ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜ್ಯದಲ್ಲಿ ಬಿಜೆಪಿ ಸುನಾಮಿ ಏಳಿಸಿ’

Last Updated 19 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ನೀವೆಲ್ಲ ಬೆಂಗಳೂರಿನಲ್ಲಿ ಬಿಜೆಪಿ ಅಲೆ ಸೃಷ್ಟಿಸಿ, ರಾಜ್ಯದಾದ್ಯಂತ ಅದರ ಸುನಾಮಿ ಏಳುವಂತೆ ಮಾಡಿ. ಆ ಮೂಲಕ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡಲು ಅನುವು ಮಾಡಿಕೊಡಿ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉದ್ಯಮಿಗಳಿಗೆ ಮನವಿ ಮಾಡಿದರು.

ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ಉದ್ಯಮಿಗಳೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಅಭಿವೃದ್ಧಿ ಯೋಜನೆಗಳು ಬೆಂಗಳೂರಿನ ಸಂಚಾರ ದಟ್ಟಣೆಯಲ್ಲಿ ಸಿಲುಕಿ ಒದ್ದಾಡುತ್ತಿವೆ. ಸದಾ ನಿದ್ರೆಯಲ್ಲೇ ಸಮಯ ಕಳೆಯುತ್ತಿರುವ ಮುಖ್ಯ
ಮಂತ್ರಿ ಸಿದ್ದರಾಮಯ್ಯ ಅವರಿಗೆ ಜನರ ಸಮಸ್ಯೆಗಳು ಕಾಣಿಸುತ್ತಿಲ್ಲ. ರಾಜ್ಯದಲ್ಲಿ ಜೆಡಿಎಸ್ ಅಧಿಕಾರ ನಡೆಸಲು ಸಾಧ್ಯವಿಲ್ಲ. ಕಾಂಗ್ರೆಸ್–ಬಿಜೆಪಿ ನಡುವೆ ಜಿದ್ದಾಜಿದ್ದಿ ಇದೆ. ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿಗೇ ಆಡಳಿತ ನಡೆಸಲು ಅವಕಾಶ ಕಲ್ಪಿಸಬೇಕು’ ಎಂದರು.

‘ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತವಿದ್ದಾಗ ಅನಿಶ್ಚಿತತೆ ಇತ್ತು. 70 ಕೋಟಿ ಜನರಿಗೆ ಸೌಲಭ್ಯಗಳೇ ತಲುಪುತ್ತಿರಲಿಲ್ಲ. 60 ಕೋಟಿ ಜನ ಬ್ಯಾಂಕ್ ಖಾತೆಯನ್ನೇ ಹೊಂದಿರಲಿಲ್ಲಿ. 10 ಕೋಟಿ ಜನರಿಗೆ ಶೌಚಾಲಯಗಳಿರಲಿಲ್ಲ. 21 ಸಾವಿರ ಗ್ರಾಮಗಳಲ್ಲಿ ವಿದ್ಯುತ್ ಇರಲಿಲ್ಲ. 12 ಕೋಟಿ ಮನೆಗಳಲ್ಲಿ ಸಿಲಿಂಡರ್‌ಗಳಿರಲಿಲ್ಲ. ಅಂದು ಕಾಂಗ್ರೆಸ್ ತನ್ನ ಕೆಲಸ ಸರಿಯಾಗಿ ಮಾಡಿದ್ದರೆ, ನಾವು ಕಷ್ಟಪಡುವ ಸನ್ನಿವೇಶ ಬರುತ್ತಿರಲಿಲ್ಲ. ಈಗ ಎಲ್ಲ ಸಮಸ್ಯೆಗಳನ್ನೂ ಪರಿಹರಿಸುತ್ತಾ, ಭಾರತದ ವಿಕಾಸದತ್ತ ಹೆಜ್ಜೆ ಇಡುತ್ತಿದ್ದೇವೆ.’

‘ಪ್ರಧಾನಿ ಮೋದಿ ಸದಾ ವಿದೇಶ ಪ್ರವಾಸದಲ್ಲೇ ಇರುತ್ತಾರೆ ಎಂದು ರಾಹುಲ್ ಗಾಂಧಿ ಹೇಳುತ್ತಾರೆ. ಆದರೆ, ಮನಮೋಹನ್ ಸಿಂಗ್ ಅವರಷ್ಟು ವಿದೇಶ ಪ್ರವಾಸವನ್ನು ಮೋದಿ ಮಾಡಿಲ್ಲ. ಅವರು ಚೀಟಿಗಳನ್ನು ಹಿಡಿದುಕೊಂಡು ಹೋಗಿ ಬರುತ್ತಿದ್ದದ್ದು ಯಾರಿಗೂ ಗೊತ್ತಾಗುತ್ತಿರಲಿಲ್ಲ’ ಎಂದು ವ್ಯಂಗ್ಯವಾಡಿದರು.

‘‌ಮೊದಲೆಲ್ಲ ಎದುರಾಳಿಗಳು ನಮ್ಮ ದೇಶದ ಮೇಲೆ ದಾಳಿ ನಡೆಸಿದರೆ, ಯೋಧರು ಪ್ರತಿದಾಳಿ ಮಾಡಲು ಸರ್ಕಾರದ ಅನುಮತಿ ಬರುವವರೆಗೂ ಕಾಯುತ್ತಿದ್ದರು. ಆದರೆ, ‘ದೇಶದ ಭದ್ರತೆ ವಿಚಾರದಲ್ಲಿ ಯಾರೂ ಯಾರ ಅನುಮತಿಗಾಗಿಯೂ ಕಾಯಬೇಕಿಲ್ಲ’ ಎಂದು ಮೋದಿ ಸರ್ಜಿಕಲ್ ಸ್ಟ್ರೈಕ್‌ಗೆ (ನಿರ್ದಿಷ್ಟ ದಾಳಿ) ಅವಕಾಶ ಕೊಟ್ಟರು. ಅವರು ಒಂದು ಗುಂಡು ಹೊಡೆದರೆ, ನಮ್ಮ ಯೋಧರು ಧೈರ್ಯವಾಗಿ ನಾಲ್ಕು ಗುಂಡು ಹೊಡೆಯುತ್ತಿದ್ದಾರೆ. ಅವರ ದೃಢ ನಿರ್ಧಾರದ ಫಲವಾಗಿ ದೇಶದ ಸ್ವಯಂರಕ್ಷಣೆ ವಿಚಾರದಲ್ಲಿ ಇಸ್ರೇಲ್, ಅಮೆರಿಕಾ ಬಿಟ್ಟರೆ ನಂತರದ ಸ್ಥಾನದಲ್ಲೇ ಭಾರತ ಇದೆ.’

‘ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಆಗಿದ್ದಾಗ, ಶೇ 4.4ರಷ್ಟಿದ್ದ ದೇಶದ ಜಿಡಿಪಿಯನ್ನು ಶೇ 8.5ಗೆ ತಲುಪಿಸಿದ್ದರು. ನಂತರ ಬಂದ ಮನಮೋಹನ್ ಸಿಂಗ್, ‍ಪುನಃ ಆ ಪ್ರಗತಿಯನ್ನು 4.4ಕ್ಕೆ ಇಳಿಸಿದ್ದರು. ಈಗ ಮೋದಿ ಆಡಳಿತದಲ್ಲಿ ಜಿಡಿಪಿ ಶೇ 7.5ಕ್ಕೆ ತಲುಪಿದೆ. ಅಂದರೆ, ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಪ್ರಗತಿ ಕ್ಷೀಣ ಎಂಬುದು ಸ್ಪಷ್ಟವಾಗುತ್ತದೆ.’

‘ಬಿಜೆಪಿ ಸರ್ಕಾರ ರೈತರ ಸಾಲಮನ್ನಾ ಮಾಡದೆ, ಕೈಗಾರಿಕೋದ್ಯಮಿಗಳ ಸಾಲ ಮನ್ನಾ ಮಾಡಲು ಶ್ರಮಿಸುತ್ತಿದೆ ಎಂದು ‘ರಾಹುಲ್‌ ಬಾಬಾ’ ಹೇಳುತ್ತಿದ್ದಾರೆ. ಅವರನ್ನು ನೋಡಿದರೆ ಪಾಪ ಎನಿಸುತ್ತದೆ. ಸರ್.ಎಂ.ವಿಶ್ವೇಶ್ವರಯ್ಯ ಹೆಸರನ್ನೂ ಸರಿಯಾಗಿ ಉಚ್ಛಾರ ಮಾಡಲು ಅವರಿಗೆ ಬರುವುದಿಲ್ಲ. ಸಾಲ ಮನ್ನಾ ಹಾಗೂ ವಸೂಲಿಯಾಗದ ಸಾಲದ (ಎನ್‌ಪಿಎ) ನಡುವಿನ ವ್ಯತ್ಯಾಸವೂ ಗೊತ್ತಿಲ್ಲ. ನಾವು ಯಾವುದೇ ಒಬ್ಬ ಉದ್ಯಮಿಯ ಸಾಲ ಮನ್ನಾ ಮಾಡಿದ್ದರೆ ಧೈರ್ಯವಾಗಿ ಲೆಕ್ಕ ತೋರಿಸಲಿ’ ಎಂದು ಸವಾಲು ಹಾಕಿದರು.

‘ಜಿಎಸ್‌ಟಿ ಅಂದರೆ ‘ಗಬ್ಬರ್‌ ಸಿಂಗ್ ಟ್ಯಾಕ್ಸ್’ ಎಂದು ರಾಹುಲ್ ಹೇಳುತ್ತಾರೆ. ಅದನ್ನು ಜಾರಿಗೆ ತರುವಾಗ ಜಿಎಸ್‌ಟಿ ಮಂಡಳಿಯಲ್ಲಿ ಕಾಂಗ್ರೆಸ್ ನಾಯಕರೂ ಇದ್ದರು. ಸರ್ವಾನುಮತದಿಂದಲೇ ಜಿಎಸ್‌ಟಿ ಜಾರಿಗೆ ತರಲಾಗಿದೆ. ಈಗ ಅದರ ಬಗ್ಗೆ ಮಾತನಾಡುವ ಅವರಿಗೆ ಜ್ಞಾನದ ಕೊರತೆ ಇದೆ. ರಾಜಕಾರಣದಲ್ಲಿ ಅಂಥ ಪದಬಳಕೆ ಬಳಸುವುದು ಸರಿಯಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT