ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗಳ ನಡುವೆ ಇಂಗಲವಾಡಿ

Last Updated 13 ಆಗಸ್ಟ್ 2014, 9:49 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಗ್ರಾಮಕ್ಕೆ ಬರುತ್ತಿದ್ದಂತೆ ಸ್ವಾಗತ ಕೋರುವ ಬಯಲು ಶೌಚಾಲಯ, ಹೂಳು ತುಂಬಿರುವ ಚರಂಡಿಗಳು, ಮಡುಗಟ್ಟಿ ನಿಂತಿರುವ ಕೊಳಚೆ ನೀರು, ಇಂತಹ ಸಮಸ್ಯೆಗಳ ನಡುವೆ ನಲುಗುತ್ತಿರುವ ಇಂಗಲವಾಡಿ ಗ್ರಾಮ.

ತಾಲ್ಲೂಕಿನ ಉಪ್ಪಾರ ಸಮುದಾಯದ ತವರು ಬನ್ನಿತಾಳಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಈ ಗ್ರಾಮಕ್ಕೆ ಕೇವಲ 2 ಕಿ.ಮೀ ದೂರದಲ್ಲಿ ಗ್ರಾಮ ಪಂಚಾಯಿತಿ ಕೇಂದ್ರವಿದೆ.

ಈ ಗ್ರಾಮದಲ್ಲಿ ನಾಯಕ ಸಮುದಾಯ ಬಹುಸಂಖ್ಯಾತರು, ಇತರೆ ಜನಾಂಗದವರೂ ಸೇರಿದಂತೆ ಸುಮಾರು 300ಕ್ಕೂ  ಹೆಚ್ಚು ಕುಟುಂಬಗಳು ಇವೆ.  ಜನಪ್ರತಿನಿಧಿಗಳು ಮತ್ತು ಗ್ರಾಮ ಪಂಚಾಯಿತಿ ಆಡಳಿತ ಸಿಬ್ಬಂದಿ ಗ್ರಾಮದ  ಸಮಸ್ಯೆಗಳ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಗ್ರಾಮಸ್ಥರ ಅಭಿಪ್ರಾಯ. ಗ್ರಾಮ ಪಂಚಾಯಿತಿ ಕೇಂದ್ರದ ಸಮೀಪದಲ್ಲೇ ಇದ್ದರೂ ಮೂಲ ಸೌಲಭ್ಯಗಳು ಮಾತ್ರ ಮರೀಚಿಕೆಯಾಗಿರುವುದು ಬಹಿರಂಗ ಸತ್ಯ.

ಗ್ರಾಮದಲ್ಲಿ ಕೆಲವೇ ಮಂದಿ ಶೌಚಾಲಯ ಕಟ್ಟಿಸಿಕೊಂಡಿದ್ದು, ಉಳಿದವರು ಬಯಲು ಶೌಚಾಲಯವನ್ನು ಅವಲಂಬಿಸಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಸಹ ನಡೆಸಿಲ್ಲ.ನೀರಿನ ಪೂರೈಕೆಗೆ 3 ಕೊಳವೆ ಬಾವಿಗಳಿದ್ದು, ತೊಂಬೆಗಳಿಂದ   ನೀರು ಸರಬರಾಜಾಗುತ್ತಿದೆ. ಕೊಳವೆ ಬಾವಿಗಳಲ್ಲಿ ಲಭ್ಯವಿರುವ ನೀರು ಸಮರ್ಪಕ ವಿತರಣೆ ಆಗುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆಯೂ ಗ್ರಾಮದಲ್ಲಿದೆ.

ಹೊಸದಾಗಿ ನಿರ್ಮಾಣಗೊಂಡ ತೊಂಬೆಗಳು ಬಳಕೆಗೆ ಬಂದಿಲ್ಲ. ಗ್ರಾಮದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲ. ಮನೆಗಳಿಂದ ಹೊರಬರುವ ಕೊಳಚೆ ನೀರು ಸಾರ್ವಜನಿಕ ರಸ್ತೆಗಳಲ್ಲಿ ಸಂಗ್ರಹವಾಗುತ್ತದೆ. ಇದರೊಂದಿಗೆ ಮಳೆ ನೀರು ಸೇರಿಕೊಳ್ಳುವ ಕಾರಣ ಮಳೆಗಾಲದಲ್ಲಿ ಸಂಚಾರ ಕಷ್ಟ. ಕೆಲವು ಕಡೆ ಚರಂಡಿ ಇದ್ದರೂ ಹೂಳು ತುಂಬಿದೆ.

ಗ್ರಾಮಠಾಣಾ ಸ್ಥಳ ಮತ್ತು ಸಾರ್ವಜನಿಕ ಉದ್ದೇಶಕ್ಕೆ ಮೀಸಲಾದ ಸ್ಥಳ, ರಸ್ತೆಗಳಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ರಾತ್ರಿ ವೇಳೆ ತಿರುಗಾಡಲು ಕಷ್ಟವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ರಾಶಿ ಹಾಕಲಾಗಿದೆ. ಗ್ರಾ.ಪಂ ಆಡಳಿತ ಗಿಡಗಂಟಿಗಳ ತೆರವು ಮತ್ತು ಕಸ ವಿಲೇವಾರಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇನ್ನಾದರೂ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಗ್ರಾಮಕ್ಕೆ ಮೂಲಸೌಲಭ್ಯ ಒದಗಿಸಲು ಕ್ರಮವಹಿಸಬೇಕಿದೆ. 
ಗ್ರಾಮಸ್ಥರು ನೀರು ಮತ್ತು ಮನೆಕಂದಾಯವನ್ನು ಸರಿಯಾಗಿ  ಪಾವತಿ ಮಾಡುತ್ತಾರೆ. ಆದರೆ  ಗ್ರಾಮ ಪಂಚಾಯಿತಿ ಆಡಳಿತ ಮೂಲ ಸೌಲಭ್ಯಗಳನ್ನು ಒದಗಿಸಿಲ್ಲ. 

–ಬಸವನಾಯಕ , ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT