ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಕ್ಕಳ್ಳಿ: ನೀರಿಗಾಗಿ ಜನರ ಪರದಾಟ

Last Updated 25 ಸೆಪ್ಟೆಂಬರ್ 2013, 9:32 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಒಂದೆಡೆ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿದೆ. ಗ್ರಾಮದಲ್ಲಿ ಬಹಳ ವರ್ಷಗಳಿಂದಲೂ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ. ಜತೆಗೆ ಗ್ರಾಮದ ರಸ್ತೆಗಳು ದೊಡ್ಡದೊಡ್ಡ ಗುಂಡಿಗಳಿಂದ ಕಲ್ಲುಗಳಿಂದ ತುಂಬಿ ಹೋಗಿದೆ.

ಹೊಂಡರಬಾಳು ಗ್ರಾಮ ಪಂಚಾಯಿತಿಗೆ ಒಳಪಟ್ಟಿರುವ ಜಕ್ಕಳ್ಳಿ ಗ್ರಾಮದಲ್ಲಿ ಈ ಸಮಸ್ಯೆ ಜನರನ್ನು ಕಾಡುತ್ತಿದೆ. ಅಲ್ಪಸಂಖ್ಯಾತ ಸಮುದಾಯದವರು ಹೆಚ್ಚಿರುವ ಈ ಗ್ರಾಮ ಗುಡ್ಡಗಾಡು ಪ್ರದೇಶವನ್ನು ಒಳಗೊಂಡಿದೆ.  ಕುಡಿಯುವ ನೀರು ಪೂರೈಸುವ ಸಲುವಾಗಿ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಸೇರಿದಂತೆ ಲಕ್ಷಾಂತರ ರೂ. ಖರ್ಚುಮಾಡಿ ಒವರ್‌ಹೆಡ್‌ ಟ್ಯಾಂಕ್‌ ನಿರ್ಮಾಣ ಮಾಡಲಾಗಿದೆ. ಎತ್ತರದ ಪ್ರದೇಶದಲ್ಲಿ ನಿರ್ಮಿಸಿರುವ ಈ ಟ್ಯಾಂಕ್‌ಗೆ ಕೊಳವೆಬಾವಿ ಮೂಲಕ ನೀರು ಪೂರೈಸಲು ಸಾಧ್ಯವಾಗದೆ ನಿರ್ಮಾಣಗೊಂಡ ದಿನದಿಂದಲೂ ಜನತೆಯ ಉಪಯೋಗಕ್ಕೆ ಬಾರದೆ ಸ್ಮಾರಕದಂತಿದೆ.

ಈ ಭಾಗದಲ್ಲಿನ ಎಲ್ಲಾ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಕುಸಿತದ ಪರಿಣಾಮ ನೀರು ಬರುತ್ತಿಲ್ಲ. ನೀರು ಇಲ್ಲದೆ ಕೈಪಂಪುಗಳು ದೂಳುಹಿಡಿಯುವಂತಾಗಿದೆ. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದೆ.

ಗ್ರಾಮದ ಜನತೆಯ ನೀರಿನ ಬರಣೆ ಅರಿತು ಗ್ರಾಮದ ಬಳಿಯ ಕೋಟೆಕೆರೆ ಬಳಿ ಕೊಳವೆಬಾವಿ ಕೊರೆಸಿ ಅಲ್ಲಿಂದ ಪೈಪ್‌ಲೈನ್‌ ಅಳವಡಿಸಿ ಮುಖ್ಯರಸ್ತೆಯಲ್ಲಿ ಒಂದೆರಡು ನಲ್ಲಿಗಳಲ್ಲಿ ಮಾತ್ರ ಅಲ್ಪಪ್ರಮಾಣದ ನೀರು ಪೂರೈಕೆ ಮಾಡಲಾಗುತ್ತಿದೆ. ಈ ನೀರು ಟ್ಯಾಂಕ್‌ಗೆ ಪೂರೈಕೆಯಾಗದ ಕಾರಣ ಗುಡ್ಡದ ಮೇಲಿನ ಮಹಿಳೆಯರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಬಡಾವಣೆ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ಮಹಿಳೆಯರು, ಮಕ್ಕಳು ನಿತ್ಯವೂ ಬಿಂದಿಗೆ ಹಿಡಿದು ಕುಡಿಯುವ ನೀರಿಗಾಗಿ ಕೃಷಿ ಪಂಪ್‌ಸೆಟ್‌ಗಳತ್ತ ಹೋಗುತ್ತಿದ್ದಾರೆ. ಆದರೆ, ಆಗಾಗ ವಿದ್ಯುತ್‌ ವ್ಯತ್ಯಯ ಆಗುವುದರಿಂದ ನೀರು ಸಂಗ್ರಹಿಸಲು ಮಹಿಳೆಯರು ತೊಂದರೆ ಅನುಭವಿಸುತ್ತಿದ್ದಾರೆ.

ಗ್ರಾಮದಲ್ಲಿನ ರಸ್ತೆಗಳ ಅಭಿವೃದ್ಧಿಗೆ ಮುಂದಾಗದ ಕಾರಣ ರಸ್ತೆಗಳಲ್ಲಿ ಗಿಡಗಂಡೆಗಳು ಬೆಳೆದು ನಿಂತು ವಿಷಜಂತುಗಳ ಆವಾಸಸ್ಥಾನವಾಗಿದೆ. ಜನರು ರಾತ್ರಿ ವೇಳೆ ಸಂಚರಿಸಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.

ರಸ್ತೆಗಳು ಕಲ್ಲುಗಳಿಂದ ಹಾಗೂ ಹಳ್ಳಕೊಳ್ಳಗಳಿಂದ ಕೂಡಿದೆ. ಈ ರಸ್ತೆಗಳಲ್ಲಿ ವಾಹನ ಸಂಚಾರ ಸಾಧ್ಯವೇ ಇಲ್ಲ. ಜನರು ಈ ರಸ್ತೆಯಲ್ಲಿ ಓಡಾಡಲೂ ಸಹ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದರೂ ಈ ಗ್ರಾಮದ ಬಡಾವಣೆಗಳ ರಸ್ತೆ ಅಭಿವೃದ್ಧಿಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿಲ್ಲ.

ಗ್ರಾಮದಲ್ಲಿ ಅನೇಕ ಬೀದಿಗಳಲ್ಲಿ ಚರಂಡಿಗಳನ್ನೇ ನಿರ್ಮಿಸಿಲ್ಲ. ಮಳೆಗಾಲದಲ್ಲಿ ರಸ್ತೆಯಲ್ಲಿ ಹರಿಯುವ ನೀರು ಮನೆಯೊಳಗೆ ನುಗ್ಗಿ ಜನರು ತೊಂದರೆಪಡುವ ಸ್ಥಿತಿ ಇದೆ.

ಗ್ರಾಮದ ಜನತೆಗೆ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು ಪೂರೈಕೆ, ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಜನಪ್ರತಿನಿಧಿಗಳು ಈವರೆಗೂ ಮುಂದಾಗದಿರುವ ಕ್ರಮವನ್ನು ರೈತ ಸಂಘದ ಮುಖಂಡ  ಶೈಲೇಂದ್ರ ಖಂಡಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಈ ಗ್ರಾಮಕ್ಕೆ ಖುದ್ದಾಗಿ ಭೆೇಟಿ ನೀಡಿ ಇಲ್ಲಿನ ಜನತೆಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಕ್ರಮಕೈಗೊಳ್ಳಬೇಕು ಎಂದು ಗ್ರಾಮದ ಮುಖಂಡರುಗಳಾದ ಮುತ್ತು, ಪೆರಿಯನಾಯಗಂ, ಕೆಂಪರಾಜು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT