ಗುರುವಾರ , ಜನವರಿ 28, 2021
28 °C

425 ಕೊರೊನಾ ವಾರಿಯರ್ಸ್‌ಗೆ ಕೋವಿಡ್ ಲಸಿಕೆ: ಟಿಎಚ್‌ಒ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಡಿಬಂಡೆ: ‘ಪಲ್ಸ್‌ ಪೋಲಿಯೋ ಕಾರ್ಯಕ್ರಮದ ನಂತರ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಕೊರೊನಾ ವಾರಿಯರ್ಸ್‌ ಸೇರಿ 425 ಮಂದಿಗೆ ಕೋವಿಡ್ ಲಸಿಕೆ ನೀಡಲಾಗುವುದು’ ಎಂದು ತಾಲ್ಲೂಕು ಅರೋಗ್ಯಾಧಿಕಾರಿ ಡಾ.ನರಸಿಂಹಮೂರ್ತಿ ತಿಳಿಸಿದರು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

‘ಕೊರೊನಾ ಸೋಂಕು ತಡೆಯಲು ಮುಂಜಾಗ್ರತೆ ಕಾರ್ಯದಲ್ಲಿರುವ ಆರೋಗ್ಯ ಸಿಬ್ಬಂದಿ ಹಾಗೂ ಕೊರೊನಾ ವಾರಿಯರ್‌ಗಳನ್ನು ಮೊದಲ ಹಂತದಲ್ಲಿ ಗುರುತಿಸಲಾಗಿದೆ. ಚುನಾವಣಾ ಮತದಾನದ ಮಾದರಿಯಲ್ಲಿ ತಾಲ್ಲೂಕಿನಲ್ಲಿ 5 ಕೇಂದ್ರಗಳಿರುತ್ತವೆ. ಒಂದು ಕೇಂದ್ರದಲ್ಲಿ ಐವರು ಸಿಬ್ಬಂದಿ ಕೆಲಸ ನಿರ್ವಹಿಸಲಿದ್ದು, ಆಯ್ಕೆ ಪಟ್ಟಿಯಂತೆ ಲಸಿಕೆ ನೀಡಲಾಗುವುದು.ನಂತರ 30 ನಿಮಿಷಗಳ ಕಾಲ ಕೊಠಡಿಯಲ್ಲಿ ವಿಶ್ರಾಂತಿ ನೀಡಿ ನಂತರ ಹೊರಗೆ ಕಳುಹಿಸಲಾಗುವುದು. ಎರಡನೇ ಹಂತದಲ್ಲಿ ತಾಲ್ಲೂಕಿನ 50 ವರ್ಷಕ್ಕೂ ಮೇಲ್ಪಟ್ಟವರನ್ನು ಗುರುತಿಸಿ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು. ಸರ್ಕಾರ 5 ಕೋಟಿ ಜನರಿಗೆ ಲಸಿಕೆ ನೀಡಲಿದೆ’ ಎಂದರು.

ತಹಶೀಲ್ದಾರ್ ಸಿಗಬತ್ ಉಲ್ಲಾ ಮಾತನಾಡಿ, ‘ತಂಬಾಕು ಸೇವನೆ ನಿಯಂತ್ರಣಕ್ಕಾಗಿ ಸರ್ಕಾರ ಕೋಟ್ಪಾ ಕಾಯ್ದೆ ಜಾರಿಗೆ ತರಲಾಗಿದೆ. ಅದರಂತೆ ಸಾರ್ವಜನಿಕ ಸ್ಥಳಗಳಲ್ಲಿ ಜನರು ಧೂಮಪಾನ ಮಾಡುವುದು ಹಾಗೂ ತಂಬಾಕು ಪದಾರ್ಥಗಳನ್ನು 18 ವರ್ಷದೊಳಗಿನವರಿಗೆ ಮಾರಾಟ ಮಾಡುವುದು ಕಾನೂನು ಬಾಹಿರ. ಉಲ್ಲಂಘನೆ ಮಾಡುವವರಿಗೆ ದಂಡದ ಜತೆಗೆ ಜೈಲುಶಿಕ್ಷೆ ವಿಧಿಸಲಾಗುತ್ತದೆ’ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶಪ್ಪ ಮಾತನಾಡಿ, ‘ರಾಷ್ಟ್ರೀಯ ಬಾಲಸ್ವಾಸ್ಥ ಕಾರ್ಯಕ್ರಮದ ಅಂಗವಾಗಿ ತಾಲ್ಲೂಕಿನಲ್ಲಿ ಅಂಗನವಾಡಿ, ಶಾಲಾ ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಿ ಅನಾರೋಗ್ಯಕ್ಕೆ ಒಳಗಾದವರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದರು.

ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಮಂಜುನಾಥ ಮಾತನಾಡಿ, ‘ತಂಬಾಕು ನಿಯಂತ್ರಣದ ಅಂಗವಾಗಿ ತಾಲ್ಲೂಕು ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ. ಧೂಮಪಾನ ಮಾಡುವವರಿಗೆ ಹಾಗೂ ತಂಬಾಕು ಸೇವನೆ ಮಾಡುವವರಿಗೆ ಜ.11ರಂದು ವಿದ್ಯಾರ್ಥಿಗಳು ಗುಲಾಬಿ ಹೂವು ನೀಡುವ ಆಂದೋಲನ ಹಮ್ಮಿಕೊಳ್ಳಲಾಗಿದೆ’ ಎಂದರು.

ಸಮಾಜ ಕಲ್ಯಾಣ ಇಲಾಖೆ ಎಡಿಎ ನಟರಾಜ್, ರೇಷ್ಮೆ ಇಲಾಖೆ ಅಧಿಕಾರಿ ಮುನಿಸ್ವಾಮಿ, ಸಿಡಿಪಿಒ ವೆಂಕಟೇಶಗೌಡ, ಬಾಲಸ್ವಾಸ್ಥ ಯೋಜನೆಯ ವೈದ್ಯಾಧಿಕಾರಿಗಳು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.