ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ: ಸುರೇಶ್ ಕುಮಾರ್

ಅಧಿಕಾರಿಗಳು, ಶಾಸಕರೊಂದಿಗೆ ಸಂವಹನಕ್ಕೆ ವಾಟ್ಸ್‌ಆ್ಯಪ್‌ ಗ್ರೂಪ್‌ ರಚನೆ, ಜನಸಂಪರ್ಕ ಸಭೆ ನಡೆಸುವ ಚಿಂತನೆ
Last Updated 25 ಸೆಪ್ಟೆಂಬರ್ 2019, 15:43 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಇದು ಚಿಕ್ಕ ಜಿಲ್ಲೆ, ಗಡಿ ಜಿಲ್ಲೆ. ಬಹಳಷ್ಟು ಸಮಸ್ಯೆಗಳೂ ಇಲ್ಲಿವೆ. ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯೂ ಇದೆ. ಕೈಗಾರಿಕಾ ಚಟುವಟಿಕೆಗಳಿಲ್ಲ. ಬರದ ಸನ್ನಿವೇಶವೇ ಹೆಚ್ಚಿದೆ. ಹೀಗಾಗಿ ನನ್ನ ಮುಂದೆ ದೊಡ್ಡ ಸವಾಲಿದೆ. ಕೆಲಸ ಮಾಡಲು ಒಳ್ಳೆಯ ಅವಕಾಶವೂ ಇದೆ’ ಎಂದರು.

ವಾಟ್ಸ್‌ಆ್ಯಪ್‌ ಗ್ರೂಪ್‌: ಜಿಲ್ಲೆಯ ಸಮಸ್ಯೆಗಳನ್ನು ಪ್ರಸ್ತಾಪಿಸಲು ಹಾಗೂ ಅದಕ್ಕೆ ಪರಿಹಾರ ಕಂಡುಕೊಳ್ಳುವುದಕ್ಕಾಗಿಯೇ ಭೇಟಿ ನೀಡಿದ ಮೊದಲ ದಿನವೇ ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಒಳಗೊಂಡಿರುವ ವಾಟ್ಸ್‌ಆ್ಯಪ್‌ ಗ್ರೂಪೊಂದನ್ನು ರಚಿಸಿದ್ದೇವೆ. ಇದರಲ್ಲಿ ಶಾಸಕರು, ಸಂಸದರು, ಜಿಲ್ಲಾಧಿಕಾರಿ, ಎಸ್‌ಪಿ, ಹೆಚ್ಚುವರಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೇರಿದಂತೆ ಎಲ್ಲ ಅಧಿಕಾರಿಗಳು ಇದ್ದಾರೆ’ ಎಂದರು.

‘ಶಾಸಕರು, ಜನಪ್ರತಿನಿಧಿಗಳೊಂದಿಗೆ ಚರ್ಚೆ ನಡೆಸಿದ್ದೇನೆ. ನಾಲ್ವರು ಶಾಸಕರೂ ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪ್ರಸ್ತಾಪಿಸಿದ್ದಾರೆ. ಗುಂಡ್ಲುಪೇಟೆ, ಹನೂರು ಮತ್ತು ಕೊಳ್ಳೇಗಾಲದಲ್ಲಿ ಅರಣ್ಯ ಇಲಾಖೆ, ಕಂದಾಯ ಇಲಾಖೆಗಳ ನಡುವೆ ಸಮಸ್ಯೆ ಇದೆ. ಮುಂದಿನವಾರ ಬೆಂಗಳೂರಿನಲ್ಲಿ ಎರಡೂ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸುತ್ತೇನೆ. ಅದರಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲೆಯ ಇತರ ಅಧಿಕಾರಿಗಳು ಭಾಗವಹಿಸಲಿದ್ದಾರೆ’ ಎಂದರು.

ಹಳೆ ವ್ಯವಸ್ಥೆ ಜಾರಿಗೆ ಪ್ರಯತ್ನ: ‘ಇದುವರೆಗೂ ಕೈಗಾರಿಕೆಗಳಿಗೆ ಅನುಮತಿ ಪಡೆಯಲು ಏಕ ಗವಾಕ್ಷಿ ವ್ಯವಸ್ಥೆ ಇತ್ತು. ಜಿಲ್ಲಾಧಿಕಾರಿ ಅವರೇ ನೇರ ಅನುಮತಿ ಕೊಡುತ್ತಿದ್ದ‌ರು. ಆದರೆ, ಈಗ ಬೆಂಗಳೂರಿನಲ್ಲಿ ಅನುಮತಿ ನೀಡುವ ವ್ಯವಸ್ಥೆ ತರಲು ಪ್ರಯತ್ನ ನಡೆಯುತ್ತಿದೆ. ಶಾಸಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅವರೊಂದಿಗೆ ಮಾತನಾಡಿ, ಹಳೆಯ ವ್ಯವಸ್ಥೆಯನ್ನು ಜಾರಿಗೊಳಿಸಲು ಪ್ರಯತ್ನಿಸುತ್ತೇನೆ’ ಎಂದು ಅವರು ಹೇಳಿದರು.

ಕಾಮಗಾರಿಗಳ ಪರಿಶೀಲನೆ: ‘ನಗರೋತ್ಥಾನದ ಅಡಿಯಲ್ಲಿ ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತೇನೆ. ನನೆಗುದಿಗೆ ಬಿದ್ದಿರುವ ರಂಗಮಂದಿರ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತೇನೆ. ಜಿಲ್ಲಾ ಕ್ರೀಡಾಂಗಣದ ಸಮಸ್ಯೆಗಳೂ ಗಮನಕ್ಕೆ ಬಂದಿವೆ. ಎಲ್ಲವನ್ನೂ ಆದ್ಯತೆ ಮೇರೆಗೆ ಮಾಡುತ್ತೇನೆ’ ಎಂದು ಸುರೇಶ್‌ ಕುಮಾರ್‌ ಹೇಳಿದರು.

ಪದೇ ಪದೇ ಬರುತ್ತೇನೆ: ತಿಂಗಳಿಗೆ ಒಮ್ಮೆಯಾದರೂ ಜಿಲ್ಲೆಗೆ ಬರುತ್ತೀರಾ ಎಂದು ಕೇಳಿದ್ದಕ್ಕೆ, ‘ಯಾಕೆ‌ಇವನು ಬರುತ್ತಾನೋ ಎಂದು ಯೋಚಿಸುವಷ್ಟರ ಮಟ್ಟಿಗೆ ಬರುತ್ತೇನೆ’ ಎಂದು ನಗುತ್ತಲೇ ಹೇಳಿದರು.

‘ಜನಸಂಪರ್ಕ ಸಭೆಯೂ ನಡೆಸುತ್ತೇನೆ, ಗಡಿಭಾಗದ ಶಾಲೆಯಲ್ಲಿ ವಾಸ್ತವ್ಯವನ್ನೂ ಮಾಡುತ್ತೇನೆ’ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

ದೇಶಗಳಲ್ಲಿ ಮದ್ಯದ ಹಾವಳಿ ಹೆಚ್ಚುತ್ತಿರುವುದರ ಬಗ್ಗೆ ಗಮನ ಸೆಳೆದಾಗ, ‘ಲಾಬಿಯೊಂದು ಯುವ ಜನರನ್ನು ಮಾದಕ ದ್ರವ್ಯ ಮತ್ತು ಮದ್ಯದ ದಾಸರನ್ನಾಗಿ ಮಾಡುತ್ತದೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವ ಅಗತ್ಯವಿದೆ. ಇಂತಹ ಪ್ರಕರಣಗಳು ಗಮನಕ್ಕೆ ಬಂದಾಗಲೆಲ್ಲ, ಅದರ ಮೂಲವನ್ನು ಪತ್ತೆ ಹಚ್ಚಿ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ನವೆಂಬರ್‌ 1ರ ಗಡುವು: ‘ಚಾಮರಾಜನಗರ ಖಾಸಗಿ ಬಸ್‌ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದೆ. ನವೆಂಬರ್‌ 1ರೊಳಗೆ ಪೂರ್ಣಗೊಳಿಸಲು ಗಡುವು ನೀಡಲಾಗಿದೆ. ನಿಲ್ದಾಣವು ರಾಜ್ಯೋತ್ಸವದ ದಿನ ನಿಲ್ದಾಣದ ಉದ್ಘಾಟನೆ ನೆರವೇರಬೇಕು ಎಂದು ಸೂಚಿಸಲಾಗಿದೆ’ ಎಂದರು.

15 ದಿನಗಳಲ್ಲಿ ಕಾಮಗಾರಿ ಆರಂಭ: ಹುತ್ತೂರು ಏತ ಯೋಜನೆ ಅಡಿಯಲ್ಲಿ ಕೆರೆ ತುಂಬಿಸುವ ಕಾಮಗಾರಿ ವಿಳಂಬವಾಗಿರುವ ಬಗ್ಗೆ ಪ್ರಶ್ನೆ ಕೇಳಿದಾಗ, ಈ ವಿಚಾರದ ಬಗ್ಗೆ ನಿರಂಜನ್‌ಕುಮಾರ್‌ ಉತ್ತರಿಸುತ್ತಾರೆ ಎಂದು ಸಚಿವರು ಹೇಳಿದರು.

‘ಈ ಯೋಜನೆ ಅಡಿಯಲ್ಲಿ ಚಾಮರಾಜನಗರದ ಅರಕಲವಾಡಿ, ಸುವರ್ಣನಗರ ಕೆರೆ ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ ಬೊಮ್ಮನಹಳ್ಳಿ ಕೆರೆಗೆ ನೀರು ತುಂಬಿಸಲು ಪೈಪ್‌ಲೈನ್‌ ಅಳವಡಿಸಬೇಕು. ಇತ್ತೀಚೆಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನೀರಾವರಿ ಇಲಾಖೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ಸಭೆ‌ನಡೆದಿದೆ. ಶೀಘ್ರವಾಗಿ ಕಾಮಗಾರಿ ಆರಂಭಿಸಲು ಹಾಗೂ ಯೋಜನೆ ಪೂರ್ಣಗೊಳಿಸಲು ಮುಖ್ಯಮಂತ್ರಿ ಸೂಚಿಸಿದ್ದಾರೆ. 15 ದಿನಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ’ ಎಂದು ನಿರಂಜನ್‌ಕುಮಾರ್‌ ಹೇಳಿದರು.

ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದ ಕುಮಾರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್‌.ಆನಂದ್‌ ಇದ್ದರು.

ದೊಡ್ಡಾಣೆಗೆ ಭೇಟಿ

‘ಮೂರು ತಿಂಗಳ ಹಿಂದೆ ಹನೂರು ತಾಲ್ಲೂಕಿನ ದೊಡ್ಡಾಣೆಗೆ ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳನ್ನು ಕಣ್ಣಾರೆ ಕಂಡಿದ್ದೇನೆ. ಅವುಗಳ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಇತರ ಅಧಿಕಾರಿಗಳ ಗಮನ ಸೆಳೆದಿದ್ದೆ. ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಈಗ ಅಲ್ಲಿಗೆ ಕಚ್ಚಾರಸ್ತೆ ನಿರ್ಮಿಸಿದೆ. ಇನ್ನು 8–10 ದಿನಗಳಲ್ಲಿ ಅಲ್ಲಿಗೆ ಭೇಟಿ ಪರಿಶೀಲನೆ ನಡೆಸುತ್ತೇನೆ’ ಎಂದು ಸುರೇಶ್‌ ಕುಮಾರ್‌ ಹೇಳಿದರು.

10 ದಿನಗಳಲ್ಲಿ ಕೆಡಿಪಿ ಸಭೆ ಕರೆದು ಜಿಲ್ಲೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿಸ್ತೃತ ಚರ್ಚೆ ಮಾಡಲಾಗುವುದು ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT