ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮೀನು ತಿದ್ದುಪಡಿ: ಲಂಚ ಕೇಳುವ ಲೆಕ್ಕಾಧಿಕಾರಿ: ಜನಸಂಪರ್ಕ ಸಭೆಯಲ್ಲಿ ದೂರು

155 ಅಹವಾಲು ಸಲ್ಲಿಕೆ
Last Updated 5 ಅಕ್ಟೋಬರ್ 2018, 19:50 IST
ಅಕ್ಷರ ಗಾತ್ರ

ಹನೂರು: ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಜನಸಂಪರ್ಕ ಸಭೆಯಲ್ಲಿ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ 115 ಅಹವಾಲುಗಳು ಸಲ್ಲಿಕೆಯಾದವು.

ಬೆಳಿಗ್ಗೆ 11 ಗಂಟೆಗೆ ಆರಂಭವಾದ ಸಭೆಯು ಮಧ್ಯಾಹ್ನ 3ರವರೆಗೂ ನಡೆಯಿತು. ರಸ್ತೆ ನಿರ್ಮಾಣ, ಕುಡಿಯುವ ನೀರು, ಅಕ್ರಮ ಖಾತೆ ರದ್ದು, ಸ್ಮಶಾನ ಜಾಗ ಒತ್ತುವರಿ, ಜಮೀನಿನ ಖಾತೆ, ವಿದ್ಯುತ್ ಸಮಸ್ಯೆ ಸೇರಿದಂತೆ ಹತ್ತು ಹಲವು ಸಮಸ್ಯೆಗಳನ್ನು ಬಗೆಹರಿಸುವಂತೆ ಸಾರ್ವಜನಿಕರು ಕೋರಿದರು.

ದೊಮ್ಮನಗದ್ದೆ ಗ್ರಾಮದ ಮಾದುನಾಯ್ಕ ಮಾತನಾಡಿ, ‘ಜಮೀನಿನ ಫಸಲು ಸಂಪೂರ್ಣವಾಗಿ ಕಾಡುಪ್ರಾಣಿಗಳ ಪಾಲಾಗುತ್ತಿವೆ. ಪರಿಹಾರಕ್ಕಾಗಿ ಎರಡು ವರ್ಷಗಳಿಂದ ಅರ್ಜಿ ಸಲ್ಲಿಸುತ್ತಿದ್ದೇನೆ. ಆದರೆ, ಅರಣ್ಯಾಧಿಕಾರಿಗಳು ಪರಿಹಾರ ನೀಡುತ್ತಿಲ್ಲ’ ಎಂದು ದೂರಿದರು.

ಕಾಮಗೆರೆ ಶಿವಕುಮಾರ್ ಮಾತನಾಡಿ, ‘ಜಮೀನಿನ ತಿದ್ದುಪಡಿ ಮಾಡಿಕೊಡಲು ಗ್ರಾಮ ಲೆಕ್ಕಾಧಿಕಾರಿಗೆ ಎರಡು ಬಾರಿ ಅರ್ಜಿ ಸಲ್ಲಿಸಿದ್ದೇನೆ. ಆದರೆ, ಅವರು 5 ಸಾವಿರ ಲಂಚಕೊಟ್ಟರೆ ಮಾತ್ರ ತಿದ್ದುಪಡಿ ಮಾಡಿಕೊಡುವುದಾಗಿ ಹೇಳುತ್ತಿದ್ದಾರೆ’ ಎಂದು ಆರೋಪಿಸಿದರು.

ಚಿಗತಾಪುರ ಗ್ರಾಮದ ಎ.ಮಹಾದೇವ, ‘ಗ್ರಾಮದಲ್ಲಿನ ಕೆರೆಗೆ ಸೇರಿದ ಸರ್ವೆ ನಂಬರ್ 292/ಎ 1ಬಿ ಜಾಗದ 1 ಎಕರೆ 30 ಗುಂಟೆ ಜಮೀನನ್ನು ಗ್ರಾಮದ ಮಾರಿಮುತ್ತು ಎಂಬುವವರು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ 10 ಬಾರಿ ಅರ್ಜಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಒತ್ತುವರಿ ಜಾಗವನ್ನು ಕೂಡಲೇ ತೆರವುಗೊಳಿಸಬೇಕು’ ಎಂದು ಆಗ್ರಹಿಸಿದರು.

ಪಾಳ್ಯ ಗ್ರಾಮದ ರಂಗಸ್ವಾಮಿ, ‘ಗ್ರಾಮದಲ್ಲಿನ ಸರ್ವೆ ನಂಬರ್ 130ರ ಸರ್ಕಾರಿ ಜಾಗವನ್ನು ಬಿಲ್ ಕಲೆಕ್ಟರ್ ಸಿದ್ದಪ್ಪಸ್ವಾಮಿ ಎಂಬುವವರು ಒತ್ತುವರಿ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿದರು.

ಶಾಗ್ಯ ಗ್ರಾಮದ ಕೆಂಪಣ್ಣ, ‘ರಸ್ತೆ ನಿರ್ಮಿಸಲು ಜಮೀನಿನನ್ನು ಸ್ವಾಧೀನಪಡಿಸಿಕೊಂಡು ಹಲವು ವರ್ಷಗಳೇ ಕಳೆದರೂ ಪರಿಹಾರ ವಿತರಿಸಿಲ್ಲ’ ಎಂದು ದೂರಿದರು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ, ‘ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ಸಲ್ಲಿಸಿರುವ ಅಹವಾಲುಗಳನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, 15 ದಿನಗಳೊಳಗೆ ವಿಲೇವಾರಿ ಮಾಡಬೇಕು. ಸಾರ್ವಜನಿಕರು ಕಚೇರಿಗೆ ಬಂದಾಗ ಸರಿಯಾಗಿ ಸ್ಪಂದಿಸಬೇಕು. ಇಲ್ಲದಿದ್ದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಶಾಸಕ ಆರ್. ನರೇಂದ್ರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಸದಸ್ಯೆ ಮರುಗದಮಣಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜು, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮಮತಾ, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT