ಭಾನುವಾರ, ಮಾರ್ಚ್ 7, 2021
30 °C

ಎಸ್‌ಡಿಪಿಐ ಮತ್ತಷ್ಟು ಪ್ರಬಲ, ಕಾಂಗ್ರೆಸ್‌ಗೆ ಗುದ್ದು, ಗೆಲುವಿನ ಸರದಾರನಿಗೆ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಾಮರಾಜನಗರ: ಕಳೆದ ಬಾರಿಯ ಚುನಾವಣೆಯಲ್ಲಿ ನಾಲ್ಕು ವಾರ್ಡ್‌ಗಳಲ್ಲಿ ಗೆದ್ದಿದ್ದ ಎಸ್‌ಡಿಪಿಐ ಈ ಸಲ ಆರು ಸ್ಥಾನಗಳನ್ನು ಗೆದ್ದು ಚಾಮರಾಜನಗರದಲ್ಲಿ ತನ್ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಿದೆ. 

3, 4, 5, 6, 9, 12, 14 ನೇ ವಾರ್ಡ್‌ಗಳಲ್ಲಿ ಸ್ಪ‍ರ್ಧಿಸಿದ್ದ ಎಸ್‌ಡಿಪಿಐ, 14ನೇ ವಾರ್ಡ್‌ ಬಿಟ್ಟು ಉಳಿದ ಎಲ್ಲ ಕಡೆಗಳಲ್ಲಿ ಜಯಭೇರಿ ಭಾರಿಸಿದೆ. ಈ ಪೈಕಿ ಐದು ವಾರ್ಡ್‌ಗಳಲ್ಲಿ ಎಸ್‌ಡಿಪಿಐ ಅಭ್ಯರ್ಥಿಗಳು ಕಾಂಗ್ರೆಸ್‌ ಅಭ್ಯರ್ಥಿಗಳ ಕೈಯಿಂದ ಗೆಲುವನ್ನು ಕಸಿದುಕೊಂಡಿದ್ದಾರೆ.

ಮೊದಲ ಸೋಲು: ಸತತ ಒಂಬತ್ತು ಬಾರಿ ಗೆದ್ದು ಸೋಲಿಲ್ಲದ ಸರದಾರ ಎಂದೇ ಗುರುತಿಸಿಕೊಂಡಿದ್ದ ಕಾಂಗ್ರೆಸ್‌ನ ಹಿರಿಯ ಮುಖಂಡ ಎಸ್‌. ನಂಜುಂಡಸ್ವಾಮಿ ಅವರು ಮೊದಲ ಬಾರಿ ಸೋಲಿನ ಕಹಿಯನ್ನು ಅನುಭವಿಸಿದ್ದಾರೆ. ಯುವ ಮುಖಂಡ, ಎಸ್‌ಡಿಪಿಐ ಅಭ್ಯರ್ಥಿ ಎಂ. ಮಹೇಶ್‌ ಅವರು ರಾಜಕಾರಣದ ಹಿರಿಯಾಳುವಿಗೆ ಸೋಲಿನ ರುಚಿ ತೋರಿಸಿದ್ದಾರೆ.

ನಂಜುಂಡಸ್ವಾಮಿ ಅವರು ಕಳೆದ ಬಾರಿ 14ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದರು. ಆದರೆ, ಈ ಬಾರಿ ವಾರ್ಡ್‌ ಮೀಸಲಾತಿ ಬದಲಾದ ಕಾರಣ ಅವರು 9ನೇ ವಾರ್ಡ್‌ನಿಂದ ಕಣಕ್ಕಿಳಿದಿದ್ದರು.

‘13, 14ನೇ ವಾರ್ಡ್‌ನಲ್ಲಿ ಈ ಬಾರಿಯೂ ಕಾಂಗ್ರೆಸ್‌ ಗೆದ್ದಿದೆ. ಶಾಸಕರು ವಾರ್ಡ್‌  ಮೀಸಲಾತಿ ಬದಲಾವಣೆ ಮಾಡಿದ್ದರಿಂದ ಸೋಲಾಯಿತು. ಪೌರ ಕಾರ್ಮಿಕರು ಮತದಾನ ಮಾಡದಂತೆ ತಡೆಯಲಾಯಿತು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ  ಮಹಮ್ಮದ್‌ ಅಸ್ಗರ್‌, ಹಿಂದಿನ ಅಧ್ಯಕ್ಷ ಸೈಯದ್‌ ರಫಿ ಹಾಗೂ ಇನ್ನು ಕೆಲವರು ಇದರ ಹಿಂದೆ ಇದ್ದಾರೆ’ ಎಂದು ನಂಜುಂಡಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಖಾತೆ ತೆರೆಯದ ಜೆಡಿಎಸ್‌: 14 ವಾರ್ಡ್‌ಗಳಲ್ಲಿ ಸ್ಪರ್ಧಿಸಿದ್ದ ಜೆಡಿಎಸ್‌ ಒಂದು ಸ್ಥಾನವನ್ನೂ ಗೆಲ್ಲಲು ಸಫಲವಾಗಿಲ್ಲ. ಕಳೆದ ಬಾರಿ ಒಂದು ವಾರ್ಡ್‌ನಲ್ಲಿ ಅದು ಜಯಗಳಿಸಿತ್ತು. 

ನಿರೀಕ್ಷೆಯಂತೆ 27ನೇ ವಾರ್ಡ್‌ನಲ್ಲಿ ಬಿಎಸ್‌ಪಿ ಅಭ್ಯರ್ಥಿ ವಿ. ಪ್ರಕಾಶ್‌ ಅವರು ಜಯಗಳಿಸಿದ್ದಾರೆ. ಆದರೆ, 16 ವಾರ್ಡ್‌ಗಳಲ್ಲಿ ಸ್ಪರ್ಧಿಸಿದ್ದ ಬಿಎಸ್‌ಪಿಗೆ ದಕ್ಕಿದ್ದು ಒಂದೇ ಗೆಲುವು.

ಬಂಡಾಯಕ್ಕೆ ಸಿಗದ ಮತ: ಚಾಮರಾಜನಗರದಲ್ಲಿ ಪಕ್ಷದ ವಿರುದ್ಧ ಬಂಡಾಯವೆದ್ದು ಪಕ್ಷೇತರರಾಗಿ ಸ್ಪರ್ಧಿಸಿದ್ದ ಎಂಟು ಜನರ (ಬಿಜೆಪಿಯ ಐವರು, ಕಾಂಗ್ರೆಸ್‌ನ ಮೂವರು) ಪೈಕಿ ಒಬ್ಬರು ಮಾತ್ರ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಟಿಕೆಟ್‌ ಕೈತಪ್ಪಿದ್ದರಿಂದ ಅಸಮಾಧಾನಗೊಂಡು 17ನೇ ವಾರ್ಡ್‌ನಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಸಿ.ಎ. ಬಸವಣ್ಣ ಅವರನ್ನು ಮಾತ್ರ ಮತದಾರರು ಕೈ ಹಿಡಿದಿದ್ದಾರೆ.

23ನೇ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಅವರ ವಿರುದ್ಧ ಬಂಡಾಯವೆದ್ದು ಕಲ್ಯಾಣಿ ಹಾಗೂ ಮಂಜುಳಾ ಸ್ಪರ್ಧಿಸಿದ್ದರು. ಆದರೆ, ಇಬ್ಬರೂ ಪಕ್ಷದ ಅಭ್ಯರ್ಥಿ ಮುಂದೆ ಮಂಡಿಯೂರಿದ್ದಾರೆ.

ಐವರು ಹಾಲಿಗಳಿಗೆ ಜಯ: 11 ಮಂದಿ ಹಾಲಿ ಸದಸ್ಯರು ಈ ಬಾರಿ ಮತ್ತೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಅವರಲ್ಲಿ ಐವರು ಮಾತ್ರ ಗೆಲುವು ಕಂಡಿದ್ದಾರೆ. ಹಾಲಿ ಉಪಾಧ್ಯಕ್ಷ ಆರ್‌.ಎಂ. ರಾಜಪ್ಪ, ಬಿಜೆಪಿಯ ಮಹದೇವಯ್ಯ, ಕಾಂಗ್ರೆಸ್‌ನ ಕಲಾವತಿ, ಆರ್‌.ಪಿ. ನಂಜುಂಡಸ್ವಾಮಿ ಮತ್ತು ಎಸ್‌ಡಿಪಿಐನ ಎಂ. ಮಹೇಶ್‌ ಅವರು ಮತ್ತೊಮ್ಮೆ ಗೆಲುವಿನ ನಗೆ ಬೀರಿದ್ದಾರೆ.

ರಾಜಪ್ಪ ಅವರು ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ನಂಜುಂಡಸ್ವಾಮಿ ಅವರಿಗಿಂತ ಕೇವಲ 21 ಮತಗಳನ್ನು ಹೆಚ್ಚು ಪಡೆದು ಪ್ರಯಾಸದ ಜಯ ಸಾಧಿಸಿದ್ದಾರೆ.

ಈ ಹಿಂದೆ ನಗರಸಭೆಯ ಅಧ್ಯಕ್ಷರಾಗಿದ್ದವರ ಪೈಕಿ ಚಿನ್ನಮ್ಮ (14ನೇ ವಾರ್ಡ್‌) ಗೆದ್ದಿದ್ದರೆ, ಎಸ್‌. ನಂಜುಂಡಸ್ವಾಮಿ ಹಾಗೂ ಹಾಲಿ ಅಧ್ಯಕ್ಷೆ ಶೋಭ ಅವರು ಸೋಲು ಕಂಡಿದ್ದಾರೆ.

ಹ್ಯಾಟ್ರಿಕ್‌ ಗೆಲುವು: ಕಾಂಗ್ರೆಸ್‌ನ ಎಂ. ಕಲಾವತಿ (13ನೇ ವಾರ್ಡ್‌) ಮತ್ತು ಆರ್‌.ಪಿ. ನಂಜುಂಡಸ್ವಾಮಿ (15ನೇ ವಾರ್ಡ್‌) ಅವರಿಗೆ ಇದು ಹ್ಯಾಟ್ರಿಕ್‌ ಗೆಲುವು. 

ಪಕ್ಷಾಂತರಿಗಳಿಗೆ ಒಲಿಯದ ಜಯಲಕ್ಷ್ಮಿ

‌ಚುನಾವಣೆಯ ಸಂದರ್ಭದಲ್ಲಿ ಪಕ್ಷಾಂತರ ಮಾಡಿ ಕಣಕ್ಕೆ ಇಳಿದಿದ್ದ ಬಹುತೇಕರಿಗೆ ‌ಮತದಾರರು ಮಣೆ ಹಾಕಿಲ್ಲ. ಬಿಎಸ್‌ಪಿಯಿಂದ ಕಾಂಗ್ರೆಸ್‌ಗೆ ಬಂದು 15ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದ ಆರ್‌.ಪಿ.ನಂಜುಂಡಸ್ವಾಮಿ ಅವರಿಗೆ ಮಾತ್ರ ವಿಜಯಲಕ್ಷ್ಮಿ ಒಲಿದಿದ್ದಾಳೆ.

ಕಳೆದ ಬಾರಿ 16ನೇ ವಾರ್ಡ್‌ನಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದ ನಾರಾಯಣಸ್ವಾಮಿ ಅವರು ಈ ಬಾರಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡು 17ನೇ ವಾರ್ಡ್‌ನಲ್ಲಿ ಸ್ಪರ್ಧಿಸಿದ್ದರು. ಆದರೆ, ಗೆಲುವು ಅವರ ಕೈಗೆಟುಕಿಲ್ಲ. 

2013ರಲ್ಲಿ 21ನೇ ವಾರ್ಡ್‌ನಿಂದ ಕೆಜೆಪಿಯಿಂದ ಆಯ್ಕೆಯಾಗಿದ್ದ ಸಿ.ಜೆ. ಶ್ರೀಕಾಂತ್‌ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿ 8ನೇ ವಾರ್ಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆದರೆ, ಅವರಿಗೆ ಜಯದ ಸಿಹಿ ಸಿಕ್ಕಿಲ್ಲ.

ಹಿಂದಿನ ಚುನಾವಣೆಯಲ್ಲಿ ಬಿಎಸ್‌ಆರ್‌ನಿಂದ ಆಯ್ಕೆಯಾಗಿದ್ದ ಚಂಗುಮಣಿ‌ ಈ ಬಾರಿ 27ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದರು. ಆದರೆ, ವಿಜಯಮಾಲೆಗೆ ಕೊರಳೊಡ್ಡಲು ಅವರಿಗೆ ಸಾಧ್ಯವಾಗಿಲ್ಲ. 

ಬಿಜೆಪಿ ತೊರೆದಿದ್ದ ವಿಜಯಕುಮಾರಿ ಅವರು ತಮ್ಮ ಮಗ ಶ್ರೀನಿವಾಸ ಪ್ರಸಾದ್‌ ಅವರಿಗೆ 20ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್‌ ಕೊಡಿಸಲು ಯಶಸ್ವಿಯಾಗಿದ್ದರು. ಆದರೆ, ಮತದಾರರು ಅವರ ಕೈ ಹಿಡಿದಿಲ್ಲ.

ಸಂಭ್ರಮಾಚರಣೆ ಜೋರು

ಫಲಿತಾಂಶ ಪ್ರಕಟವಾಗುತ್ತಲೇ, ಮತ ಎಣಿಕೆ ಕೇಂದ್ರದ ಹೊರಗಡೆ ಜಮಾಯಿಸಿದ್ದ ಪಕ್ಷಗಳ ಕಾರ್ಯಕರ್ತರು ಮತ್ತು ಅಭ್ಯರ್ಥಿಗಳ ಬೆಂಬಲಿಗರು ಪಕ್ಷ ಹಾಗೂ ಅಭ್ಯರ್ಥಿಗಳ ಪರ ಘೋಷಣೆಗಳನ್ನು ಕೂಗಿ ಸಂಭ್ರಮ ಪಟ್ಟರು. ಅಭ್ಯರ್ಥಿಗಳನ್ನು ಹೆಗಲ ಮೇಲೆ ಹೊತ್ತು ಕುಣಿದು ಕುಪ್ಪಳಿಸಿದರು. 

ಇನ್ನು ಕೆಲವರು ಪಟ್ಟಣದ ಬೀದಿಯಲ್ಲಿ ತೆರೆದ ವಾಹನಗಳಲ್ಲಿ ವಿಜೇತರ ಮೆರವಣಿಗೆಯನ್ನೂ ಮಾಡಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು