ಕಿರುಕುಳ: ಆತ್ಮಹತ್ಯೆಗೆ ಯತ್ನಿಸಿದ ರೈತ ಕುಟುಂಬ

7

ಕಿರುಕುಳ: ಆತ್ಮಹತ್ಯೆಗೆ ಯತ್ನಿಸಿದ ರೈತ ಕುಟುಂಬ

Published:
Updated:
Deccan Herald

ಚಾಮರಾಜನಗರ: ಸಾಗುವಳಿ ಮಾಡುತ್ತಿರುವ ಜಮೀನನ್ನು ಬಿಟ್ಟುಕೊಡುವಂತೆ ಊರಿನಲ್ಲಿ ನೀಡುತ್ತಿರುವ ಕಿರುಕುಳದಿಂದ ಬೇಸತ್ತು ತಾಲ್ಲೂಕಿನ ಬೇಡರಪುರದ ರೈತ ಕುಟುಂಬವೊಂದು ಶುಕ್ರವಾರ ಜಿಲ್ಲಾಡಳಿತ ಭವನದ ಮುಂದೆ ಮೈಮೇಲೆ ಡೀಸೆಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದೆ.

ಬೇಡರಪುರದ ನಿವಾಸಿಗಳಾದ ತಂದೆ ಮಲ್ಲಯ್ಯ ಹಾಗೂ ಪತ್ನಿ ದೊಡ್ಡಮ್ಮ ಮತ್ತು ಮಗ ಎಂ. ಕುಮಾರ್‌ ಅವರು ಆತ್ಮಹತ್ಯೆಗೆ ಯತ್ನಿಸಿದವರು. 

ಶುಕ್ರವಾರ ಮಧ್ಯಾಹ್ನದ ಹೊತ್ತು ಕೈಯಲ್ಲಿ ಕ್ಯಾನ್ ಹಿಡಿದುಕೊಂಡು ಬಂದ ಮೂರು ಜಿಲ್ಲಾಡಳಿತ ಭವನದ ಎದುರು ಏಕಾಏಕಿ ಮೈಮೇಲೆ ಡೀಸೆಲ್‌ ಎರೆದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದರು. ಸ್ಥಳದಲ್ಲಿದ್ದ ಜನರು ಅವರನ್ನು ತಡೆದು, ಪೊಲೀಸ್‌ ಚೌಕಿಯಲ್ಲಿದ್ದ ಪೊಲೀಸರನ್ನು ಕರೆದು ಸಂಭಾವ್ಯ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ.

‘ಬೇಡರಪುರ ಗ್ರಾಮದ ಸರ್ವೆ ನಂಬರ್‌ 248ರಲ್ಲಿ ಒಂದು ಎಕರೆ ಸ್ವಂತ ಜಮೀನು ಮತ್ತು ಇದಕ್ಕೆ ಹೊಂದಿಕೊಂಡಂತೆ ಇರುವ ಸರ್ವೆ ನಂಬರ್‌ 33ರಲ್ಲಿರುವ ಮೂರೂವರೆ ಎಕರೆ ಸರ್ಕಾರಿ ಜಮೀನಿನಲ್ಲಿ ಹಲವಾರು ವರ್ಷಗಳಿಂದ ಸಾಗುವಳಿ ಮಾಡುತ್ತಾ ಬಂದಿದ್ದೇವೆ. ಈ ಬಾರಿಯೂ ಹುರುಳಿ ಮತ್ತು ಜೋಳ ಬಿತ್ತಿದ್ದೇವೆ. ಆದರೆ, ಈಗ ಗ್ರಾಮದ ಶಿವಪ್ಪ ಹಾಗೂ ಚಾಮರಾಜನಗರದ ಕಾಂಗ್ರೆಸ್‌ ಮುಖಂಡ ನಂಜುಂಡಸ್ವಾಮಿ ಅವರ ಅಕ್ಕನ ಮಕ್ಕಳಾದ ಶ್ರೀನಿವಾಸ, ಮಹದೇವಸ್ವಾಮಿ ಮತ್ತು ಚಿನ್ನಸ್ವಾಮಿ ಅವರು ಮೂರೂವರೆ ಎಕರೆ ಸಾಗುವಳಿ ಜಮೀನನ್ನು ಬಿಟ್ಟುಕೊಡುವಂತೆ ನಮಗೆ ಒತ್ತಡ ಹೇರುತ್ತಿದ್ದಾರೆ’ ಎಂದು ಕುಮಾರ್‌ ಆರೋಪಿಸಿದರು.

‘ಜಮೀನು ಕೊಡದಿದ್ದರೆ ಗ್ರಾಮದಲ್ಲಿ ವಾಸ ಮಾಡಲು ಬಿಡುವುದಿಲ್ಲ. ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುತ್ತೇವೆ ಎಂದು ಬೆದರಿಕೆಯನ್ನೂ ಒಡುತ್ತಿದ್ದಾರೆ. ಊರಿನಲ್ಲಿ ಓಡಾಡಲೂ ಸಾಧ್ಯವಾಗುತ್ತಿಲ್ಲ. ಹಾಗಾಗಿ, ಅವರು ಕೊಲ್ಲುವುದಕ್ಕಿಂತ ನಾವೇ ಆತ್ಮಹತ್ಯೆ ಮಾಡುವುದು ಲೇಸು ಎಂದು ಡೀಸೆಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದೆವು’ ಎಂದು ಅವರು ಹೇಳಿದರು.

‘ಶಿವಪ್ಪ ಅವರು ಜಮೀನನ್ನು ನಂಜುಂಡಸ್ವಾಮಿ ಅವರಿಗೆ ಮಾರಾಟ ಮಾಡಿರುವುದಾಗಿ ಹೇಳುತ್ತಿದ್ದಾರೆ. ನನ್ನ ತಾಯಿ ವಿರುದ್ಧ ಕೊಲೆ ಬೆದರಿಕೆ ಹಾಕಿದ ಪ್ರಕರಣವನ್ನೂ ದಾಖಲಿಸಿದ್ದಾರೆ’ ಎಂದು ಆರೋಪಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್‌ ಪುರಂದರ್‌ ಕುಟುಂಬದ ಅಹವಾಲು ಸ್ವೀಕರಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !