್ಧವಾಗಿರುತ್ತದೆ. ಪರಿಸರ ಸ್ವಚ್ಛವಾಗಿದ್ದರೆ ಮನುಷ್ಯನ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತದೆ ಎಂದು ಪರಿಸರ ತಜ್ಞ ಡಾ.ಯಲ್ಲಪ್ಪ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮಲ್ಲಿ ಹೆಚ್ಚಿನ ಭೂ ಭಾಗ ಅರಣ್ಯವಿದೆ. ಕಾಡು ಹಾಗೂ ಆರೋಗ್ಯದ ನಡುವೆ ಸಂಬಂಧವಿದ್ದು, ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯಬೇಕಿದೆ ಎಂದು ಚಾಮರಾಜನಗರ ಸಿಸಿಎಫ್ ಮನೋಜ್ ಕುಮಾರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT