ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಂದು ವಿಶ್ವ ಬಾಯಿ ಆರೋಗ್ಯ ದಿನ: ಬಾಯಿ ಆರೋಗ್ಯದ ಬಗ್ಗೆಯೂ ಇರಲಿ ಕಾಳಜಿ

ಇಂದು ವಿಶ್ವ ಬಾಯಿ ಆರೋಗ್ಯ ದಿನ: ದೇಹದ ಆರೋಗ್ಯಕ್ಕೂ ಬಾಯಿಯ ಸ್ವಾಸ್ಥ್ಯಕ್ಕೂ ಇದೆ ಸಂಬಂಧ
Published 20 ಮಾರ್ಚ್ 2024, 7:56 IST
Last Updated 20 ಮಾರ್ಚ್ 2024, 7:56 IST
ಅಕ್ಷರ ಗಾತ್ರ

ಚಾಮರಾಜನಗರ: ಮನುಷ್ಯನ ಬಾಯಿಯ ಆರೋಗ್ಯಕ್ಕೂ ದೇಹದ ಆರೋಗ್ಯಕ್ಕೂ ಸಂಬಂಧ ಇದೆ. ದೇಹ ಆರೋಗ್ಯದಿಂದ ಇರಬೇಕಾದರೆ ನಮ್ಮ ಬಾಯಿಯ ಸ್ವಾಸ್ಥ್ಯ ಚೆನ್ನಾಗಿರಬೇಕು. ಆದರೆ, ಬಹಳಷ್ಟು ಜನರು ಬಾಯಿಯ ಆರೋಗ್ಯವನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. 

ಹಲ್ಲುಗಳು, ವಸಡನ್ನು ಸ್ವಚ್ಛವಾಗಿಟ್ಟಷ್ಟೂ ಬಾಯಿಯ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಹೇಳುತ್ತಾರೆ ದಂತ ವೈದ್ಯರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮ ಅಡಿಯಲ್ಲಿ ಜನರಲ್ಲಿ ಬಾಯಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ದಂತ ಚಿಕಿತ್ಸೆಗಳನ್ನು ನೀಡುತ್ತಾ ಬಂದಿದೆ. 

ಜಾಗೃತಿ ಕೊರತೆ: ಬಹಳಷ್ಟು ಜನರು ಬಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಅದರ ಬಗ್ಗೆ ಜಾಗೃತಿಯೂ ಇಲ್ಲ. ಹಲ್ಲುಗಳನ್ನು ಸ್ಬಚ್ಛವಾಗಿಟ್ಟುಕೊಳ್ಳುವ ಅಭ್ಯಾಸವೂ ಇಲ್ಲ. ಇದು ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

‘ಬಾಯಿಯ ಆರೋಗ್ಯ ಸಾಮಾನ್ಯ ಆರೋಗ್ಯದ ಕೈಗನ್ನಡಿ ಎಂದು ಹೇಳಲಾಗುತ್ತದೆ. ನಮ್ಮ ಹಲ್ಲು, ಬಾಯಿ ಎಷ್ಟು ಸ್ವಚ್ಛವಾಗಿರಬೇಕು ಎಂಬುದನ್ನು ಈ ಸಾಲು ಹೇಳುತ್ತದೆ. ವ್ಯಕ್ತಿಯು ಗರ್ಭದಲ್ಲಿ ಇರುವಾಗಿನಿಂದ ಸಾಯುವವರೆಗೂ ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯ’ ಎಂದು ಹೇಳುತ್ತಾರೆ ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮದ ಜಿಲ್ಲಾ ಅಧಿಕಾರಿ ಡಾ.ಪ್ರಿಯದರ್ಶಿನಿ. 

‘ಗರ್ಭಿಣಿಯರಿಗೆ ಹಲ್ಲು, ವಸಡಿನ ತೊಂದರೆ ಇದ್ದರೆ ಹಾರ್ಮೋನ್‌ ಅಸಮತೋಲನವಾಗಿ ಹೆರಿಗೆಗೆ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಅವಧಿ ಪೂರ್ವ ಹೆರಿಗೆಯಾಗಬಹುದು ಅಥವಾ ಮಗುವಿನ ತೂಕ ಕಡಿಮೆ ಇರಬಹುದು. ಇಲ್ಲವೇ ಗರ್ಭಪಾತವೂ ಆಗಬಹುದು. ಹೆಣ್ಣುಮಕ್ಕಳು ವಯಸ್ಕರಾಗುತ್ತಿರುವ ಸಂದರ್ಭದಲ್ಲೂ ಸಮಸ್ಯೆಗಳಾಗುತ್ತವೆ. ಬಾಯಿಯ ಆರೋಗ್ಯಕ್ಕೂ ಹೃದ್ರೋಗಕ್ಕೂ ಸಂಬಂಧವಿದೆ ಎಂಬುದನ್ನು ಸಂಶೋಧನೆಗಳು ಹೇಳಿವೆ’ ಎಂದು ಅವರು ವಿವರಿಸಿದರು.    

ವರ್ಷಕ್ಕೊಮ್ಮೆ ತಪಾಸಣೆ ಮುಖ್ಯ: ಪ್ರತಿಯೊಬ್ಬರೂ ವರ್ಷಕ್ಕೊಮ್ಮೆ ದಂತ ವೈದ್ಯರ ಬಳಿಗೆ ತೆರಳಿ ಬಾಯಿಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡುತ್ತಾರೆ ವೈದ್ಯರು. 

‘ಗರ್ಭಣಿಯರಿಗೆ ನೀಡುವ ತಾಯಿ ಕಾರ್ಡ್‌ನಲ್ಲಿ ದಂತ ತಪಾಸಣೆಯ ಉಲ್ಲೇಖವಿದೆ. ಗರ್ಭಿಣಿಯರು ತಪ್ಪದೇ ದಂತ ವೈದ್ಯರ ಬಳಿಗೆ ತೆರಳಿ ತಪಾಸಣೆ ಮಾಡಿಸಬೇಕು. ಆದರೆ, ಬಹುತೇಕರು ಇದನ್ನು ಮಾಡಿಸಿಕೊಳ್ಳುವುದಿಲ್ಲ. ಅದೇ ರೀತಿ ಮಕ್ಕಳಲ್ಲಿ ಹಲ್ಲು ಬರಲು ಆರಂಭವಾದ ನಂತರ ಬೆರಳಿಗೆ ಬಟ್ಟೆಯನ್ನು ಸುತ್ತಿ ಅದರಿಂದ ಹಲ್ಲುಗಳನ್ನು ನಯವಾಗಿ ಮಸಾಜ್‌ ಮಾಡಬೇಕು. ಎರಡು ವರ್ಷವಾದಾಗ ಬಹುತೇಕ ಹಲ್ಲುಗಳು ಬರುತ್ತವೆ. ಆಗ ಬ್ರಶ್‌ಗೆ ಸ್ವಲ್ಪವೇ ಪೇಸ್ಟ್‌ ಹಾಕಿ ಹಲ್ಲುಜ್ಜಬೇಕು. ಹಾಲು ಹಲ್ಲು ಹೇಗೂ ಬಿದ್ದು ಹೋಗುತ್ತದೆ ಎಂಬ ಭಾವನೆ ಪೋಷಕರಲ್ಲಿದೆ. ಆದರೆ, ಅದರ ಆರೋಗ್ಯವೂ ಮುಖ್ಯ. ಅದು ಸರಿಯಾಗಿದ್ದರೆ ನಂತರ ಬರುವ ಹಲ್ಲುಗಳು ಚೆನ್ನಾಗಿರುತ್ತವೆ’ ಎಂದು ಪ್ರಿಯದರ್ಶಿನಿ ಹೇಳಿದರು. 

ಎರಡು ಹೊತ್ತು ಹಲ್ಲುಜ್ಜಿ: ‘ಬಾಯಿಯ ಆರೋಗ್ಯ ಕಾಪಾಡಬೇಕಾದರೆ ದಿನಕ್ಕೆ ಎರಡು ಹೊತ್ತು ಕಡ್ಡಾಯವಾಗಿ ಹಲ್ಲುಜ್ಜಬೇಕು. ಬೆಳಿಗ್ಗೆ ಎದ್ದ ತಕ್ಷಣ ಮತ್ತು ರಾತ್ತಿ ಊಟವಾದ ಬಳಿಕ. ಮಕ್ಕಳು ಮಣ್ಣು, ಮಸಿ, ಕಡ್ಡಿಗಳಲ್ಲಿ ಹಲ್ಲುಜ್ಜುವುದು ಒಳ್ಳೆಯದಲ್ಲ ಎಂದು ಕಿವಿ ಮಾತು ಹೇಳುತ್ತಾರೆ’ ಅವರು.  

ಬಾಯಿಯ ಆರೋಗ್ಯದ ಬಗ್ಗೆ ಸಿಮ್ಸ್‌ ಸಹಯೋಗದಲ್ಲಿ ಜಿಲ್ಲೆಯಾದ್ಯಂತ ನಿರಂತರವಾಗಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ದಂತ ಚಿಕಿತ್ಸೆಯನ್ನೂ ನೀಡಲಾಗುತ್ತಿದೆ.

-ಡಾ.ಪ್ರಿಯದರ್ಶಿನಿ ಬಾಯಿ ಆರೋಗ್ಯ ಕಾರ್ಯಕ್ರಮದ ಜಿಲ್ಲಾ ಅಧಿಕಾರಿ

ಮಾರ್ಚ್‌ 20: ವಿಶ್ವ ಬಾಯಿ ಆರೋಗ್ಯ ದಿನ

ಬಾಯಿಯ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಪ್ರತಿ ವರ್ಷ ಮಾರ್ಚ್‌ 20ರಂದು ವಿಶ್ವ ಬಾಯಿ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ.   ವಿಶ್ವ ದಂತ ಒಕ್ಕೂಟವು (ಎಫ್‌ಡಿಐ) 2013ರಿಂದ ಈ ದಿನವನ್ನು ಆಚರಿಸುತ್ತಾ ಬಂದಿದೆ. ‘ಆರೋಗ್ಯಕರ ಬಾಯಿಯು ಆರೋಗ್ಯಕರ ದೇಹ’ ಎಂಬುದು ಈ ವರ್ಷದ ಆಚರಣೆಯ ಘೋಷವಾಕ್ಯ. 

ಜಾಗೃತಿಗೆ ಕಾರ್ಯಕ್ರಮ ರಾಷ್ಟ್ರೀಯ ಬಾಯಿ ಆರೋಗ್ಯದ ಕಾರ್ಯಕ್ರಮದ ಅಡಿಯಲ್ಲಿ ಸಿಮ್ಸ್‌ ಆಸ್ಪತ್ರೆ ತಾಲ್ಲೂಕು ಆಸ್ಪತ್ರೆಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ದಂತ ಚಿಕಿತ್ಸೆ ನೀಡಲಾಗುತ್ತಿದೆ.  ದಂತ ಭಾಗ್ಯ ಯೋಜನೆಯಡಿ ಪ್ರಸಕ್ತ ವರ್ಷ 45 ವರ್ಷಕ್ಕಿಂತ ಹೆಚ್ಚು ವಯಸ್ಸಿನ 125 ಮಂದಿಗೆ ದಂತಪಂಕ್ತಿಯನ್ನು ಉಚಿತವಾಗಿ ವಿತರಿಸಲಾಗಿದೆ.  ಸಿಮ್ಸ್‌ನ ಸಹಯೋಗದಲ್ಲಿ ಗ್ರಾಮೀಣ ಭಾಗಗಳಲ್ಲಿ ಗಿರಿಜನ ಕಾಲೋನಿಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಹಲ್ಲುಜ್ಜುವ ವಿಧಾನವನ್ನು ತಿಳಿಸಿಕೊಡುವುದಕ್ಕಾಗಿ ಪ್ರಾತ್ಯಕ್ಷಿಕೆಗಳನ್ನು ನಡೆಸಲಾಗುತ್ತಿದೆ. ಶಾಲೆಗಳು ವಸತಿಶಾಲೆಗಳು ಹಾಸ್ಟೆಲ್‌ಗಳಲ್ಲಿ ಮತ್ತು ಹೆಣ್ಣುಮಕ್ಕಳನ್ನು ಗುರಿಯಾಗಿಸಿಕೊಂಡು ಕಾರ್ಯಕ್ರಮಗಳನ್ನು ನಡೆಸಲಾಗಿದೆ.  ‘3800ಕ್ಕೂ ಹೆಚ್ಚು ಮಕ್ಕಳ ಬಾಯಿ ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಗಿದೆ. 1800 ಮಕ್ಕಳಿಗೆ ಹಲ್ಲುಜ್ಜುವ ಪ್ರಾತ್ಯಕ್ಷಿಕೆ ನೀಡಲಾಗಿದೆ. ವಿಶ್ವ ಬಾಯಿ ದಿನದ ಅಂಗವಾಗಿ ತಿಂಗಳು ಪೂರ್ತಿ ವಿವಿಧೆಡೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಬುಧವಾರ ಕೊಳ್ಳೇಗಾಲದಲ್ಲಿ ಜಾಥಾವೂ ನಡೆಯಲಿದೆ’ ಎಂದು ಡಾ.ಪ್ರಿಯದರ್ಶಿನಿ ಮಾಹಿತಿ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT