ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ ಬಳಕೆ ಎಚ್ಚರ ಇರಲಿ: ಮಹದೇವಶೆಟ್ಟಿ

ವಿಶ್ವ ಛಾಯಾಗ್ರಾಹಕರ ದಿನಾಚರಣೆ, ಜಾಥಾ, ಬೇಡಿಕೆಗಳ ಮನವಿ ಸಲ್ಲಿಕೆ
Last Updated 19 ಆಗಸ್ಟ್ 2022, 16:05 IST
ಅಕ್ಷರ ಗಾತ್ರ

ಚಾಮರಾಜನಗರ: ‘ಕಣ್ಣೆದುರಿಗೆ ಕಾಣದ ವ್ಯಕ್ತಿಗಳು ಆಧುನಿತ ತಂತ್ರಜ್ಞಾನ ಬಳಸಿ ಮಾಡುವ ಮಾಡುವ ಅಪರಾಧಗಳು ಹೆಚ್ಚಾಗುತ್ತಿದ್ದು, ಜನರು ಎಚ್ಚರದಿಂದ ಇರಬೇಕು’ ಎಂದುಸಿಇಎನ್‌ ಪೊಲೀಸ್ ಇನ್‌ಸ್ಪೆಕ್ಟರ್‌ ಕೆ.ಎಂ.ಮಹದೇವಶೆಟ್ಟಿ ಶುಕ್ರವಾರ ತಿಳಿಸಿದರು.

ಚಾಮರಾಜನಗರ ತಾಲ್ಲೂಕು ಫೋಟೊಗ್ರಾಫರ್ ಮತ್ತು ವಿಡಿಯೊಗ್ರಾಫರ್ ಸಂಘದ ವತಿಯಿಂದ ನಡೆದ 177ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಮ್ಮ ದಿನಚರಿಯನ್ನು ಮೊಬೈಲ್‌ನಿಂದಲೇ ಪ್ರಾರಂಭಿಸುತ್ತೇವೆ. ನಮಗೆ ಗೊತ್ತಿಲ್ಲದಂತೆಯೇ ಮೊಬೈಲ್‌ನಿಂದ ಅನೇಕ ಮೋಸದ ಜಾಲಕ್ಕೆ ಬೀಳುತ್ತಿದ್ದೇವೆ’ ಎಂದರು.

‘ಗೊತ್ತಿಲ್ಲದೇ ಬರುವಂತಹ ಕರೆಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಬೇಡಿ ಮತ್ತು ಯಾವುದೇ ಗೊತ್ತಿಲ್ಲದೆ ಬರುವಂತಹ ಲಿಂಕ್‌ಗಳನ್ನು ಒತ್ತಿದರೆ ಹಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಹಣ ದೋಚುವವರು ಎಲ್ಲೋ ದೂರದಲ್ಲಿದ್ದುಕೊಂಡೆ ವಂಚನೆ ಎಸಗುತ್ತಾರೆ’ ಎಂದು ತಿಳಿಸಿದರು.

ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಸಿಮ್ಸ್‌) ಸರ್ಜನ್ ಡಾ.ಚಿನ್ನಭೂಮಿ, ‘ಪ್ರತಿಯೊಬ್ಬರಿಗೂ ಆರೋಗ್ಯ ತಿಳಿವಳಿಕೆ ಅತಿ ಮುಖ್ಯ. ಬೀದಿ ಶೌಚಾಲಯ, ಆಹಾರ ಕಲಬೆರಕೆ, ಕಲುಷಿತ ನೀರಿನಿಂದ ಅನೇಕ ರೋಗಗಳು ಬರುತ್ತವೆ. ಆದ್ದರಿಂದ ಹತ್ತಿರದಲ್ಲಿ ಲಭ್ಯವಿರುವ ಆರೋಗ್ಯ ಸೇವೆಯನ್ನು ಉಪಯೋಗಿಸಿಕೊಳ್ಳಿ’ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಸಿಮ್ಸ್ ಮೂಳೆ ತಜ್ಞ ಡಾ.ಮಹದೇವಪ್ರಸಾದ್ ಸಿ.ಇ.ಎನ್ ಠಾಣೆ ಪಿ.ಎಸ್.ಐ. ಮಾದೇಶ್, ಹೆಡ್ ಕಾನ್‌ಸ್ಟೆಬಲ್‌ ಶ್ರೀನಿವಾಸಮೂರ್ತಿ, ತಾಲ್ಲೂಕು ಫೋಟೊಗ್ರಾಫರ್ ಮತ್ತು ವಿಡಿಯೊಗ್ರಾಫರ್ ಸಂಘದ ಗೌರವ ಅಧ್ಯಕ್ಷ ಪ್ರಕಾಶ್ ಅನಂತ ನಾರಾಯಣ್, ಅಧ್ಯಕ್ಷ ಎಂ.ಸಿ.ನಾಗರಾಜು ಇತರರು ಇದ್ದರು.

ಬೇಡಿಕೆ ಈಡೇರಿಕೆಗಾಗಿ ಜಾಥಾ: ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಸಂಘದ ಪದಾಧಿಕಾರಿಗಳು, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಾಥಾ ನಡೆಸಿದರು.

ನಗರದ ಕೊಳದ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಜಾಥಾ ಆರಂಭವಾಯಿತು. ದೊಡ್ಡಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಡೀವಿಯೇಷನ್‌ ರಸ್ತೆ, ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆಯ ಮೂಲಕ ಸಾಗಿದ ಜಾಥಾ ಜಿಲ್ಲಾಡಳಿತ ಭವನದಲ್ಲಿ ಕೊನೆಗೊಂಡಿತು.

ಸಂಘದ ಪದಾಧಿಕಾರಿಗಳು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

‘ಫೋಟೊಗ್ರಾಫರ್‌, ವಿಡಿಯೊಗ್ರಾಫರ್‌ ಸಂಘಕ್ಕೆ ಖಾಲಿ ನಿವೇಶನ ನೀಡಬೇಕು. ಫೋಟೊಗ್ರಾಫರ್‌, ವಿಡಿಯೊ ಗ್ರಾಫರ್‌ಗಳನ್ನು ಅಸಂಘಟಿತ ವಲಯಕ್ಕೆ ಸೇರಿಸಬೇಕು. ಸರ್ಕಾರಿ ಕಾರ್ಯಕ್ರಮಗಳಲ್ಲಿ ಸ್ಥಳೀಯ ಫೋಟೊಗ್ರಾಫರ್‌ಗಳಿಗೆ ಅವಕಾಶ ನೀಡಬೇಕು’ ಎಂದು ಪದಾಧಿಕಾರಿಗಳು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT