ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಟ್ಟೂರು ಹೊಸ ತಾಲ್ಲೂಕು ಉದಯ

ನೂತನ ತಾಲ್ಲೂಕು ಕಚೇರಿ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಲಾಡ್‌
Last Updated 2 ಮಾರ್ಚ್ 2018, 8:47 IST
ಅಕ್ಷರ ಗಾತ್ರ

ಕೊಟ್ಟೂರು: ‘ರಾಜ್ಯ ಸರ್ಕಾರ ಏಕಕಾಲಕ್ಕೆ 49 ತಾಲ್ಲೂಕುಗಳ ರಚನೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಿರುವುದು ಐತಿಹಾಸಿಕ ದಾಖಲೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ಲಾಡ್‌ ಅಭಿಪ್ರಾಯಪಟ್ಟರು.

ಪಟ್ಟಣದ ಯಾತ್ರಿ ನಿವಾಸದ ಆವರಣದಲ್ಲಿ ಗುರುವಾರ ನೂತನ ಕೊಟ್ಟೂರು ತಾಲ್ಲೂಕಿಗೆ ಚಾಲನೆ ನೀಡಿ ಮಾತನಾಡಿ, ‘ಹಿಂದೆ ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ಕೇವಲ 43 ತಾಲ್ಲೂಕುಗಳ ಘೋಷಣೆ ಮಾಡಿ ಅನುಷ್ಠಾನಗೊಳಿಸುವ ಯಾವುದೇ ಪ್ರಯತ್ನವನ್ನು ಮಾಡಲಿಲ್ಲ’ ಎಂದು ದೂರಿದರು.

ರಾಜಕೀಯಕ್ಕಿಲ್ಲ: ‘ವಿದ್ಯಾರ್ಥಿಗಳ ಶೈಕ್ಷಣಿಕ ಹಿತ ದೃಷ್ಟಿಯಿಂದ ಖನಿಜ ಪ್ರತಿಷ್ಠಾನದ ನಿಧಿಯಲ್ಲಿ ಶೈಕ್ಷಣಿಕ ಪ್ರೋತ್ಸಾಹಧನ ನೀಡಲಾಗುತ್ತಿದೆಯೇ ಹೊರತು ರಾಜಕೀಯಕ್ಕೆ ಅದನ್ನು ಬಳಸಿಕೊಂಡಿಲ್ಲ’ ಎಂದು ಪ್ರತಿಪಾದಿಸಿದರು.

ಶಾಸಕ ಎಸ್. ಭೀಮಾನಾಯ್ಕ ಮಾತನಾಡಿ, ‘ಕೊಟ್ಟೂರು ತಾಲ್ಲೂಕು ರಚನೆ ಹಾಗೂ ಅನುಷ್ಠಾನದ ಶ್ರೇಯಸ್ಸು ಸಿದ್ದರಾಮಯ್ಯ ಸರ್ಕಾರಕ್ಕೆ ಸಲ್ಲಬೇಕು’ ಎಂದರು.

ಮೇಲ್ದರ್ಜೆಗೆ: ಕೊಟ್ಟೂರು ಪಟ್ಟಣ ಪಂಚಾಯಿತಿ ಇನ್ನೆರಡು ತಿಂಗಳಲ್ಲಿ ಪುರಸಭೆಯಾಗಿ ಮೇಲ್ದರ್ಜೆಗೆ ಏರಲಿದೆ. ಮುಂಬರುವ ದಿನಗಳಲ್ಲಿ ಪಟ್ಟಣದಲ್ಲಿ ಬಸ್ ಡಿಪೋ ಆರಂಭಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕುವೆ, ಮಿನಿ ವಿಧಾನ ಸೌಧ ನಿರ್ಮಾಣಕ್ಕೆ ₹10 ಕೋಟಿ ಅನುದಾನ ನೀಡುವಂತೆ ಈಗಾಗಲೇ ಮನವಿ ಸಲ್ಲಿಸಿರುವೆ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಂ.ಜೆ.ಹರ್ಷವರ್ಧನ್ ಮಾತನಾಡಿದರು.

ಜಿಲ್ಲಾಧಿಕಾರಿ ಡಾ.ವಿ.ರಾಮಪ್ರಸಾದ್‌ ಮನೋಹರ್‌, ತಹಶೀಲ್ದಾರ್ ಎಲ್.ಕೃಷ್ಣಮೂರ್ತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ. ವೆಂಕಟೇಶ್ ನಾಯಕ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಅನಿಲ್ ಹೊಸಮನಿ, ಉಪಾಧ್ಯಕ್ಷೆ ಸುಮಕ್ಕ ವೇದಿಕೆಯಲ್ಲಿದ್ದರು.

ನೂತನ ಕಟ್ಟಡದಲ್ಲಿ...: ನೂತನ ತಾಲ್ಲೂಕು ಕಚೇರಿಯ ತಳ ಮಹಡಿಯಲ್ಲಿ ನಾಲ್ಕು ಕೊಠಡಿ ಹಾಗೂ ಒಂದು ವಿಶಾಲ ಕೊಠಡಿ ಇದೆ. ಅಲ್ಲಿ ತಹಶೀಲ್ದಾರ್, ಶಿರೆಸ್ತೇದಾರ್‌ ಕಚೇರಿ, ಜನ ಸ್ನೇಹಿ ಕಾರ್ಯಾಲಯ, ಪಹಣಿ ವಿತರಣ ಕೇಂದ್ರ, ಅಭಿಲೇಖಾಲಯವಿದೆ.

ಮೊದಲ ಮಹಡಿಯಲ್ಲಿ ಅದೇ ಮಾದರಿಯ ರೀತಿಯ ಕೊಠಡಿಗಳಿದ್ದು, ಫಲಕಗಳನ್ನು ಇನ್ನೂ ಅಳವಡಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT