ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಸೇರುವುದಿಲ್ಲ: ಎನ್‌.ಮಹೇಶ್‌ ಸ್ಪಷ್ಟನೆ

Last Updated 4 ಆಗಸ್ಟ್ 2019, 11:01 IST
ಅಕ್ಷರ ಗಾತ್ರ

ಕೊಳ್ಳೇಗಾಲ: ‘ನಾನು ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ. ಬಿಎಸ್‌ಪಿಯಲ್ಲಿ ಇಲ್ಲದಿದ್ದರೂ ನಾನು ಪಕ್ಷದ ಶಾಸಕನೇ’ ಎಂದು ಕೊಳ್ಳೇಗಾಲ ಶಾಸಕ ಎನ್‌.ಮಹೇಶ್‌ ಅವರು ಭಾನುವಾರ ಸ್ಪಷ್ಟಪಡಿಸಿದರು.

‘ಕೆಲವು ಕಿಡಿಗೇಡಿಗಳು ನನ್ನ ಬಗ್ಗೆಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರ ನಿರ್ದೇಶನದಂತೆ ವಿಶ್ವಾಸಮತ ವೇಳೆ ಸದನದಿಂದ ದೂರ ಉಳಿದಿದ್ದೆ. ಹೈಕಮಾಂಡ್‌ ಸೂಚನೆಯಂತೆ ನಡೆದುಕೊಂಡಿದ್ದೇನೆ. ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಬೇಕು ಎಂದು ಮಾಯಾವತಿ ಟ್ವೀಟ್‌ ಮಾಡಿರುವುದು ನನ್ನ ಗಮನಕ್ಕೆ ಬಂದಿರಲಿಲ್ಲ’ ಎಂದು ಸುದ್ದಿಗಾರರಿಗೆ ಅವರು ತಿಳಿಸಿದರು.

ಭೇಟಿ ನಿಜ: ‘ಐದು ದಿನಗಳ ಹಿಂದೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಯಾಗಿರುವುದು ನಿಜ. ಅದು ಬಿಜೆಪಿ ಸೇರುವುದಕ್ಕಲ್ಲ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚಿಸಲು ಹಾಗೂ ಹೆಚ್ಚಿನ ಅನುದಾನ ಕೇಳಲು ಅವರ ಬಳಿಗೆ ಹೋಗಿದ್ದೆ. ಇದನ್ನೇ ಬಳಸಿಕೊಂಡು ನನ್ನ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ’ ಎಂದು ಹೇಳಿದರು.

‘ನಾನು ಇಂದಿಗೂ ಪಕ್ಷಕ್ಕೆ ನಿಷ್ಠನಾಗಿದ್ದೇನೆ. ಬೇರೆ ರಾಜಕೀಯ ಪಕ್ಷಗಳೊಂದಿಗೆ ಒಡನಾಟ ಇಟ್ಟುಕೊಂಡಿಲ್ಲ. ಬಿಡಿಗಾಸು ಕೂಡ ಪಡೆದಿಲ್ಲ. ಸದನದಲ್ಲಿ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಿ ಎಂದು ಹಿಂದಿನ ವಿಧಾನಸಭಾ ಅಧ್ಯಕ್ಷ ರಮೇಶ್‌ ಕುಮಾರ್‌ ಅವರಿಗೆ ಪತ್ರವನ್ನೂ ಬರೆದಿದ್ದೆ. ರಾಜ್ಯದಲ್ಲಿ ನಾನು ಬಿಎಸ್‌ಪಿಯ ಏಕೈಕ ಶಾಸಕ. ಸ್ವತಂತ್ರವಾಗಿದ್ದೇನೆ’ ಎಂದರು.

‘ಪಕ್ಷದಿಂದ ಉಚ್ಚಾಟನೆ ಮಾಡಿರುವ ಪ್ರಕರಣ ಮುಂದಿನ ದಿನಗಳಲ್ಲಿ ಸರಿಯಾಗಲಿದೆ. ಈಗ ನಾನು ಕ್ಷೇತ್ರದಲ್ಲೇ ಇದ್ದು, ಜನರ ಜೊತೆ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ. ಪಕ್ಷದ ನಾಯಕರ ಆದೇಶದಂತೆ ತಟಸ್ಥನಾಗಿರುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT