ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಂಬಳ್ಳಿ: ಸಮಸ್ಯೆಗಳ ಬಳ್ಳಿ

ಗ್ರಾಮ ಸಂಚಾರ
Last Updated 28 ಮೇ 2014, 8:27 IST
ಅಕ್ಷರ ಗಾತ್ರ

ಕೊಳ್ಳೇಗಾಲ: ತಾಲ್ಲೂಕಿನ ಉತ್ತಂಬಳ್ಳಿ ಗ್ರಾಮದಲ್ಲಿ ಚರಂಡಿ ನಿರ್ಮಿಸದ ಪರಿಣಾಮ ಮನೆಗಳ ಮುಂಭಾಗವೇ ತ್ಯಾಜ್ಯ ನೀರು ಹರಿಯುತ್ತಿದ್ದು, ಕೊಚ್ಚೆಯಲ್ಲಿಯೇ ಜನರು ಪ್ರತಿನಿತ್ಯ ತಿರುಗಾಡುವಂತಾಗಿದೆ.

‘ಇಲ್ಲಿ ಒಂದು ಬೀದಿಯಿಂದ ಮತ್ತೊಂದು ಬೀದಿಗೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯದಲ್ಲಿರುವ ಮನೆಗಳ ಜನರ ಸಮಸ್ಯೆ ಹೇಳತೀರದು. ಕೆಲವು ಕಡೆಗಳಲ್ಲಿ ಚರಂಡಿ ನಿರ್ಮಿಸಲಾಗಿದೆ. ಆದರೆ, ನಮ್ಮ ಭಾಗದಲ್ಲಿ ಚರಂಡಿ ನಿರ್ಮಿಸದೆ ಒಂದು ಕಣ್ಣಿಗೆ ಸುಣ್ಣ; ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚಲಾಗಿದೆ’ ಎಂಬುದು ಮಲಿನ ವಾತಾವರಣದಲ್ಲೇ ವಾಸವಾಗಿರುವ ನಾಗಶೆಟ್ಟಿ ಹಾಗೂ ಮಹದೇವಶೆಟ್ಟಿ ಅವರ ದೂರು.

ಮಳೆಗಾಲ ಆರಂಭವಾದರೆ ಚರಂಡಿಯ ತ್ಯಾಜ್ಯ ಕೆಲವು ಮನೆಗಳ ಒಳಗೆ ನುಗ್ಗುತ್ತದೆ. ಅಲ್ಲದೆ, ಈ ಬಡಾವಣೆ ಜನರು ಕಲ್ಮಷ ನೀರಿನಲ್ಲಿಯೇ ತೆರಳಿ ಮನೆ ಹೊಸ್ತಿಲು ತುಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಚರಂಡಿ ಇರುವ ಬೀದಿಗಳಲ್ಲಿ ಸಂಗ್ರಹಗೊಂಡಿರುವ ಹೂಳನ್ನು ಇಂದಿಗೂ ತೆಗೆಸಿಲ್ಲ. ಕಸ–ಕಡ್ಡಿ, ಪ್ಲಾಸ್ಟಿಕ್‌ಗಳು ತುಂಬಿ ನೀರು ಹೊರಹೋಗದೆ ಕೆಟ್ಟ ವಾಸನೆ ಬೀರುತ್ತಿದೆ. ಜನರು ರೋಗ– ರುಜಿನಗಳ ಭೀತಿ ಎದುರಿಸುವಂತಾಗಿದೆ. ಚರಂಡಿಯಲ್ಲಿ ತ್ಯಾಜ್ಯ ತುಂಬಿರುವುದರಿಂದ ಸೊಳ್ಳೆಗಳ ವಾಸಸ್ಥಾನವಾಗಿ ಪರಿಣಮಿಸಿದೆ.

ಬಡಾವಣೆ ಪಕ್ಕದಲ್ಲಿಯೇ ಜಮೀನು ಇದ್ದು, ಮಳೆಗಾಲದಲ್ಲಿ ಜಮೀನಿನ ನೀರು ಕೂಡ ಈ ಬಡಾವಣೆಗೆ ನುಗ್ಗುತ್ತದೆ. ಇಲ್ಲಿ ಬಹುತೇಕ ಮಣ್ಣಿನ ಗೋಡೆಯ ಮನೆ ಮತ್ತು ಗುಡಿಸಲುಗಳು ಇದ್ದು, ಮನೆಗಳ ಗೋಡೆ ಬದಿಯೇ ಚರಂಡಿ ಇದೆ. ಹೀಗಾಗಿ ಗೋಡೆಗಳ ತೇವಾಂಶದಿಂದ ಶಿಥಿಲಗೊಳ್ಳುತ್ತಿವೆ.

ಸರಿಯಾದ ರಸ್ತೆಯೂ ಇಲ್ಲ
ಬಡಾವಣೆಯಲ್ಲಿ ಉತ್ತಮ ರಸ್ತೆ ನಿರ್ಮಿಸಿಲ್ಲ. ಕೆಲವು ಭಾಗದಲ್ಲಿ ಹಲವು ವರ್ಷಗಳ ಹಿಂದೆ ಹಾಕಿದ್ದ ಮಣ್ಣಿನ ರಸ್ತೆ ಅದಗೆಟ್ಟಿದೆ ಮಳೆಗಾಲದಲ್ಲಿ ಈ ರಸ್ತೆಗಳು ಕೊಚ್ಚೆ ಗುಂಡಿಯಾಗಿ ಜನರ ಸಂಚಾರಕ್ಕೆ ತೊಂದರೆ ಯಾಗುತ್ತಿದೆ.

ಕಿರುನೀರು ಸರಬರಾಜು ತೊಂಬೆಯಿಂದ ಹೊರಬರುವ ನೀರು ಸರಾಗವಾಗಿ ಹೊರಗೆ ಹೋಗಲು ಯಾವುದೇ ವ್ಯವಸ್ಥೆ ಇಲ್ಲದೆ ತೊಂಬೆಯ ಬಳಿ ತ್ಯಾಜ್ಯ ಸಂಗ್ರಹಗೊಂಡು, ದುರ್ನಾತ ಬೀರುತ್ತಿದೆ. ಗಿಡಗಂಟಿಗಳು ಬೆಳೆದು ವಿಷಜಂತುಗಳ ಆವಾಸಸ್ಥಾನವಾಗಿ ಪರಿಣಮಿಸಿದೆ.

ಉಪ್ಪಾರ ಬಡಾವಣೆ ಹಾಗೂ ದಲಿತರ ಹೊಸ ಬಡಾವಣೆಗೆ ಮಳೆಗಾಲದಲ್ಲಿ ಜಮೀನುಗಳ ನೀರು ಮನೆಗಳಿಗೆ ನುಗ್ಗಿ ಅನಾಹುತ ಸಂಭವಿಸುವ ಸ್ಥಿತಿ ಇದೆ. ಕೂಡಲೇ ಸಂಬಂಧಪಟ್ಟವರು ಗ್ರಾಮದ ಚರಂಡಿಗಳ ಹೂಳು ತೆಗೆಸಿ ನೀರು ಸರಾಗವಾಗಿ ಹೊರಹೋಗಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಮಹೇಶ್‌ ಮತ್ತು ಪರುವಸ್ವಾಮಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT