ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳರಸ್ತೆಗೆ ಟೋಲ್ ನಿರ್ಮಾಣ– ಪ್ರತಿಭಟನೆ

ಹೆಜಮಾಡಿ: ಗೂಡಂಗಡಿ ತೆರವಿಗೆ ಹೋರಾಟಗಾರರ ವಿರೋಧ
Last Updated 29 ಮೇ 2018, 9:55 IST
ಅಕ್ಷರ ಗಾತ್ರ

ಪಡುಬಿದ್ರಿ: ಹೆಜಮಾಡಿ ಟೋಲ್‌ಗೇಟ್‌ ಬಳಿ ನಿರ್ಮಿಸಿರುವ ಗೂಡಂಗಡಿಗಳ ತೆರೆವಿಗೆ ಮುಂದಾಗಿರುವುದು ಹಾಗೂ ಬೇಡಿಕೆಗಳನ್ನು ಈಡೇರಿಸದೇ ಒಳರಸ್ತೆಗೆ ಟೋಲ್ ನಿರ್ಮಿಸುತ್ತಿರುವ ಹೆದ್ದಾರಿ ಪ್ರಾಧಿಕಾರದ ಕ್ರಮವನ್ನು ವಿರೋಧಿಸಿ ಹೆಜಮಾಡಿ ನಾಗರಿಕ ಹೋರಾಟ ಸಮಿತಿ ಸೋಮವಾರ ಪ್ರತಿಭಟನೆ ನಡೆಸಿತು.

ಎರಡು ವರ್ಷದ ಹಿಂದೆ ಹೆಜಮಾಡಿ ಗುಡ್ಡೆಯಂಗಡಿ ಬಳಿ ಟೋಲ್‌ಗೇಟ್‌ ನಿರ್ಮಾಣಕ್ಕೆ ಮುಂದಾದಾಗ ಗ್ರಾಮ ಪಂಚಾಯಿತಿ ವಿರೋಧ ವ್ಯಕ್ತಪಡಿಸಿತ್ತು. ಜತೆಗೆ ‌ಗ್ರಾಮಕ್ಕೆ ಅಗತ್ಯವಿರುವ ಕೆಲವು ಮೂಲ ಸೌಕರ್ಯವನ್ನು ಗುತ್ತಿಗೆದಾರ ಕಂಪನಿ ಮಾಡಿಕೊಡಬೇಕು ಎಂಬ ಬೇಡಿಕೆ ಇಟ್ಟಿತ್ತು. ಪ್ರತಿಭಟನೆಗೆ ಮಣಿದ ಜಿಲ್ಲಾಡಳಿತ ಅಂದು ಕಾಮಗಾರಿಯನ್ನು ಸ್ಥಗಿತಗೊಳಿಸಿ, ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಕಂಪನಿಯಿಂದ ಕೊಡಿಸಿತ್ತು. ಆದರೆ, ಈವರೆಗೆ ನಮ್ಮ ಯಾವುದೇ ಬೇಡಿಕೆಗಳು ಈಡೇರಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಎಚ್ಚರಿಕೆ: ‘ಗ್ರಾಮ ಪಂಚಾಯಿತಿಗೆ ನೀಡಬೇಕಿರುವ ಶೇ 2ರಷ್ಟು ನಿಧಿಯನ್ನು ನವಯುಗ ಕಂಪೆನಿ ಈವರೆಗೆ ಪಾವತಿಸಿಲ್ಲ. ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟಿರುವ ಬಗ್ಗೆ ಪ್ರಶ್ನಿಸಿದರೆ, ಪ್ರಶ್ನಿಸಿದವರನ್ನೇ ಬೆದರಿಸುತ್ತಿದ್ದಾರೆ. ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೆಜಮಾಡಿ ಬಂದ್‌ಗೆ ಕರೆ ನೀಡಿ, ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತೇವೆ’ ಎಂದು ಹೆಜಮಾಡಿ ಪಂಚಾಯಿತಿ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್ ಖಡಕ್ ಎಚ್ಚರಿಕೆ ನೀಡಿದರು.

ಗೂಡಂಗಡಿ ತೆರವಿಗೆ ವಿರೋಧ: ಟೋಲ್‌ ಬಳಿ ಇರುವ 20ಕ್ಕೂ ಅಧಿಕ ಗೂಡಂಗಡಿಗಳನ್ನು ತೆರವುಗೊಳಿಸಲು ನವಯುಗ ಕಂಪನಿ ಮುಂದಾಗಿತ್ತು. ಆದರೆ ಗೂಡಂಗಡಿಗಳನ್ನು ತೆರವುಗೊಳಿಸುವುದನ್ನು ಪ್ರತಿಭಟನಾಕಾರರು ವಿರೋಧಿಸಿದರು.
‘ಹೊಟ್ಟೆಪಾಡಿಗಾಗಿ ಗೂಡಂಗಡಿ ತೆರೆದು ಜೀವನ ನಡೆಸುತ್ತಿರುವವರಿಗೆ ತೊಂದರೆ ಕೊಡುವುದು ಸರಿಯಲ್ಲ. ಟೋಲ್‌ಗೇಟ್ ಸಮೀಪ ಸ್ಕೈವಾಕ್, ಹೆಜಮಾಡಿಗೆ ಸರ್ವಿಸ್ ರಸ್ತೆ ನಿರ್ಮಾಣ, ಬೋರುಗುಡ್ಡೆ ಪ್ರದೇಶಕ್ಕೆ ಕುಡಿಯುವ ನೀರು ಪೂರೈಸಲು ಪೈಪ್‌ಲೈನ್‌ ಅಳವಡಿಸುವ ಕಾಮಗಾರಿ ಸಹಿತ ಹಲವು ಬೇಡಿಕೆಗಳನ್ನು ಕಂಪನಿ ಮುಂದಿಡಲಾಗಿದೆ. ಆದರೆ ಅವರು ನಮ್ಮ ಯಾವ ಬೇಡಿಕೆಗಳನ್ನೂ ಈಡೇರಿಸಿಲ್ಲ’ ಎಂದು ನಾಗರಿಕ ಹೋರಾಟ ಸಮಿತಿಯ ಗುಲಾಂ ಮಹೊಮ್ಮದ್ ಹಾಗೂ ಶೇಖರ್ ಹೆಜ್ಮಾಡಿ ದೂರಿದರು.

ನವಯುಗ ಟೋಲ್ ವ್ಯವಸ್ಥಾಪಕ ರವಿಬಾಬು ಮಾಧ್ಯಮದವರೊಂದಿಗೆ ಮಾತನಾಡಿ, ‘ಹೆಜಮಾಡಿ ಟೋಲ್ ಪ್ಲಾಜಾದ ಬಳಿಯ ಹೆದ್ದಾರಿ ಬದಿಯನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಗೂಡಂಗಡಿಗಳನ್ನು ತೆರವುಗೊಳಿಸುವಂತೆ ಭೂ ಹಾಗೂ ಸಾರಿಗೆ ಕಾಯ್ದೆ 2002ರ ಅನ್ವಯ ಅವರಿಗೆ ಶನಿವಾರ ನೋಟಿಸ್ ನೀಡಲಾಗಿತ್ತು. ಅಪಘಾತ ವಲಯ ಹಾಗೂ ಸಂಚಾರಕ್ಕೆ ತೊಂದರೆಯಾಗುವುದರಿಂದ ಈ ಗೂಡಂಗಡಿಗಳನ್ನು ತೆರವು ಮಾಡಲು ಸೂಚಿಸಲಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಶಶಿಕಾಂತ ಪಡುಬಿದ್ರಿ, ಪಂಚಾಯಿತಿ ಉಪಾಧ್ಯಕ್ಷ ಸುಧಾಕರ ಕರ್ಕೇರ, ಸದಸ್ಯ ಪ್ರಾಣೇಶ್ ಹೆಜಮಾಡಿ, ಸಚಿನ್ ಜಿ. ನಾಯಕ್, ಪಾಂಡುರಂಗ ಕರ್ಕೇರ, ಸಂದೇಶ್, ಶರಣ್ ಮಟ್ಟು ಇದ್ದರು.

ಡಿಸಿ, ಎಸ್‌ಪಿ ಜತೆ ಸಭೆ: ಮೆಂಡನ್‌

ಪ್ರತಿಭಟನಾ ಸ್ಥಳಕ್ಕೆ ಬಂದ ಶಾಸಕ ಲಾಲಾಜಿ ಮೆಂಡನ್ ಮಾತನಾಡಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಒಂದೆರಡು ದಿನಗಳಲ್ಲಿ ಸಭೆ ನಡೆಸಿ, ಚರ್ಚಿಸಿ ಹೆಜಮಾಡಿ ಟೋಲ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು. ಪೊಲೀಸರು ಕೂಡ ಮಾನವೀಯತೆಯಿಂದ ವರ್ತಿಸಿ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.

ಗುಡ್ಡೆಯಂಗಡಿ ಬಳಿ ನಿರ್ಮಾಣವಾಗುತ್ತಿರುವ ಟೋಲ್‌ಗೇಟ್ ಕಾಮಗಾರಿಯನ್ನು ಜಿಲ್ಲಾಧಿಕಾರಿಯೊಂದಿಗೆ ಸಭೆ ನಡೆಸುವವರೆಗೆ ಸ್ಥಗಿತಗೊಳಿಸುವಂತೆ ಪೊಲೀಸರಿಗೆ ಆದೇಶಿಸಿದರು. ಅದರಂತೆ ಕಾಮಗಾರಿ ಸ್ಥಗಿತಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT