ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರಬೆಟ್ಟ: ಮಾದಪ್ಪನ ಯುಗಾದಿ ತೇರು ನಾಳೆ

ಮಹದೇಶ್ವರ ಬೆಟ್ಟದಲ್ಲಿ ಸೋಮವಾರ ಅಮಾವಾಸ್ಯೆ ವಿಶೇಷ ಪೂಜೆ, ಸಾವಿರಾರು ಭಕ್ತರು ಭಾಗಿ
Published 8 ಏಪ್ರಿಲ್ 2024, 16:02 IST
Last Updated 8 ಏಪ್ರಿಲ್ 2024, 16:02 IST
ಅಕ್ಷರ ಗಾತ್ರ

ಮಹದೇಶ್ವರಬೆಟ್ಟ: ಇಲ್ಲಿನ ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಮಂಗಳವಾರ ಬೆಳಿಗ್ಗೆ ಯುಗಾದಿ ಹಬ್ಬದ ಅಂಗವಾಗಿ ಮಹಾ ರಥೋತ್ಸವ ನಡೆಯಲಿದೆ. 

ಮಾದಪ್ಪನ ತೇರನ್ನು ಸಾಂಗವಾಗಿ ನೆರವೇರಿಸುವುದಕ್ಕಾಗಿ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಎಲ್ಲ ಸಿದ್ಧತೆಗಳನ್ನು ನಡೆಸಿ‌ದೆ.

ಮಂಗಳವಾರ ಬೆಳಿಗ್ಗೆ 7.30ರಿಂದ 9 ಗಂಟೆಯ ನಡುವಿನ ಶುಭ ಮುಹೂರ್ತದಲ್ಲಿ ರಥೋತ್ಸವ ನಡೆಯಲಿದೆ. ಲಕ್ಷಕ್ಕೂ ಹೆಚ್ಚು ಭಕ್ತರು ತೇರಿಗೆ ಸಾಕ್ಷಿಯಾಗುವ ನಿರೀಕ್ಷೆ ಇದೆ. 

ರಥೋತ್ಸವಕ್ಕೂ ಮುನ್ನ ಬೇಡಗಂಪಣ ಸಮುದಾಯದ ಹದಿಹರೆಯದ ಬಾಲೆಯರು ಮಹಾರಥಕ್ಕೆ ಬೆಲ್ಲದ ಆರತಿ ಬೆಳಗಲಿದ್ದಾರೆ. ಬಳಿಕ ಯುಗಾದಿ ಹಬ್ಬದ ಅಂಗವಾಗಿ ಬೇವು-ಬೆಲ್ಲ ಮಿಶ್ರಿತ ಪ್ರಸಾದವನ್ನು ಭಕ್ತರಿಗೆ ವಿತರಣೆ ಮಾಡಲಾಗುತ್ತದೆ.

ರಥ ನಿರ್ಮಾಣ ಕಾರ್ಯ ಮುಕ್ತಾಯವಾಗಿದ್ದು, ಬಿದಿರು ಹಾಗೂ ಹುರಿ ಹಗ್ಗಗಳಿಂದ ತೇರಿನಲ್ಲಿ 5 ಚೌಕ ಪಟ್ಟಿಕೆ ನಿರ್ಮಾಣವಾಗಿದೆ. ಇದಕ್ಕೆ ಸುಂದರ ವಸ್ತ್ರ ಧಾರಣೆ ಮಾಡಿ ಹಸಿರು ತಳಿರು ತೋರಣದೊಂದಿಗೆ ಕಂಗೊಳಿಸುವಂತೆ ಮಾಡಲಾಗಿದೆ. 

ಅಮಾವಾಸ್ಯೆ ಪೂಜೆ: ಜಾತ್ರೆಯ ಎರಡನೇ ದಿನವಾದ ಭಾನುವಾರ ಮಹದೇಶ್ವರ ಸ್ವಾಮಿಗೆ ಎಣ್ಣೆ ಮಜ್ಜನ ಸೇವೆ ನಡೆದರೆ, ಸೋಮವಾರ ಅಮಾವಾಸ್ಯೆ ಅಂಗವಾಗಿ ವಿಶೇಷ ಪೂಜೆ ಪುನಸ್ಕಾರಗಳು ನೆರವೇರಿದವು. 

ಮುಂಜಾನೆ ಮಹದೇಶ್ವರ ಸ್ವಾಮಿಗೆ ಗಂಧಾಭಿಷೇಕ, ಬಿಲ್ವಾರ್ಚನೆ, ರುದ್ರಾಭಿಷೇಕ, ಮಹಾಮಂಗಳಾರತಿ ಮಾಡಿದ ಬಳಿಕ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ದೇವಾಲಯಕ್ಕೆ ಬಂದಿದ್ದ ಭಕ್ತರು  ರುದ್ರಾಕ್ಷಿ ಮಂಟಪ, ಹುಲಿವಾಹನ, ಬಸವ ವಾಹನ , ಪಂಜಿನ ಸೇವೆ, ಧೂಪದ ಸೇವೆ, ಉರುಳು ಸೇವೆಯನ್ನು ಮಾಡಿ ಸಂಜೆ 7 ರ ಸಮಯದಲ್ಲಿ ನಡೆದ ಚಿನ್ನದ ರಥೋತ್ಸವದಲ್ಲಿ ಪಾಲ್ಗೊಂಡರು. 

ಬಿಸಿಲಿನ ತಾಪಮಾನ ಜಾಸ್ತಿಯಾಗಿದ್ದರಿಂದ ಉರುಳು ಸೇವೆ, ಪಂಜಿನ ಸೇವೆ, ಪಾದ ಸೇವೆಯನ್ನು ಮಾಡುವ ಭಕ್ತರಿಗೆ ಅನುಕೂಲವಾಗುವ ರೀತಿಯಲ್ಲಿ ದೇವಾಲಯದ ಹೊರ ಆವರಣದ ಸುತ್ತಲೂ ಪ್ರಾಧಿಕಾರ ಆಗಾಗ ನೀರು ಹಾಯಿಸಲು ವ್ಯವಸ್ಥೆ ಮಾಡಿತ್ತು. 

ಆಲಂಬಾಡಿ ಬಸವೇಶ್ವರಗೆ ಪೂಜೆ: ಮಂಗಳವಾರ ನಡೆಯುವ ರಥೋತ್ಸವದಲ್ಲಿ ಭಾಗವಹಿಸಲು ರಾಜ್ಯ ಅಲ್ಲದೆ, ತಮಿಳುನಾಡಿನ ಹೊಸೂರು, ಕೃಷ್ಣಗಿರಿ, ಡೆಂಕಣಿಕೋಟೆ, ಧರ್ಮಪುರಿ, ಸೇಲಂ ಹಾಗೂ ಕೊಯಮತ್ತೂರು ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರಲಿದ್ದಾರೆ.

ವಾಹನ ಹಾಗೂ ಪಾದಯಾತ್ರೆ ಮೂಲಕ ಈಗಾಗಲೇ ಆಗಮಿಸಿರುವ ಭಕ್ತರು ಮಾದಪ್ಪನ ದರ್ಶನ ಪಡೆದು, ರಂಗಮಂದಿರ, ಬಸ್ ನಿಲ್ಧಾಣ, ರಾಜಗೋಪುರ ಮುಂಭಾಗ, ದಾಸೋಹ, ಕಲ್ಯಾಣ ಮಂಟಪ ಬಳಿ, ಸಾಲೂರು ಮಠ ಆವರಣ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಬಿಡಾರ ಹೂಡಿದ್ದಾರೆ.

ತಮಿಳುನಾಡಿನ ಜನರು ಮಹಾರಥೋತ್ಸವದಲ್ಲಿ ಪಾಲ್ಗೊಂಡು ಮಹದೇಶ್ವರಸ್ವಾಮಿ ಹಾಗೂ ಆಲಂಬಾಡಿ ಬಸವೇಶ್ವರ ಮತ್ತು ಬಸವವಾಹನ ಉತ್ಸವದಲ್ಲಿ ಹೆಚ್ಚು ಪಾಲ್ಗೊಳ್ಳುವುದು ಯುಗಾದಿ ಹಬ್ಬದ ವಿಶೇಷ.

ಮಂಗಳವಾರ ನಡೆಯಲಿರುವ ಯುಗಾದಿ ರಥೋತ್ಸವಕ್ಕೆ ಸಜ್ಜುಗೊಂಡಿರುವ ಮಾದಪ್ಪನ ತೇರು
ಮಂಗಳವಾರ ನಡೆಯಲಿರುವ ಯುಗಾದಿ ರಥೋತ್ಸವಕ್ಕೆ ಸಜ್ಜುಗೊಂಡಿರುವ ಮಾದಪ್ಪನ ತೇರು

ಅಗತ್ಯ ಮೂಲಸೌಕರ್ಯ: ಕಾರ್ಯದರ್ಶಿ ‘ದೇವಾಲಯದಲ್ಲಿ ಮಹಾಶಿವರಾತ್ರಿ ಜಾತ್ರೆ ಯಶಸ್ವಿಯಾಗಿ ನಡೆದಿದೆ. ಇದೀಗ ಚಾಂದ್ರಮಾನ ಯುಗಾದಿ ಜಾತ್ರಾ ಮಹೋತ್ಸವ ಪ್ರಯುಕ್ತ ಭಕ್ತಾದಿಗಳಿಗೆ ಅನುಕೂಲವಾಗುವಂತೆ ದಾಸೋಹ ಕುಡಿಯುವ ನೀರು ಸೇರಿದಂತೆ ನೆರಳಿನ ವ್ಯವಸ್ಥೆ ಮಾಡಲಾಗಿದ್ದು ನೂಕು ನುಗ್ಗಲು ಆಗದಂತೆ ಮಹದೇಶ್ವರಸ್ವಾಮಿಯ ದರ್ಶನ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಅಗತ್ಯಕ್ಕೆ ತಕ್ಕಂತೆ ಲಾಡು ತಯಾರಿಸಲಾಗುತ್ತಿದೆ. ಸ್ವಚ್ಚತೆಗೂ ಆದ್ಯತೆ ನೀಡಲಾಗಿದೆ. ಮುಂಜಾಗ್ರತಾ ಕ್ರಮಕೈಗೊಂಡು ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗಿದೆ’ ರಂದು ಪ್ರಾಧಿಕಾರದ ಕಾರ್ಯದರ್ಶಿ ರಘು ಎ.ಈ ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT