ಮಂಗಳವಾರ, ಜನವರಿ 31, 2023
18 °C

ಚಿಂತಾಮಣಿ ತಾಲ್ಲೂಕಿಗೆ 2 ಸಾವಿರ ಮನೆ ಮಂಜೂರು: ಶಾಸಕ ಎಂ. ಕೃಷ್ಣಾರೆಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ನಗರದ ಕಾಲೊನಿಗಳಲ್ಲಿ ಹಕ್ಕುಪತ್ರ ಪಡೆದಿರುವ ಫಲಾನುಭವಿಗಳು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಿದ ನಂತರ ನಗರಸಭೆಯಲ್ಲಿ ಖಾತೆ ಮಾಡಿಸಿಕೊಳ್ಳಬೇಕು ಎಂದು ಶಾಸಕ ಎಂ. ಕೃಷ್ಣಾರೆಡ್ಡಿ ಸಲಹೆ ನೀಡಿದರು.

ಶನಿವಾರ ನಗರಸಭೆ ಮತ್ತು ರಾಜ್ಯ ಕೊಳಚೆ ನಿರ್ಮೂಲನಾ ಮಂಡಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇಲ್ಲಿನ ಟಿಪ್ಪುನಗರದ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಅವರು ಮಾತನಾಡಿದರು.

ವಸತಿ ಸಚಿವ ಸೋಮಣ್ಣ ಬಡವರಿಗೆ ಮನೆ ಮಂಜೂರು ಮಾಡಿಸಿಕೊಡುವಲ್ಲಿ ಸಹಕಾರ ನೀಡಿದ್ದಾರೆ. ಕ್ಷೇತ್ರದ 29 ಗ್ರಾಮ ಪಂಚಾಯಿತಿಗಳಿಗೆ 2 ಸಾವಿರ ಮನೆಗಳು ಹಾಗೂ ನಗರ ಪ್ರದೇಶಕ್ಕೆ ಒಂದು ಸಾವಿರ ಮನೆಗಳನ್ನು ಮಂಜೂರು ಮಾಡಿಕೊಟ್ಟಿದ್ದಾರೆ. ಅಧಿಕಾರಿಗಳು ಬೆಳಗಾವಿ ಅಧಿವೇಶನದಲ್ಲಿದ್ದ ಕಾರಣ ತಡವಾಗಿದೆ. ಶೀಘ್ರವೇ, ಅರ್ಹ ಫಲಾನುಭವಿಗಳನ್ನು ಗುರುತಿಸುವ ಪ್ರಕ್ರಿಯೆ ನಡೆಯಲಿದೆ ಎಂದು ಭರವಸೆ ನೀಡಿದರು.

ನಗರದಲ್ಲಿ 18 ಕಾಲೊನಿಗಳಿವೆ. ಈ ಪೈಕಿ 12 ಅಧಿಕೃತ ಕಾಲೊನಿಗಳಾಗಿವೆ. ಇವುಗಳನ್ನು ಕೊಳಚೆ ನಿರ್ಮೂಲನಾ ಮಂಡಳಿಗೆ ಹಸ್ತಾಂತರಿಸಲಾಗಿದೆ. ಉಳಿದ ಕಾಲೊನಿಗಳನ್ನು ಹಸ್ತಾಂತರಿಸಬೇಕಾಗಿದೆ ಎಂದರು.

ಕಳೆದ 30 ವರ್ಷಗಳಿಂದ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ಸಾಧ್ಯವಾಗಿರಲಿಲ್ಲ. ಯಾವುದೇ ದಾಖಲೆಗಳಿಲ್ಲದೆ ಫಲಾನುಭವಿಗಳು ಹತಾಶರಾಗಿದ್ದರು. ಎಲ್ಲಾ ಸರ್ಕಾರದ ಅವಧಿಯಲ್ಲಿ ಪ್ರಯತ್ನಗಳಾಗಿದ್ದರೂ ಹಕ್ಕುಪತ್ರಗಳು ದೊರೆತಿರಲಿಲ್ಲ. ಸಚಿವ ಸೋಮಣ್ಣ ಅವರ ಅವಧಿಯಲ್ಲಿ ಹಕ್ಕುಪತ್ರ ನೀಡುತ್ತಿರುವುದು ಸಂತಸ ತಂದಿದೆ ಎಂದರು.

ನಗರಸಭೆ ಅಧ್ಯಕ್ಷೆ ರೇಖಾ ಉಮೇಶ್ ಮಾತನಾಡಿ, ನಗರದ ನಾಲ್ಕು ಕಾಲೊನಿಗಳಲ್ಲಿ ಹಕ್ಕುಪತ್ರ ವಿತರಿಸಲಾಗಿದೆ. 2006 ಮತ್ತು 2009ರಲ್ಲಿ ಅಂದಿನ ಶಾಸಕ ಡಾ.ಎಂ.ಸಿ. ಸುಧಾಕರ್ ಕಾಲೊನಿಗಳನ್ನು ಕೊಳಚೆ ನಿರ್ಮೂಲನಾ ಮಂಡಳಿಗೆ ಸೇರಿಸಲು ಪ್ರಸ್ತಾವ ಸಲ್ಲಿಸಿದ್ದರು. ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳು ಅವರಿಗೂ ದೊರೆಯಬೇಕೆಂದು ಸತತವಾಗಿ ಒತ್ತಡ ಹಾಕಿದ್ದರು. ಕಾನೂನು ಪ್ರಕ್ರಿಯೆ ಪರಿಪಾಲಿಸಿ ಅಧಿಕೃತವಾಗಿ ಕಾಲೊನಿಗಳಾಗಿ ಘೋಷಿಸಲಾಯಿತು. ಅಂದಿನಿಂದ ಹಕ್ಕುಪತ್ರಗಳನ್ನು ನೀಡುವ ಪ್ರಕ್ರಿಯೆ ಆರಂಭವಾಯಿತು ಎಂದು ತಿಳಿಸಿದರು.

ನಗರದ ವಾರ್ಡ್ ನಂ. 15ರ ಟಿಪ್ಪುನಗರದ ಅರ್ಹ 270 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು. ಹಕ್ಕುಪತ್ರ ವಿತರಣೆಗಾಗಿ ಫಲಾನುಭವಿಗಳು ಮಂಡಳಿಗೆ ನೀಡಬೇಕಾಗಿದ್ದ ಶುಲ್ಕವನ್ನು ನಗರಸಭೆಯಿಂದಲೇ ಭರಿಸಲಾಗಿತ್ತು.

ನಗರಸಭೆ ಉಪಾಧ್ಯಕ್ಷೆ ಸುಹಾಸಿನಿ ರೆಡ್ಡಿ, ಸದಸ್ಯೆ ರಬಿಯಾ ಸುಲ್ತಾನಾ, ಕಲಾವತಿ, ಮಹಮ್ಮದ್ ಶಫೀಕ್, ಸಿ.ಕೆ. ಶಬ್ಬೀರ್, ಹರೀಶ್, ಮಾಜಿ ಸದಸ್ಯ ಅಲ್ಲಾ ಭಕಾಶ್, ಮುಂಡರಾದ ಚಾಂದ್ ಪಾಷಾ, ಸರ್ದಾರ್, ಸಿದ್ದಿ‌ಕ್ ಪಾಷಾ, ನದೀಮ್ ಪಾಷಾ, ರೋಷನ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.