ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗ, ಧ್ಯಾನದಿಂದ ಖಿನ್ನತೆ ದೂರ: ಹೊನ್ನಸ್ವಾಮಿ

ಜಿಲ್ಲಾ ಕಾರಾಗೃಹದಲ್ಲಿ ಆತ್ಮಹತ್ಯೆ ತಡೆ ದಿನಾಚರಣೆ ಕಾರ್ಯಕ್ರಮ
Last Updated 21 ಸೆಪ್ಟೆಂಬರ್ 2022, 4:59 IST
ಅಕ್ಷರ ಗಾತ್ರ

ಚಾಮರಾಜನಗರ: ಕೈದಿಗಳು ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಯಂತಹ ಆಲೋಚನೆಗಳಿಂದ ಹೊರಬರಲು ಯೋಗ, ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಧೀಶ ಬಿ.ಎಸ್. ಹೊನ್ನಸ್ವಾಮಿ ಅವರು ಮಂಗಳವಾರ ಸಲಹೆ ನೀಡಿದರು.

ನಗರದ ಜಿಲ್ಲಾ ಕಾರಾಗೃಹದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಪರಾಧಕ್ಕೆ ಒಳಗಾಗಿ ಶಿಕ್ಷೆಗೆ ಗುರಿಯಾದವರನ್ನು ಸಮಾಜ ನೋಡುವ ದೃಷ್ಟಿಯಿಂದ ಖಿನ್ನತೆಗೆ ಒಳಗಾಗುವ ಸಂಭವವಿರುತ್ತದೆ. ಅಪರಾಧದಿಂದ ಬಳಲಿ ಆತ್ಮಹತ್ಯೆಯಂತಹ ಯೋಚನೆಗೆ ಒಳಗಾಗುವವರು ಯೋಗ, ಧ್ಯಾನದ ಜೊತೆಗೆ ಸಾಧಕರ ಸ್ಪೂರ್ತಿಯುತ ಮಾತುಗಳನ್ನು ಕೇಳುವುದರ ಮೂಲಕ ಸಕಾರಾತ್ಮಕ ಆಲೋಚನೆಗಳನ್ನು ಮೈಗೂಡಿಸಿಕೊಳ್ಳಬೇಕು’ ಎಂದರು.

‘ಕಾರಾಗೃಹದಲ್ಲಿ ತಮ್ಮ ವ್ಯಕ್ತಿತ್ವವನ್ನು ಒಳ್ಳೆಯ ರೀತಿಯಲ್ಲಿ ರೂಪಿಸಿಕೊಳ್ಳಲು ಸಾಕಷ್ಟು ಅವಕಾಶಗಳಿವೆ. ಕಾರಾಗೃಹದಲ್ಲಿ ಮಾಡುವ ಕೆಲಸಗಳಿಗೆ ಉತ್ತಮ ಕೂಲಿ ಸಿಗುತ್ತದೆ. ಯಾವುದೇ ಕಾರಣಕ್ಕೂ ಕೈದಿಗಳು ಧೃತಿಗೆಡಬಾರದು. ಉತ್ತಮ ಪುಸ್ತಕಗಳನ್ನು ಓದಿ ಮುಂದಿನ ದಿನಗಳಲ್ಲಿ ಸಮಾಜದ ಉತ್ತಮ ಪ್ರಜೆಯಾಗಿ ಬದುಕಿ’ ಎಂದು ನ್ಯಾಯಾಧೀಶರು ಕಿವಿಮಾತು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ ಮಾತನಾಡಿ, ‘ದೇಶದಲ್ಲಿ ಕಳೆದ ವರ್ಷ 1.64 ಸಾವಿರ ಜನ ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಮಸ್ಯೆ ಇಲ್ಲದ ಮನುಷ್ಯ ಯಾರೂ ಇಲ್ಲ, ಎಲ್ಲ ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತದೆ. ಮಾನಸಿಕ ಖಿನ್ನತೆಯನ್ನು ವಿಕೇಂದ್ರೀಕರಿಸುವ ಚಟುವಟಿಕೆಗಳನ್ನು ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಢಿಸಿಕೊಳ್ಳಬೇಕು’ ಎಂದರು.

ಜಿಲ್ಲಾ ಕಾರಾಗೃಹ ಸೂಪರಿಂಟೆಂಡೆಂಟ್‌ ಮಲ್ಲಿಕಾರ್ಜುನ್‌ ರಾವ್, ಡಿವೈಎಸ್‌ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ಮಾತನಾಡಿದರು.

ಮನೋರೋಗ ತಜ್ಞೆ ಡಾ.ಅಕ್ಷತಾ ಮಾತನಾಡಿ, ‘ಕಾರಾಗೃಹದಲ್ಲಿರುವ ಕೈದಿಗಳು ಮಾನಸಿಕ ಖಿನ್ನತೆಗೆ ಹೆಚ್ಚಾಗಿ ಒಳಗಾಗುತ್ತಾರೆ. ಯಾವಾಗಲೂ ಒಬ್ಬಂಟಿಯಾಗಿ, ಜಿಗುಪ್ಸೆಗೊಳಗಾಗಿ, ಆತ್ಮಹತ್ಯೆ ಪ್ರಯತ್ನ ಪಡುವವರು ಕಂಡುಬಂದಲ್ಲಿ ತಕ್ಷಣವೇ ತಜ್ಞರಿಂದ ಚಿಕಿತ್ಸೆ ಕೊಡಿಸಿ, ಮನೋವೈದ್ಯರನ್ನು ಭೇಟಿ ಮಾಡಲು ಸಲಹೆ ನೀಡಬೇಕು’ ಎಂದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಅಂಕಪ್ಪ ಅವರು ಆತ್ಮಹತ್ಯೆ ತಡೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್, ಸರ್ವೆಲೆನ್ಸ್‌ ಅಧಿಕಾರಿ ಡಾ.ನಾಗರಾಜು, ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕಾಂತರಾಜು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT