ನಗರಸಭೆ ಚುನಾವಣೆ: ಶಾಂತಿಯುತ ಮತದಾನ‌, ಸೆ.3ರಂದು ಮತ ಎಣಿಕೆ

7
ಚಾಮರಾಜನಗರ ಶೇ. 72.03 , ಕೊಳ್ಳೇಗಾಲ ಶೇ 73.71 ಮತದಾನ

ನಗರಸಭೆ ಚುನಾವಣೆ: ಶಾಂತಿಯುತ ಮತದಾನ‌, ಸೆ.3ರಂದು ಮತ ಎಣಿಕೆ

Published:
Updated:
Deccan Herald

ಚಾಮರಾಜನಗರ: ಜಿಲ್ಲೆಯ ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆಗಳ ಒಟ್ಟು 60 ವಾರ್ಡ್‌ಗಳಿಗೆ ಶುಕ್ರವಾರ ನಡೆದ ಮತದಾನ ಶಾಂತಿಯುತವಾಗಿತ್ತು.

ಚಾಮರಾಜನಗರದಲ್ಲಿ ಶೇ 72.03  ಮತ್ತು ಕೊಳ್ಳೇಗಾಲದಲ್ಲಿ ಶೇ 73.71ರಷ್ಟು‌ ಮತದಾನವಾಗಿದೆ. ಚಾಮರಾಜನಗರದ ಒಟ್ಟು 53,714 ಮತದಾರರಲ್ಲಿ 38,698 ಮಂದಿ ಹಾಗೂ ಕೊಳ್ಳೇಗಾಲದ ಒಟ್ಟು 41,892 ಮತದಾರರ ಪೈಕಿ 30,877 ಮಂದಿ ಮತ ಚಲಾಯಿಸಿದ್ದಾರೆ.

ಚಾಮರಾಜನಗರದ ಗಾಳಿಪುರದ ವ್ಯಾಪ್ತಿಯಲ್ಲಿ ಬರುವ 4ನೇ ವಾರ್ಡ್‌ನಲ್ಲಿ ಪಕ್ಷವೊಂದರ ಕಾರ್ಯಕರ್ತರು ಮತ್ತು ಪಕ್ಷೇತರ ಅಭ್ಯರ್ಥಿಯ ಬೆಂಬಲಿಗರ ನಡುವೆ ಜಗಳ ಹಾಗೂ ಕೊಳ್ಳೇಗಾಲದ ಚೌಡೇಶ್ವರಿ ಶಾಲೆಯ ಮತಗಟ್ಟೆಯಲ್ಲಿ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿದ್ದು ಬಿಟ್ಟರೆ ಬೇರೆಲ್ಲೂ ಅಹಿತಕರ ಘಟನೆಗಳು ವರದಿಯಾಗಿಲ್ಲ. ಮತಯಂತ್ರಗಳಲ್ಲಿ ದೋಷ ಕಂಡು ಬಂದ ಪ್ರಕರಣಗಳೂ ನಡೆದಿಲ್ಲ. ಎಲ್ಲೂ ಮರುಮತದಾನ ನಡೆಸುವ ಅಗತ್ಯವೂ ಬಂದಿಲ್ಲ.

ಚಾಮರಾಜನಗರ ನಗರಸಭೆಯ ಎಲ್ಲ 31 ವಾರ್ಡ್‌ಗಳಿಗೆ ಮತದಾನ ನಡೆದಿದ್ದರೆ, ಕೊಳ್ಳೇಗಾಲದಲ್ಲಿ 29 ವಾರ್ಡ್‌ಗಳಿಗೆ ಮಾತ್ರ ಮತದಾನ ನಡೆದಿದೆ. ಇಲ್ಲಿನ 6ನೇ ವಾರ್ಡ್‌ನಲ್ಲಿ ಬಿಎಸ್‌ಪಿಯ ಗಂಗಮ್ಮ ಅವರು ಈಗಾಗಲೇ ಅವಿರೋಧ ಆಯ್ಕೆಯಾಗಿದ್ದಾರೆ. 9ನೇ ವಾರ್ಡ್‌ನಲ್ಲಿ ಬಿಎಸ್‌ಪಿ ಅಭ್ಯರ್ಥಿಯಾಗಿದ್ದ ರಮೇಶ್‌ ಅವರು ಅಪಘಾತದಲ್ಲಿ ಮೃತಪಟ್ಟಿದ್ದರಿಂದ ಅಲ್ಲಿ ಚುನಾವಣೆ ಮುಂದೂಡಲಾಗಿದೆ.

ಮತಯಂತ್ರದಲ್ಲಿ ಅಭ್ಯರ್ಥಿಗಳ ಭವಿಷ್ಯ: ಎರಡೂ ನಗರಸಭೆಗಳಲ್ಲಿ ಒಟ್ಟು 233 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಅವರ ರಾಜಕೀಯ ಭವಿಷ್ಯ ಮತಯಂತ್ರದಲ್ಲಿ ದಾಖಲಾಗಿದೆ. ಸೆಪ್ಟೆಂಬರ್‌ 3ರಂದು ಚಾಮರಾಜನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹಾಗೂ ಕೊಳ್ಳೇಗಾಲದ ಸರ್ಕಾರಿ ಎಂಜಿಎಸ್‌ವಿ ಜ್ಯೂನಿಯರ್‌ ಕಾಲೇಜುಗಳಲ್ಲಿ ಮತ ಎಣಿಕೆ ನಡೆಯಲಿದೆ. 

ಚಾಮರಾಜನಗರದಲ್ಲಿ 132 ಮತ್ತು ಕೊಳ್ಳೇಗಾಲದಲ್ಲಿ 101 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈಗ ಎಲ್ಲರ ಚಿತ್ತ ಮತ ಎಣಿಕೆಯ ದಿನದತ್ತ ನೆಟ್ಟಿದೆ.

ಬಿರುಸಿನ ಮತದಾನ: ಎಲ್ಲ ಮತಗಟ್ಟೆಗಳಲ್ಲಿ ಬೆಳಿಗ್ಗೆ 6 ರಿಂದ 7 ಗಂಟೆಯ ನಡುವೆ ಪಕ್ಷದ ಏಜೆಂಟರ ಸಮ್ಮುಖದಲ್ಲಿ ಅಣಕು ಮತದಾನ ನಡೆಯಿತು. ಮತಯಂತ್ರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದನ್ನು ಖಚಿತ ಪ‍ಡಿಸಿದ ನಂತರ, 7 ಗಂಟೆಗೆ ಮತದಾನ ಆರಂಭಗೊಂಡಿತು.

ಬೆಳಿಗ್ಗೆಯಿಂದಲೇ ಮತದಾರರು ಉತ್ಸಾಹದಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಬೆಳಿಗ್ಗೆ 9 ಗಂಟೆಯ ಹೊತ್ತಿಗೆ ಚಾಮರಾಜನಗರದಲ್ಲಿ ಶೇ 10.25, ಕೊಳ್ಳೇಗಾಲದಲ್ಲಿ ಶೇ 10.68ರಷ್ಟು ಮತದಾನವಾಗಿತ್ತು. ಮಧ್ಯಾಹ್ನದ ವೇಳೆಗೆ ಚಾಮರಾಜನಗರದಲ್ಲಿ ಶೇ 43.79 ಮತ್ತು ಕೊಳ್ಳೇಗಾಲದಲ್ಲಿ 40.58 ರಷ್ಟು ಮತದಾನವಾಗಿತ್ತು. 3 ಗಂಟೆಯ ಹೊತ್ತಿಗೆ ಮತದಾನದ ಪ್ರಮಾಣ ಕ್ರಮವಾಗಿ ಶೇ 57.41 ಮತ್ತು 55.71ಕ್ಕೆ ಏರಿತ್ತು.

ಹಿರಿಯರು, ವೃದ್ಧರು, ಅಂಗವಿಕಲರು, ಮೊದಲ ಬಾರಿಗೆ ಮತ ಚಲಾಯಿಸುವ ಹಕ್ಕನ್ನು ಪಡೆದವರು... ಹೀಗೆ ಎಲ್ಲರೂ ಉತ್ಸಾಹದಿಂದಲೇ ಮತದಾನ ಮಾಡಿದರು. 

ಜನಜಂಗುಳಿ: ಮತಗಟ್ಟೆಗಳಿಂದ ಅನತಿ ದೂರದಲ್ಲಿ ಅಭ್ಯರ್ಥಿಗಳು, ಅವರ ಬೆಂಬಲಿಗರು ಜಮಾಯಿಸಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅಭ್ಯರ್ಥಿಗಳು ಮತ್ತು ಬೆಂಬಲಿಗರು ಮತದಾನಕ್ಕೆ ಬರುವ ಪ್ರತಿಯೊಬ್ಬರನ್ನು ಮಾತನಾಡಿಸಿ, ತಮಗೆ ಮತ ಹಾಕುವಂತೆ ಮನವಿ ಮಾಡುತ್ತಿದ್ದ ದೃಶ್ಯವೂ ಕಂಡು ಬಂತು.

ಸೋಲು ಗೆಲುವಿನ ಲೆಕ್ಕ: ಅಭ್ಯರ್ಥಿಗಳ ಜೊತೆಗೆ ಪಕ್ಷದ ಸ್ಥಳೀಯ ಮುಖಂಡರೂ ಇದ್ದರು. ಎಲ್ಲರೂ ಮತದಾನದ ವಿವರಗಳನ್ನು ಕಲೆ ಹಾಕುತ್ತಾ ಯಾವ ವಾರ್ಡ್‌ನಲ್ಲಿ ಯಾರು ಗೆಲ್ಲಬಹುದು ಎಂಬುದರ ಬಗ್ಗೆ ಚರ್ಚೆ ಮಾಡುತ್ತಿದ್ದರು.

ಕೆಲವು ಅಭ್ಯರ್ಥಿಗಳು ಮತಗಟ್ಟೆಗಳಿಗೆ ಮತದಾರರನ್ನು ಕರೆದುಕೊಂಡು ಬರಲು ವಾಹನ ವ್ಯವಸ್ಥೆ ಮಾಡಿದ್ದರು. ಬಹುತೇಕರು ಇದಕ್ಕಾಗಿ ಆಟೊಗಳ ಮೊರೆ ಹೋಗಿದ್ದರೆ, ಇನ್ನೂ ಕೆಲವರು ಬೊಲೆರೊ, ಜೀಪಿನಂತಹ ವಾಹನಗಳನ್ನು ಬಳಸಿದ್ದರು. 

ಕೆಲವೆಡೆ ಗೊಂದಲ: ಕೆಲವು ವಾರ್ಡ್‌ಗಳಲ್ಲಿ ಅಭ್ಯರ್ಥಿಗಳ ಬೆಂಗಲಿಗರ ನಡುವಿನ ಮಾತಿನ ಚಕಮಕಿಯಿಂದ ಗೊಂದಲದ ವಾತಾವರಣ ನಿರ್ಮಾಣವಾಯಿತು. ಮತಗಟ್ಟೆಗೆ ಬರುತ್ತಿರುವ ಮತದಾರರನ್ನು ಒಬ್ಬ ಅಭ್ಯರ್ಥಿಯ ಬೆಂಬಲಿಗರು ತಡೆದು ಮತ ಕೇಳಿದರೆ, ಉಳಿದ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ತುರುಸಿನ ಸ್ಪರ್ಧೆ ಏರ್ಪಟ್ಟ ವಾರ್ಡ್‌ಗಳಲ್ಲಿ ಇಂತಹ ವಾತಾವರಣ ಕಂಡು ಬಂತು.

ಕೊಳ್ಳೇಗಾಲದ ಭೀಮನಗರ, ಜಿ.ಪಿ. ಮಲ್ಲಪ್ಪಪುರಂ, ಸಂತೇ ಬೀದಿ, ಮಂಜುನಾಥನಗರ, ಲಿಂಗನಪುರ ವಾರ್ಡ್‌ಗಳಲ್ಲೂ ಇದೇ ರೀತಿಯ ಗೊಂದಲದ ವಾತಾವರಣ ನಿರ್ಮಾಣವಾಯಿತು. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಸಚಿವರಿಂದ ಮತದಾನ

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಎನ್. ಮಹೇಶ್ ಅವರು ಕೊಳ್ಳೇಗಾಲದ ಜಿ.ಪಿ. ಮಲ್ಲಪ್ಪಪುರಂ ಬಡಾವಣೆಯ ಶಾಲೆಯ ಎಂ.ಸಿ.ಕೆ.ಸಿ. ಪ್ರೌಢಶಾಲೆಯ ಮತಗಟ್ಟೆ ಸಂಖ್ಯೆ 2 ರಲ್ಲಿ ಬೆಳಗ್ಗೆ  ಮತಚಲಾಯಿದರು.

ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ ಅವರು ಪತ್ನಿ ಶೋಭಾರಾಣಿ ಹಾಗೂ ಮಗ ಲೋಕೇಶ್‌ ಅವರ ಜೊತೆ ಬಂದು ಮಂಜುನಾಥ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 31 ರಲ್ಲಿ ಮತಚಲಾಯಿಸಿದರು.

ಕೆಲವರಿಗೆ ಲಾಠಿ ರುಚಿ : ಕೊಳ್ಳೇಗಾಲದ ಚೌಡೇಶ್ವರಿ ಶಾಲೆಯ ಮತಗಟ್ಟೆಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಕೆಲಕಾಲ ಗೊಂದಲ ಹಾಗೂ ಗದ್ದಲದ ವಾತಾವರಣ ಸೃಷ್ಟಿಯಾಗಿತ್ತು. ಪರಿಸ್ಥಿತಿಯನ್ನು ತಿಳಿಗೊಳಿಸಲು ಪೊಲೀಸರು ಲಾಠಿ ಬೀಸಬೇಕಾಯಿತು.

‘ಮತಗಟ್ಟೆಯಲ್ಲಿ ಬೂತ್ ಮಟ್ಟಕ್ಕೆ ನಿಯೋಜಿಸಿದ್ದ ಏಜೆಂಟರೊಬ್ಬರು ಅನ್ಯ ಪಕ್ಷದ ಪರ ಮತಚಲಾಯಿಸಲು ಒತ್ತಡ ಹೇರುತ್ತಿದ್ದಾರೆ. ಅವರು ಒಂದು ಪಕ್ಷದ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಹಾಗಾಗಿ ಅವರನ್ನು ಬದಲಾಯಿಸಿ’ ಎಂದು ಬೇರೆ ಬೇರೆ ಪಕ್ಷಗಳ ಅಭ್ಯರ್ಥಿಗಳು ಚುನಾವಣಾಧಿಕಾರಿ ಮೇಲೆ ಒತ್ತಡ ಹಾಕಿದರು ಎನ್ನಲಾಗಿದೆ.

ಚುನಾವಣಾಧಿಕಾರಿ ಇದಕ್ಕೆ ಒಪ್ಪಲಿಲ್ಲ ಎನ್ನಲಾಗಿದ್ದು, ಈ ಸಂದರ್ಭದಲ್ಲಿ ಕೆಲಕಾಲ ಗದ್ದಲ ಉಂಟಾಗಿ ತಳ್ಳಾಟ  ನಡೆಯಿತು. ಈ ಸಂದರ್ಭದಲ್ಲಿ ಪೊಲೀಸರು ಕೆಲವರ ಮೇಲೆ ಲಾಠಿ ಬೀಸಿದರು. ನಂತರ ಪರಿಸ್ಥಿತಿ ತಿಳಿಯಾಯಿತು.

ಮತಗಟ್ಟೆ ಬಳಿ ಗಲಾಟೆ, ಪ್ರಕರಣ ದಾಖಲು

ಚಾಮರಾಜನಗರದ 4ನೇ ವಾರ್ಡ್‌ನಲ್ಲಿ ಬರುವ ಗಾಳಿಪುರ ವ್ಯಾಪ್ತಿಯಲ್ಲಿ  ಸರ್ಕಾರಿ ಉರ್ದು ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ನಡೆಯುತ್ತಿದ್ದ ಸಂದರ್ಭದಲ್ಲಿ ಪಕ್ಷೇತರ ಅಭ್ಯರ್ಥಿ ಹಾಗೂ ಪಕ್ಷವೊಂದರ ಕಾರ್ಯಕರ್ತರ ನಡುವೆ ಜಗಳ ನಡೆದಿದೆ.

ಬಡಾವಣೆಯ ನಿವಾಸಿಗಳಾದ ಸುಬೇರ್‌, ಅಶೀಕ್‌, ಅಕ್ರಂ ಪಾಷ ಮತ್ತು ಶು‌ಬೇಹ್‌ ಎಂಬುವವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

4ನೇ ವಾರ್ಡ್‌ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದವರ ಪ‍ರವಾಗಿ ಪ್ರಚಾರ ಮಾಡುತ್ತಿದ್ದಾಗ ಇನ್ನೊಂದು ಪಕ್ಷದ ಕಾರ್ಯಕರ್ತರ ನಡುವೆ ಜಗಳ ನಡೆದಿದೆ ಎಂದು ತಿಳಿದು ಬಂದಿದೆ. ಈ ಸಂದರ್ಭದಲ್ಲಿ ನಾಲ್ವರು ಗಾಯಗೊಂಡಿದ್ದಾರೆ.

ಸ್ಥಳದಲ್ಲಿದ್ದ ಪೊಲೀಸರು ಗುಂಪ‍ನ್ನು ಚದುರಿಸಿದರು. ಪಟ್ಟಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

53,714 – ಚಾಮರಾಜನಗರದ ಮತದಾರರ ಸಂಖ್ಯೆ
38,698 – ಮತ ಚಲಾಯಿಸಿದವರು
41,892 – ಕೊಳ್ಳೇಗಾಲದ ಮತದಾರರ ಸಂಖ್ಯೆ
31,675 – ಮತ ಚಲಾಯಿಸಿದವರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !